Site icon Vistara News

Healthy Politics | ಎಷ್ಟೊಂದು ಬ್ಯುಸಿ ಇರ್ತಾರೆ‌, ಆದರೂ ಕಾಳಜಿ ತೋರಿಸ್ತಾರೆ!

Healthy Politics

ಬೆಂಗಳೂರು: ರಾಜಕಾರಣದಲ್ಲಿ ನಾಯಕರು ಯಾವಾಗಲೂ ಚುನಾವಣೆಯಲ್ಲಿ ಬ್ಯುಸಿಯಾಗಿರುತ್ತಾರೆ. ಹಾಗೇ ಬೇರೆ ವಿಷಯಗಳಿಗೆ ಡೋಂಟ್‌ ಕೇರ್‌ ಎನ್ನುತ್ತಾರೆ. ಯಾವಾಗ ಚುನಾವಣೆ ನಡೆಯುತ್ತದೆ, ಯಾವಾಗ ಅಧಿಕಾರಕ್ಕೆ ಬರುತ್ತೇವೆ ಎನ್ನುವುದೇ ಅವರ ಜಪ.

ಆದರೆ ಇಷ್ಟೆಲ್ಲದರ ನಡುವೆಯೂ ರಾಜಕೀಯ ನಾಯಕರು ತೋರಿಸುವ ಕಾಳಜಿ ಸನ್ನಿವೇಶಗಳು (Healthy Politics) ಅನೇಕ ತಪ್ಪು ತಿಳಿವಳಿಕೆಗಳಿಗೆ ಫುಲ್‌ಸ್ಟಾಪ್‌ ಇಡುವಂತೆ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹ ಮೂರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ.

ನಿತಿನ್‌ ಗಡ್ಕರಿ ಓಪನ್‌ ಆಫರ್‌

ಇತ್ತೇಚಿಗೆ ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್‌ ಫಿರೋಜಿಯಾ ಸುದ್ದಿಯಾಗಿದ್ದರು. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಸಚಿವ ನಿತಿನ್‌ ಗಡ್ಕರಿ ನೀಡಿದ ಒಂದು ಸವಾಲು ಮತ್ತು ಒಡ್ಡಿದ ಆಮಿಷದಿಂದಾಗಿ ಅನಿಲ್‌ ಫಿರೋಜಿಯಾ ತಮ್ಮ ತೂಕ ಇಳಿಸಲು ಮುಂದಾಗಿದ್ದರು. ಸಚಿವ ನಿತಿನ್‌ ಗಡ್ಕರಿ ಆಮಿಷವೊಡ್ಡಿದ್ದು ಹೌದಾದರೂ ಅದೂ ಕೂಡ ಒಂದೊಳ್ಳೆ ಆಮಿಷವೇ ಆಗಿತ್ತು.

ಇದನ್ನೂ ಓದಿ | Modi in karnataka | ಮೋದಿ ಮೈಸೂರು ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಸಾಧ್ಯತೆ

ಅನಿಲ್‌ ಫಿರೋಜಿಯಾ 127 ಕೆ.ಜಿ ತೂಕ ಇದ್ದರು. ಫೆಬ್ರವರಿಯಲ್ಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರು ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಸಚಿವರು ಹೀಗೆ ಮಾತನಾಡುತ್ತ ʼನಿಮ್ಮ ತೂಕ ತುಂಬ ಜಾಸ್ತಿಯಾಯಿತು. ನೀವು ತೂಕ ಇಳಿಸಬೇಕು. ನೀವು ಇಳಿಸುವ ಪ್ರತಿ ಕೆಜಿಗೂ ನನ್ನ ಸಚಿವಾಲಯದಿಂದ 1000 ಕೋಟಿ ರೂ. ಕೊಡುತ್ತೇನೆ. ಒಟ್ಟಾರೆ ಎಷ್ಟು ಕೆಜಿ ಇಳಿಸುತ್ತೀರೋ ಅಷ್ಟು ಹಣ ಸಿಗುತ್ತದೆ. ಇದರಿಂದ ನಿಮ್ಮ ಕ್ಷೇತ್ರದಲ್ಲೂ ರಸ್ತೆ-ಹೆದ್ದಾರಿ ಅಭಿವೃದ್ಧಿ ಮಾಡಿಕೊಳ್ಳಬಹುದು ನೋಡಿʼ ಎಂದು ಹೇಳಿದ್ದರು. ಆಗ ಅದೊಂದು ತಮಾಷೆಯಾಗಿ ಕಂಡಿತ್ತು. ಆದರೆ ಅದನ್ನು ಅನಿಲ್‌ ಫಿರೋಜಿಯಾ ತುಂಬಾ ಗಂಭೀರವಾಗಿ ಪರಿಗಣಿಸಿದ್ದರು. ಕಳೆದ 4 ತಿಂಗಳಲ್ಲಿ 15 ಕೆ.ಜಿ ಇಳಿಸಿದ್ದರು. ಅಷ್ಟಾದರೂ ಅವರ ತೂಕ 100ರ ಮೇಲೆ ತೂಗುತ್ತಿದ್ದು, ಆದಷ್ಟು ಬೇಗ ನೂರರ ಒಳಗೆ ಬರುವುದಾಗಿಯೂ ಹೇಳಿಕೊಂಡಿದ್ದರು. ದಿನದಲ್ಲಿ 2-3 ತಾಸು ವರ್ಕೌಟ್‌ ಮಾಡಿ, ಸೈಕ್ಲಿಂಗ್‌, ಸ್ವಿಮ್ಮಿಂಗ್‌ ಮಾಡಿ ಬೆವರು ಸುರಿಸುತ್ತಿದ್ದಾರೆ.

