ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾದಕ ದ್ರವ್ಯ ಜಾಲ ಇನ್ನಷ್ಟು ಗಟ್ಟಿಯಾಗುತ್ತಿರುವಂತೆ ಕಂಡುಬರುತ್ತಿದೆ. ಇದರ ಜತೆಗೆ ಇದು ಮಾದಕ ದ್ರವ್ಯಗಳ ಸಾಗಾಟದ ಕೇಂದ್ರ ಬಿಂದುವಾಗುತ್ತಿದೆಯೇ ಎಂಬ ಪ್ರಶ್ನೆಯೂ ಕಾಡಿದೆ. ಇದಕ್ಕೆ ಕಾರಣ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ ೧೧೨ ಕೋಟಿ ರೂ. ಮೌಲ್ಯದ ಹೆರಾಯಿನ್‌ನ್ನು ವಶಪಡಿಸಿಕೊಂಡಿರುವುದು.
ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರೈಲು ನಿಲ್ದಾಣಕ್ಕೆ ದಾಳಿ ನಡೆಸಿ ಕರ್ನಾಟಕ- ಕೇರಳ ಗಡಿ ಭಾಗದ ವ್ಯಕ್ತಿಯೊಬ್ಬನನ್ನು ಬಂಧಿಸಿದರು. ಆತನ ಬಳಿ ಇದ್ದ ಟ್ರಾಲಿಯಲ್ಲಿ ಸುಮಾರು ೧೬ ಕೆಜಿ ಹೆರಾಯಿನ್ ಪತ್ತೆಯಾಗಿದೆ. ೩೫ ವರ್ಷದ ಈ ಆರೋಪಿ ಇಥಿಯೋಪಿಯಾದಿಂದ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ರೈಲು ನಿಲ್ದಾಣಕ್ಕೆ ತಲುಪಿದ್ದ. ಈ ವೇಳೆ ಆಇತನನ್ನು ಹಿಡಿಯಲಾಗಿದೆ. ಆತ ರೈಲಿನ ಮೂಲಕ ದಿಲ್ಲಿಗೆ ಇದನ್ನು ತೆಗೆದುಕೊಂಡು ಹೋಗಲು ಪ್ಲ್ಯಾನ್ ಮಾಡಿದ್ದ.
ಇಥಿಯೋಪಿಯಾದ ಅದ್ದಿಸ್ ಅಬಾಡ ವಿಮಾನ ನಿಲ್ದಾಣದಿಂದ ಹೊರಟಿದ್ದ ಅತ ಶುಕ್ರವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಅಲ್ಲೇ ಅತನ ಮೇಲೆ ಸಂಶಯ ಬಂದಿತ್ತು. ಆಗ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಆತನನ್ನು ಹಿಂಬಾಲಿಸಿದ್ದರು. ಆತ ರೈಲು ನಿಲ್ದಾಣಕ್ಕೆ ಬಂದು ದಿಲ್ಲಿಗೆ ಹೋಗುವ ರೈಲು ಹತ್ತಲು ಅಣಿಯಾಗುತ್ತಿದ್ದಂತೆಯೇ ಆತನನ್ನು ಬಂಧಿಸಲಾಯಿತು.
ಆರೋಪಿ ಬ್ಯುಸಿನೆಸ್ ವೀಸಾದಲ್ಲಿ ಅದ್ದಿಸ್ ಅಬಾಡಕ್ಕೆ ಹೋಗಿದ್ದ. ಅಲ್ಲಿನ ಡ್ರಗ್ಸ್ ಮಾಫಿಯಾದ ಗ್ಯಾಂಗ್ ಆತನಿಗೆ ಒಂದು ಟ್ರಾಲಿಯನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ದಿಲ್ಲಿಗೆ ಒಯ್ಯುವ ಟಾಸ್ಕನ್ನು ನೀಡಿತ್ತು. ದಿಲ್ಲಿಯಲ್ಲಿ ರೈಲು ಇಳಿಯುತ್ತಿದ್ದಂತೆಯೇ ಅಲ್ಲಿ ಒಬ್ಬ ವ್ಯಕ್ತಿಯನ್ನು ಸಂಪರ್ಕಿಸುವಂತೆ ಫೋನ್ ನಂಬರ್ ನೀಡಲಾಗಿತ್ತು. ಈ ಕೆಲಸ ಮಾಡುವುದಕ್ಕಾಗಿ ಆತನಿಗೆ ಟಿಕೆಟ್ ಮಾತ್ರವಲ್ಲದೆ, ದೊಡ್ಡ ಮೊತ್ತವನ್ನು ನೀಡುವ ಭರವಸೆ ನೀಡಲಾಗಿತ್ತು.
ಇದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ದೇಶದೊಳಗೆ ಬಂದ ಮಾದಕ ದ್ರವ್ಯಗಳಲ್ಲೇ ಅತಿದೊಡ್ಡ ಮೊತ್ತದ್ದು ಎಂದು ಹೇಳಲಾಗಿದೆ.
ವಾರದಲ್ಲಿ ಎರಡನೇ ಬಾರಿ
ಕಳೆದ ಬುಧವಾರವಷ್ಟೇ ವಿಮಾನ ನಿಲ್ದಾಣ ಅಧಿಕಾರಿಗಳು ಇಥಿಯೋಪಿಯಾದಿಂದ ಬಂದ ೩೦ ವರ್ಷದ ಆಫ್ರಿಕನ್ ಪ್ರಜೆಯೊಬ್ಬನಿಂದ ೧೧ ಕೋಟಿ ರೂ. ಮೌಲ್ಯದ ಕೊಕೇನನ್ನು ವಶಪಡಿಸಿಕೊಂಡಿದ್ದರು. ಆತ ಕೂಡಾ ಬ್ಯುಸಿನೆಸ್ ವಿಸಾದ ಮೂಲಕವೇ ಇಥಿಯೋಪಿಯಾದಿಂದ ಭಾರತಕ್ಕೆ ಬಂದಿದ್ದ. ಆತನಿಗೂ ಬೆಂಗಳೂರಿಗೆ ಬಂದು ಅಲ್ಲಿಂದ ದಿಲ್ಲಿಗೆ ಹೋಗಿ ಡ್ರಗ್ಸ್‌ನ್ನು ನಿರ್ದಿಷ್ಟ ವ್ಯಕ್ತಿಗೆ ತಲುಪಿಸಲು ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ| Drug peddlers | ಸಿಲಿಕಾನ್ ಸಿಟಿಯಲ್ಲಿ ಡ್ರಗ್ ಪೆಡ್ಲರ್‌ಗಳ ಹಾವಳಿ : ಪೊಲೀಸರ ಮೆಗಾ ಕಾರ್ಯಾಚರಣೆ