Site icon Vistara News

Rain News | ರಾಜ್ಯದ ವಿವಿಧೆಡೆ ಧಾರಾಕಾರ ಮಳೆ; ಹಲವು ಮನೆಗಳಿಗೆ ಹಾನಿ, ಜಮೀನಿಗೆ ನುಗ್ಗಿದ ನೀರು

Rain News

ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ (Rain News) ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಜಮೀನುಗಳಿಗೆ ನೀರು ನುಗ್ಗಿ ತೀವ್ರ ಬೆಳೆ ಹಾನಿಯಾಗಿವೆ. ಹಲವು ಕೆರೆಗಳು ಕೋಡಿ ಬಿದ್ದಿದ್ದು, ರಸ್ತೆಗಳು ಹಾಗೂ ಸೇತುವೆಗಳು ಜಲಾವೃತವಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಅಥಣಿ ತಾಲೂಕಿನಲ್ಲಿ ಉಕ್ಕಿ ಹರಿದ ಡೋಣಿಹಳ್ಳ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಭೀಕರ ಮಳೆಗೆ ಡೋಣಿಹಳ್ಳ ಉಕ್ಕಿ ಹರಿದಿದೆ. ಹೀಗಾಗಿ ಹಳ್ಳ ದಾಟಲು ಗ್ರಾಮಸ್ಥರು ಪರದಾಡುವಂತಾಗಿದೆ. ಶುಕ್ರವಾರ ಮುಂಜಾನೆ ಶಾಲೆಗೆ ಹೋಗಿದ್ದ ಮಕ್ಕಳು ಸಂಜೆ ಮನೆಗೆ ಬರಲಾಗದೆ ಪರದಾಡಿದರು. ಹಗ್ಗದ ಸಹಾಯದಿಂದ ಶಾಲಾ, ಕಾಲೇಜು ಮಕ್ಕಳನ್ನು ಗ್ರಾಮಸ್ಥರು ಹಳ್ಳ ದಾಟಿಸಿದ್ದು ಕಂಡುಬಂತು. ಇದು ಶಾಸಕ ಮಹೇಶ್ ಕುಮಟಳ್ಳಿಯವರ ಸ್ವಗ್ರಾಮವಾಗಿದೆ. “ಶಾಸಕರ ಗ್ರಾಮಕ್ಕೇ ಸರಿಯಾದ ರಸ್ತೆ ಸೌಕರ್ಯವಿಲ್ಲ. ಈ ಹಿಂದೆಯೂ ಡೋಣಿ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ” ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | ಶಾಸಕ ಯತ್ನಾಳ್‌ ವಿಜಯಪುರದ ಹುಲಿ ಎಂದ ಸಿಎಂ; ದ್ರಾಕ್ಷಿ ಮಾರುಕಟ್ಟೆ ಅಭಿವೃದ್ಧಿಗೆ ₹100 ಕೋಟಿ ಕೊಡಲೂ ಬದ್ಧ

ಲಕ್ಷ್ಮೇಶ್ವರದಲ್ಲಿ ಹಳ್ಳದ ನೀರಿನಲ್ಲಿ ಸಿಲುಕಿದ ಲಾರಿ
ಗದಗ: ಜಿಲ್ಲೆಯಲ್ಲಿ ವರುಣನಾರ್ಭಟ ಮುಂದುವರಿದಿದೆ. ಭಾರಿ ಮಳೆಯಿಂದ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಳ್ಳ ದೊಡ್ಡೂರು-ಲಕ್ಷ್ಮೇಶ್ವರ ನಡುವಿನ ಹಳ್ಳ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಗದಗದಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯೊಂದು ನೀರಿನ ರಭಸಕ್ಕೆ ಮುಂದೆ ಹೋಗಲಾರದೆ ಸಿಲುಕಿದ್ದರಿಂದ ಟ್ರ್ಯಾಕ್ಟರ್ ಸಹಾಯದಿಂದ ಲಾರಿಯನ್ನು ಹೊರಗೆ ಎಳೆಯಲಾಯಿತು.