ಮಮತಾ ಬ್ಯಾನರ್ಜಿ ʼಮಧ್ಯಪ್ರದೇಶʼ ಚರ್ಚೆ

ಇನ್ನು ಮಮತಾ ಬ್ಯಾನರ್ಜಿ ಎಂಬ ಹೆಸರು ಕೇಳಿದ ಕೂಡಲೇ ಬುಸುಗುಟ್ಟುವ ಹಾವು ನೆನಪಾಗುತ್ತದೆ. ಸಾರ್ವಜನಿಕ ಸಭೆಗಳಲ್ಲಿ ಅವರು ತೋರಿಸುವ ದರ್ಪ, ಸದಾ ಗಂಟಿಕ್ಕಿಕೊಂಡಿರುವ ಮುಖ, ದುಡು ದುಡು ನಡಿಗೆ ಅವರ ಬಗ್ಗೆ ಬೇರೆಯೇ ಆದ ಕಲ್ಪನೆ ಮೂಡಿಸುತ್ತದೆ. ಆದರೆ, ಅವರು ಜೋಕ್‌ ಮಾಡಬಲ್ಲರು, ಕಾರ್ಯಕರ್ತರ ಜತೆ ಖುಷಿಯಾಗಿ ಮಾತಾಡಬಲ್ಲರು, ಅವರ ಯೋಗ ಕ್ಷೇಮವನ್ನು ಪ್ರೀತಿಯಿಂದ ವಿಚಾರಿಸಿಕೊಳ್ಳಬಲ್ಲರು ಅನ್ನುವ ಸಂಗತಿ ಹೆಚ್ಚಿನ ಜನರಿಗೆ ಗೊತ್ತಿಲ್ಲ.

ಇತ್ತೀಚೆಗೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ಜತೆ ಮಮತಾ ಬ್ಯಾನರ್ಜಿ ನಡೆಸಿದ ಮೀಟಿಂಗ್‌ನಲ್ಲಿ ಸುಮಾರು 60 ವರ್ಷದ ಕಾರ್ಯಕರ್ತರೊಬ್ಬರು ಮಾತನಾಡಲು ಎದ್ದು ನಿಂತಾಗ ಅವರ ದೊಡ್ಡ ಹೊಟ್ಟೆಯನ್ನು ನೋಡಿ ಮಮತಾ ಆಡಿತ ಮಾತು ಮಜವಾಗಿತ್ತು. ಮುನ್ಸಿಪಾಲಿಟಿ ಸದಸ್ಯರಾಗಿರುವ ಈ ವ್ಯಕ್ತಿ 125 ಕೆಜಿ ಇದ್ದಾರಂತೆ.

