Site icon Vistara News

Heart attack | ಕೇವಲ 12 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮಲಗಿದ್ದಾಗಲೇ ಕಾಡಿತು ಎದೆ ನೋವು

heart attack keerthan

ಮಡಿಕೇರಿ: ಕೇವಲ ೧೨ ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ (Heart attack) ಪ್ರಾಣ ಕಳೆದುಕೊಂಡಿದ್ದಾನೆ. ಮನೆಯಲ್ಲಿ ಮಲಗಿದ್ದ ವೇಳೆ ಒಮ್ಮಿಂದೊಮ್ಮೆಗೇ ಎದೆನೋವು ಕಾಣಿಸಿಕೊಂಡಿದ್ದು, ನೋವಿನಿಂದ ನರಳಿ ಮಂಚದಿಂದ ಕೆಳಗೆ ಉರುಳಿ ಬಿದ್ದು ಮೃತಪಟ್ಟಿದ್ದಾನೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರಿನ ನಿವಾಸಿಯಾಗಿರುವ ಕೀರ್ತನ್‌ (೧೨) ಎಂಬಾತನೇ ಮೃತಪಟ್ಟ ಬಾಲಕ. ಕೂಡುಮಂಗಳೂರು ಗ್ರಾಮದ ಚಾಲಕ ಮಂಜಾಚಾರಿ ಅವರ ಪುತ್ರ ಕುಶಾಲನಗರ ಸಮೀಪದ ಕೊಪ್ಪಭಾರತ ಮಾತಾ ಶಾಲೆಯ ಆರನೇ ತರಗತಿ ವಿದ್ಯಾರ್ಥಿ.

ಶನಿವಾರ ರಾತ್ರಿ ಎಂದಿನಂತೆ ಮಲಗಿದ್ದ ಕೀರ್ತನ್‌ಗೆ ತಡರಾತ್ರಿ ಎದೆ ನೋವು ಕಾಣಿಸಿಕೊಂಡಿದೆ. ಎರಡು ಬಾರಿ ಎದೆನೋವು ಕಾಣಿಸಿಕೊಂಡಿದ್ದ ಆತ ನೋವು ತಡೆಯಲಾಗದೆ ಕೆಳಗೆ ಉರುಳಿಬಿದ್ದಿದ್ದಾನೆ, ಜೋರಾಗಿ ಕಿರುಚಿಕೊಂಡಿದ್ದಾನೆ. ಕೂಡಲೇ ಆತನನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಯಲ್ಲೇ ಕೊನೆಯುಸಿರು ಎಳೆದಿದ್ದಾನೆ.

ಕೀರ್ತನ್‌ ತಂದೆ ಮಂಜಾಚಾರಿ ಅವರು ಕೀರ್ತನ್‌ ಓದುತ್ತಿರುವ ಭಾರತ ಮಾತಾ ಶಾಲೆಯಲ್ಲೇ ಬಸ್‌ ಚಾಲಕರಾಗಿ ದುಡಿಯುತ್ತಿದ್ದಾರೆ. ಕೀರ್ತನ್‌ನ ಸಾವು ಮನೆ ಮತ್ತು ಶಾಲೆಯ ವಿದ್ಯಾರ್ಥಿಗಳಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳು ಹೃದಯಾಘಾತದಿಂದ ಮೃತಪಡುವ ನಿದರ್ಶನ ಇತ್ತೀಚಿನ ದಿನಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Children heart attack | 13 ವರ್ಷದ ಬಾಲಕ ಹೃದಯಾಘಾತದಿಂದ ನಿಧನ, ಶಾಲೆಯಲ್ಲೇ ಕುಸಿದುಬಿದ್ದು ಉಸಿರು ಚೆಲ್ಲಿದ!

Exit mobile version