Site icon Vistara News

Heavy Rain | ಹಾಸನದಲ್ಲಿ ಮರ ಬಿದ್ದು ಬೈಕ್‌ ಸವಾರ ಸಾವು, ಮಳೆ ಅಬ್ಬರಕ್ಕೆ ಪ್ರತ್ಯೇಕ ಕಡೆ ಐವರು ಬಲಿ

heavy rain

ವಿಜಯಪುರ: ಕೊಲ್ಹಾರ ಪಟ್ಟಣದ ಗರಸಂಗಿ ಹಳ್ಳದಲ್ಲಿ ಮೂರು ಎಮ್ಮೆಗಳು ಹರಿಯುವ ನೀರಿನಲ್ಲಿ (Heavy Rain) ಕೊಚ್ಚಿಕೊಂಡ ಹೋಗುತ್ತಿದ್ದಾಗ, ಅವುಗಳನ್ನು ಉಳಿಸಲು ಹೋಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಪಟ್ಟಣದ ರೈತ ನಂದಪ್ಪ ಸಂಗಪ್ಪ ಸೊನ್ನಾದ (65) ಮೃತಪಟ್ಟಿರುವ ದುರ್ದೈವಿ. ಜಮೀನಿನ ಪಕ್ಕದ ಹಳ್ಳದ ದಂಡೆಯಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕೊಲ್ಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ರೈತನೊಂದಿಗೆ ಎಮ್ಮೆಗಳೂ ನೀರು ಪಾಲಾಗಿವೆ.

ಬೃಹತ್‌ ಮರ ಬಿದ್ದು ಸ್ಥಳದಲ್ಲೇ ಬೈಕ್‌ ಸವಾರ ಸಾವು

ಹಾಸನ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಗಾಳಿಗೆ ಮರ ಬಿದ್ದು ಸ್ಥಳದಲ್ಲೇ ಬೈಕ್‌ ಸವಾರ ಮೃತಪಟ್ಟಿದ್ದಾನೆ. ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಲ್ಲಸೋಮನಹಳ್ಳಿ ಗ್ರಾಮದ ರಂಗ ಶೆಟ್ಟಿ (40) ಎಂಬುವರು ಬೈಕ್‌ನಲ್ಲಿ ಚನ್ನರಾಯಪಟ್ಟಣದಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಮರವೊಂದು ದಿಢೀರ್‌ ಉರುಳಿ ಬಿತ್ತು. ಮರ ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಮರದಡಿ ಸಿಲುಕಿ ಗಂಟೆಗಳ ಕಾಲ ನರಳಾಡಿ ಅವರು ಕೊನೆಯುಸಿರೆಳೆದರು.

ಎರಡು ಜೆಸಿಬಿ, ಹಿಟಾಚಿ ಯಂತ್ರ ಬಳಸಿ ಮರ ಸರಿಸಿ ಮೃತದೇಹವನ್ನು ಹೊರತೆಗೆಯಲಾಯಿತು. ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣವೆಂದು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಹಲವು ದಿನಗಳಿಂದ ಬೃಹತ್ ಮರ ತೆರವುಗೊಳಿಸಿ ಎಂದರೂ ತೆರವುಗೊಳಿಸಲಿಲ್ಲ. ಈ ಸಾವಿಗೆ ಯಾರು ಹೊಣೆ‌ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | Heavy Rain | ಮಳೆಯ ರಭಸಕ್ಕೆ ಸರ್ಕಾರಿ ಶಾಲೆಯ ಚಾವಣಿ ಕುಸಿತ, ಪಂಚಾಯಿತಿ ಕಟ್ಟದ ನೆಲಸಮ

ವೇದಾವತಿ ನದಿಯಲ್ಲಿ ಕಾಲು ಜಾರಿ ವೃದ್ಧೆ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿ ಬಳಿ ಇರುವ ವೇದಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರು ಹಾಲುಗೊಂಡನಹಳ್ಳಿಯ ಹನುಮಕ್ಕ(62) ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ತಹಸೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನದಿ ಪಾತ್ರದ ಗ್ರಾಮದ ಜನರು ಜಾಗರೂಕತೆ ವಹಿಸಲು ಸೂಚನೆ ನೀಡಲಾಗಿದ್ದು, ಜತೆಗೆ ವೇದಾವತಿ ನದಿ ಬಳಿಗೆ ತೆರಳದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

ರಾಮನಗರದ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕೊಟ್ಟಿಗೆಯ ಪಕ್ಕದಲ್ಲೇ ಶೆಡ್‌ವೊಂದರಲ್ಲಿ ಪರ್ಭಿನ್ (4), ಇಷಿಕಾ (3) ಮಕ್ಕಳು ಮಲಗಿದ್ದಾಗ ಗೋಡೆ ಕುಸಿದಿದೆ. ಮೀನಾ, ಮೋನಿಷಾ ಎಂಬುವರು ಗಾಯಗೊಂಡಿದ್ದಾರೆ. ಈ ಕುಟುಂಬದವರು ನೇಪಾಳ ಮೂಲದವರು ಎಂದು ತಿಳಿದು ಬಂದಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸತತ ಮಳೆಯಿಂದಾಗಿ ಕೊಟ್ಟಿಗೆ ಗೋಡೆ ಕುಸಿದಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ | Heavy Rain | ಸತತ ಮಳೆಗೆ ಭಟ್ಕಳದಲ್ಲಿ ಮತ್ತೆ ಗುಡ್ಡ ಕುಸಿತ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Exit mobile version