ʻʻನಿಮ್ಮ ಹೊಟ್ಟೆ ಬೆಳೆಯುತ್ತಿರುವ ರೀತಿ ನೋಡಿದ್ರೆ ನೀವು ಯಾವುದೇ ಟೈಮಲ್ಲಿ ಬಿದ್ದೋಗ್ಬೋದು ಅನಿಸುತ್ತದೆ, ಏನು ಹುಷಾರಿಲ್ವಾ ನಿಮ್ಗೆ?ʼ ಎಂದು ಪ್ರಶ್ನಿಸಿದರು. ಇದನ್ನು ಸ್ಪೋರ್ಟಿವ್‌ ಆಗಿ ಸ್ವೀಕರಿಸಿದ್ದ ಕಾರ್ಯಕರ್ತ ʻನಂಗೆ ಶುಗರೂ ಇಲ್ಲ, ಬಿಪಿಯೂ ಇಲ್ಲʼ ಎಂದರು. ಮುಂದೆ ಸ್ವಲ್ಪ ಹೊತ್ತು ತಾನು ಹೇಗೆಲ್ಲ ವರ್ಕೌಟ್‌ ಮಾಡ್ತಾ ಇದ್ದೇನೆ ಎನ್ನುವುದನ್ನು ವಿವರಿಸಿದ್ದರು. ಆದರೆ, ಮಮತಾ ಬ್ಯಾನರ್ಜಿ ಅಷ್ಟಕ್ಕೆ ಬಿಡುವುದೇ ಇಲ್ಲ! ಕಾರ್ಯಕರ್ತರ ಮಾತನ್ನು ಆಸಕ್ತಿಯಿಂದ ಆಲಿಸುವ ಮಮತಾ, ʻʻಏನೋ ಸಮಸ್ಯೆ ಇದೆ ಅನಿಸುತ್ತಿದೆ ನಂಗೆ. ಅದಲ್ಲವಾದರೆ ನಿಮಗೆ ಅಷ್ಟು ದೊಡ್ಡ “ಮಧ್ಯಪ್ರದೇಶʼ ಇರೋಕೆ ಹೇಗೆ ಸಾಧ್ಯʼ ಎಂದಿದ್ದರು.

ಇದನ್ನೂ ಓದಿ | ರಾಷ್ಟ್ರಪತಿ ಚುನಾವಣೆ; ಮಮತಾ ಬ್ಯಾನರ್ಜಿ ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ಒಪ್ಪಿಗೆ

ಎಂಟಿಬಿ ಸಣಕಲಾಗಿದ್ದನ್ನು ಗಮನಿಸಿದ ಮೋದಿ

ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸೋಮವಾರ ಸಿಎಂ ಬೊಮ್ಮಾಯಿ, ರಾಜ್ಯಪಾಲರ ಜತೆಗೆ ಸಚಿವ ಎಂಟಿಬಿ ನಾಗರಾಜ್ ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂಟಿಬಿ ಅವರ ಬಳಿ ಆಗಮಿಸಿದ ಮೋದಿ, “ಕ್ಯಾ ಆಪ್ ಇತನಾ ಪತ್ಲಾ ಹೋ?ʼ (ಏಕಿಷ್ಟು ಸಣಕಲಾಗಿದ್ದೀರ?) ಎಂದು ಎಂಟಿಬಿ ಅವರ ಹೆಗಲ ಮೇಲೆ ಕೈಯಿಟ್ಟು ಪ್ರಶ್ನಿಸಿದರು! ಕೂಡಲೆ ಎಂಟಿಬಿ ನಾಗರಾಜ್‌ ಸಹ ಹಿಂದಿಯಲ್ಲೆ ಉತ್ತರಿಸಿದರು. ʼಯೋಗ ಔರ್ ಸ್ವಿಮ್ಮಿಂಗ್ ಕರ್ ರಹಾ ಹೂಂ. ಇಸ್ ಲಿಯೇ ಮೇ ಪತ್ಲಾ ಲಗ್ತಾ ಹೂಂʼ(ನಾನು ಯೋಗ ಮತ್ತು ಸ್ವಿಮ್ಮಿಂಗ್‌ ಮಾಡುತ್ತಿದ್ದೇನೆ. ಅದಕ್ಕಾಗಿ ಇಷ್ಟು ತೆಳ್ಳಗಿದ್ದೇನೆ) ಎಂದಿದ್ದಾರೆ. ಇದಕ್ಕೆ , “ಅಚ್ಚಾʼ(ಆಗಲಿ) ಎನ್ನುತ್ತ ನಕ್ಕ ಪ್ರಧಾನಿ ಮೋದಿ, ಸಚಿವರ ಹವ್ಯಾಸಗಳಿಗೆ ಮೆಚ್ಚುಗೆ ಸೂಚಿಸುತ್ತ ಮುಂದೆ ಸಾಗಿದರು.

ಹೀಗೆ ರಾಜಕೀಯ ನಾಯಕರು ತಮ್ಮ ಕೆಲಸದ ನಡುವೆಯೂ ಕಾರ್ಯಕರ್ತರು ಹಾಗೂ ಕೆಳಹಂತದ ನಾಯಕರ ಮೇಲೆ ತೋರುವ ಕಾಳಜಿಯಿಂದಾಗಿಯೇ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ.

ಇದನ್ನೂ ಓದಿ | ಬಿಜೆಪಿಲ್ಲಿ ಗುಂಪುಗಾರಿಕೆ ಇಲ್ಲ: ಸಚಿವ ಎಂಟಿಬಿ ನಾಗರಾಜು

Exit mobile version