ಧಾರಾಕಾರ ಮಳೆಗೆ ೧೧ ಮನೆಗಳಿಗೆ ಹಾನಿ
ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆಯೊಂದು ಬಲಿಯಾಗಿದೆ. ನವಲಗುಂದ ತಾಲೂಕಿನ ತಿರ್ಲಾಪೂರ ಹಾಗೂ ಆಹೆಟ್ಟಿ, ಮೊರಬ ಗ್ರಾಮದಲ್ಲಿ ಮಳೆಗೆ 11 ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ರಾತ್ರಿ ಎಡೆಬಿಡದೆ ಮಳೆ ಸುರಿದಿದ್ದರಿಂದ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳು ಪರದಾಡುವಂತಾಯಿತು. ಮಳೆಯಿಂದ ಕುಂದಗೋಳ ತಾಲೂಕಿನ ಚಾಕಲಬ್ಬಿ- ಸಂಶಿ ನಡುವಿನ ಹಳ್ಳ ತುಂಬಿಹರಿದ ಪರಿಣಾಮ ಚಾಕಲಬ್ಬಿಯಲ್ಲೇ ಬಸ್ ನಿಲ್ಲಿಸಲಾಗಿದೆ. ಹೀಗಾಗಿ ಸಂಶಿ ಗ್ರಾಮದಿಂದ ಚಾಕಲಬ್ಬಿಗೆ ಬಂದಿದ್ದ ವಿದ್ಯಾರ್ಥಿಗಳು ಮತ್ತೆ ವಾಪಸ್‌ ತೆರಳಲು ಸಾಧ್ಯವಾಗದೆ ಬಸ್‌ನಲ್ಲೇ ಊಟ ಮಾಡಿ ತಡರಾತ್ರಿವರೆಗೆ ಕಾಲ ಕಳೆದಿದ್ದಾರೆ.

ಗೋದಾಮಿನಲ್ಲೇ ಕೊನೆಯುಸಿರೆಳೆದ 60 ಕುರಿಗಳು
ಹುಬ್ಬಳ್ಳಿ: ಎಡೆಬಿಡದೆ ಸುರಿಯುತ್ತಿರುವ ಮಳೆಯ ಅವಾಂತರಕ್ಕೆ ನಗರದಲ್ಲಿ 60 ಕುರಿಗಳು ಮೃತಪಟ್ಟಿವೆ. ಕಳೆದ ರಾತ್ರಿ ಧಾರಾಕಾರ ಮಳೆ ಬಂದ ಕಾರಣ ಕುರಿಗಳು ತೊಯ್ದು ನಡಗುತ್ತಿದ್ದವು. ಹೀಗಾಗಿ ಕುರಿಗಳ ಮಾಲೀಕರು, ಅವುಗಳನ್ನು ಮಟನ್ ಮಾರುಕಟ್ಟೆಯ ಗೋದಾಮಿನ ಒಳಗೆ ಹಾಕಿ ಬಾಗಿಲು ಮುಚ್ಚಿದ್ದರು. ರಾತ್ರಿಯಿಡಿ ಸುರಿದ ಮಳೆಗೆ ನೀರು ಗೋದಾಮಿನ ಒಳಗೆ ನುಗ್ಗಿದ್ದರಿಂದ ಕುರಿಗಳು ಉಸಿರುಗಟ್ಟಿ ಮೃತಪಟ್ಟಿವೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ನೂರಾರು ಎಕರೆ ಹತ್ತಿ ಬೆಳೆಗೆ ನುಗ್ಗಿದ ನೀರು
ರಾಯಚೂರು: ಜಿಲ್ಲೆಯಲ್ಲಿ ಸುರಿದ ಮಳೆಗೆ ರಾಯಚೂರು ಗ್ರಾಮೀಣ ತಾಲೂಕಿನ ಯರಗೇರಾ, ಗುಂಜಳ್ಳಿ ಸುತ್ತಮುತ್ತಲಿನ ಗ್ರಾಮಗಳ ಹತ್ತಿ ಬೆಳೆಗೆ ನೀರು ನುಗ್ಗಿದ್ದರಿಂದ ರೈತರು ‌ಕಂಗಾಲಾಗಿದ್ದಾರೆ. ಹಾಗೇಯೇ ಭಾರಿ ಮಳೆಗೆ ಗುಂಜಳ್ಳಿ ಗ್ರಾಮದ ಕೆರೆ ಕೋಡಿ ಒಡೆದು ಹಿನ್ನೆಲೆಯಲ್ಲಿ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿ, ನೂರಾರು ಎಕರೆ ಹತ್ತಿ, ತೊಗರಿ ಬೆಳೆ ಜಲಾವೃತವಾಗಿದೆ. ಮಳೆಯಿಂದಾಗಿ ಹತ್ತಿ ಹೂ ಮತ್ತು ಕಾಯಿಗಳು ನೆಲಕಚ್ಚಿದ್ದರಿಂದ ರೈತರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮ ಜಲಾವೃತ
ವಿಜಯನಗರ: ರಾಷ್ಟ್ರೀಯ ಹೆದ್ದಾರಿ 50 ಕಾಮಗಾರಿ ಅವಾಂತರದಿಂದ ಹೊಸಪೇಟೆ ತಾಲೂಕಿನ ತಿಮ್ಮಲಾಪುರದಲ್ಲಿ ಶಾಲೆ ಹಾಗೂ ಮನೆಗಳ ಆವರಣಕ್ಕೆ ನೀರು ನುಗ್ಗಿ ಗ್ರಾಮಸ್ಥರು ಪರದಾಡುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 50 ನಿರ್ಮಿಸುವಾಗ ಚರಂಡಿ ನಿರ್ಮಾಣ ಮಾಡದ ಕಾರಣ ರಸ್ತೆ ಮೇಲಿಂದ ನೀರು ಇಲ್ಲಿನ ಸರ್ಕಾರಿ ಶಾಲೆ ಮತ್ತು ಮೊರಾರ್ಜಿ ಶಾಲೆ ಆವರಣ ಹಾಗೂ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗುತ್ತಿಗೆ ಕಂಪನಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಕ್‌ ಸಮೇತ ಹಳ್ಳಕ್ಕೆ ಬಿದ್ದ ಸವಾರರು
ಕೊಪ್ಪಳ: ಜಿಲ್ಲೆಯ ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಜಿಲ್ಲೆಯ ಶಿವಪುರ ಗ್ರಾಮದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಬೈಕ್ ಚಲಾಯಿಸಿಕೊಂಡು ಹೋಗಿದ್ದರಿಂದ ಸವಾರ ಬೈಕ್‌ ಸಮೇತ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಸ್ಥಳೀಯರು ಕೂಡಲೇ ಧಾವಿಸಿ ಬೈಕ್‌ ಸವಾರರನ್ನು ರಕ್ಷಣೆ ಮಾಡಿದ್ದಾರೆ.

