Site icon Vistara News

Heat Stroke: ಬಿಸಿಲಿನ ಆಘಾತ ಹೆಚ್ಚಳ, ಹೊರಗೆ ಹೋಗುವಾಗ ಎಚ್ಚರ ವಹಿಸಿ

hot june

ಬೆಂಗಳೂರು: ರಾಜಧಾನಿ ಹಾಗೂ ರಾಜ್ಯದ ಹಲವು ಕಡೆ ಹೀಟ್‌ ಸ್ಟ್ರೋಕ್‌ನಿಂದ ಆಸ್ಪತ್ರೆ ಸೇರುತ್ತಿರುವ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಹೊರಗೆ ಬಿಸಿಲಿನಲ್ಲಿ ಓಡಾಡುವಾಗ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ (health alert) ನೀಡಿದೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಹಾಗೂ ಬೀದಿ ಪ್ರಚಾರಗಳು ಹೆಚ್ಚುತ್ತಿವೆ. ಆದರೆ ಬಿಸಿಲಿನ ಝಳ ಪ್ರಖರವಾಗುತ್ತಿದೆ. ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಬಂದಿದ್ದರೂ ಬಿಸಿಲಿನ ಝಳ ಕಡಿಮೆಯಾಗಿಲ್ಲ. ಹೀಗಾಗಿ ಎಲೆಕ್ಷನ್ ಕ್ಯಾಂಪೇನ್ ಅಥವಾ ಸಭೆ, ಸಮಾರಂಭಗಳಿಗೆ ಹೋಗುವವರು ಹುಷಾರಾಗಿರಬೇಕು. ವಯಸ್ಕರು, ಮಕ್ಕಳು ಹಾಗೂ ದುರ್ಬಲ ದೇಹಪ್ರಕೃತಿಯವರಿಗೆ ಹೀಟ್ ಸ್ಟ್ರೋಕ್ ಆಘಾತ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಈ ಬಗೆಗೆ ಸೂಚನೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಕೂಡ ಅಲರ್ಟ್ ಮಾಡಿದೆ.

ಹೀಟ್‌ ಸ್ಟ್ರೋಕ್‌ ಕಾರಣದಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಅನಗತ್ಯವಾಗಿ ಹೊರಗೆ ಓಡಾಡದಿರಿ. ಹೊರಗೆ ಹೋಗುವುದು ಅನಿವಾರ್ಯವಾದರೆ ಹೆಚ್ಚು ಸಮಯ ನೆರಳಿನಲ್ಲಿರಿ. ಸಭೆ ಸಮಾರಂಭಗಳನ್ನು ಸಾಧ್ಯವಾದಷ್ಟೂ ಆಯೋಜನೆ ಮಾಡದಿರಿ ಅಥವಾ ಅವುಗಳಿಗೆ ಹೋಗದಿರಿ. ರ್ಯಾಲಿಗಳಿಗೆ ಹೋಗುವುದು ಕಡಿಮೆ ಮಾಡಿದರೆ ಉತ್ತಮ ಎಂದು ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ ನೀಡಿದೆ. ಪ್ರಚಾರ ಸಭೆ, ರ್ಯಾಲಿ ನಡೆಸುವ ಆಯೋಜಕರು ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ, ಏರ್‌ಕಂಡೀಷನರ್ ವ್ಯವಸ್ಥೆ ಮಾಡಬೇಕು ಹಾಗೂ ತಪ್ಪದೆ ಶಾಮಿಯಾನ ಪೆಂಡಾಲ್ ಹಾಕಿಸಬೇಕು ಎಂದು ಸೂಚಿಸಿದೆ.

ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ:

ಬಿಸಿಲಿನಲ್ಲಿ ಹೆಚ್ಚು ಓಡಾಡಬೇಡಿ.
ಬಿಸಿಲಿನ ಕೆಲಸ ಅನಿವಾರ್ಯವಾದರೆ ತಲೆಗೆ ಟೊಪ್ಪಿ ಧರಿಸಿ.
ಸಾಕಷ್ಟು ನೀರು ಕುಡಿಯಿರಿ. ದ್ರವಾಹಾರ ಸೇವಿಸಿ.
ನೀರಿನಂಶ ಹೊಂದಿರುವ ಆಹಾರ ಹೆಚ್ಚು ಸೇವಿಸಿ.
ವಯಸ್ಕರು, ಮಕ್ಕಳು ಹಾಗೂ ದುರ್ಬಲ ದೇಹಪ್ರಕೃತಿಯವರು ಹೊರಗೆ ಹೋಗದಿರುವುದು ಉತ್ತಮ.
ದೇಹ ನಿರ್ಜಲೀಕರಣದ ಸೂಚನೆಗಳನ್ನು ನೀಡಿದರೆ ಅಲಕ್ಷಿಸಬೇಡಿ.

ಇದನ್ನೂ ಓದಿ: Heat stroke: ಹೀಟ್‌ಸ್ಟ್ರೋಕ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ!

Exit mobile version