ಡಣನಾಯಕನಕೆರೆ ಗ್ರಾಮದ ಕೆರೆಯಲ್ಲಿ ಬೊಂಗ
ವಿಜಯನಗರ: ಮಳೆಗೆ ಐತಿಹಾಸಿಕ ಡಣನಾಯಕನಕೆರೆ ಗ್ರಾಮದ ಕೆರೆಯಲ್ಲಿ ಬೊಂಗ ಬಿದ್ದಿದೆ. ವಿಜಯನಗರ ಕಾಲದ ಅರಸರು ನಿರ್ಮಿಸಿದ ಕೆರೆ, ಕಳೆದ ಒಂದು ತಿಂಗಳ ಹಿಂದೆ ಭರ್ತಿಯಾಗಿ ಕೋಡಿ ಬಿದ್ದಿತ್ತು. ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಹೀಗಾಗಿ ಕೆರೆ ಮೇಲಿರುವ ಕನ್ನೀರಮ್ಮ ದೇವಸ್ಥಾನದ ಬಳಿ ಗುಂಡಿ ಬಿದ್ದಿದೆ. ಇದರಿಂದ ಕೆರೆಯ ಏರಿಗೆ ಹಾನಿಯಾಗಬಹುದು ಎಂದು ರೈತರಲ್ಲಿ ಆತಂಕ ಮೂಡಿದೆ. ಗುಂಡಿ ಮುಚ್ಚುವಂತೆ ಒತ್ತಾಯಿಸಿದ್ದಾರೆ. ಎಸಿ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

14 ವರ್ಷಗಳ ಬಳಿಕ ಬರ್ತಿಯಾದ ಗಂಡಬೊಮ್ಮಹಳ್ಳಿ ಕೆರೆ: ವಿಜಯನಗರ ಜಿಲ್ಲೆಯಲ್ಲೇ ಅತಿದೊಡ್ಡ ಕೆರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕೂಡ್ಲಿಗಿ ತಾಲೂಕಿನ ಗಂಡಬೊಮ್ಮಹಳ್ಳಿ ಕೆರೆ ಕೋಡಿ ಬಿದ್ದಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಕಳೆದ ಎರಡು ದಿನಗಳಿಂದ ಸುರಿದ ವರ್ಷಧಾರೆಗೆ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದಿರುವುದು ಆ ಭಾಗದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಕೆರೆ ತುಂಬಿ ಕೋಡಿ ಬಿದ್ದಿರುವುದನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ | ಗುದ್ದಲಿ ಪೂಜೆ ಗದ್ದಲ | ಬಾರದ ಎಚ್‌ಡಿಕೆ, ಸಿಡಿದೆದ್ದ ಜೆಡಿಎಸ್‌; ಸಿಪಿವೈ ಕಾರಿಗೆ ಕಲ್ಲು, ಮೊಟ್ಟೆ ಎಸೆತ, ರಾಮನಗರ ಉದ್ರಿಕ್ತ

Exit mobile version