ಬೆಂಗಳೂರು: ರಾಜ್ಯದಲ್ಲಿ ಸತತ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ವರುಣನ ಆರ್ಭಟದಿಂದ (Rain News) ವಿವಿಧೆಡೆ ಮನೆ ಕುಸಿತ, ಭೂಕುಸಿತವಾಗಿದ್ದು, ರಸ್ತೆಗಳು ಹಾಗೂ ಗ್ರಾಮಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಾಗೆಯೇ ಮನೆಗಳು ಹಾಗೂ ಜಮೀನುಗಳಿಗೆ ನೀರು ನುಗ್ಗಿ ಸಂಕಷ್ಟ ಎದುರಿಸುವಂತಾಗಿದೆ.
ಕೊಡಗು ಜಿಲ್ಲೆಯಲ್ಲಿ ಮನೆಗೆ ಹಾನಿ
ಮಡಿಕೇರಿ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಮಳೆಗೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಸಮೀಪದ ಕಂಡಂಗಾಲ ಬಳಿಯ ಕಂಡಂಗಾಲ ಗ್ರಾಮದ ಕೂಲಿ ಕಾರ್ಮಿಕ ಎ.ಮುಸ್ತಫಾ ಎಂಬುವವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೆ ಕುಸಿದ ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ ಗೋಡೆ
ಮಂಡ್ಯ: ಮಳೆಯಿಂದ ಜಿಲ್ಲೆಯ ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆಯ ಗೋಡೆ ಮತ್ತೆ ಕುಸಿದಿದೆ. ಕೋಟೆ ಸ್ನಾನ ಘಟ್ಟದ ಬಳಿ ಸುಮಾರು 30 ಅಡಿ ಉದ್ದದಷ್ಟು ಗೋಡೆ ಕುಸಿದಿದೆ. ಕೋಟೆ ಕುಸಿತದಿಂದ ಗೋಡೆಯ ಅವಶೇಷಗಳು ಕಂದಕಕ್ಕೆ ಬಿದ್ದಿವೆ. ಕೋಟೆಯ ಮೇಲೆ ಬೆಳೆದಿರುವ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಿ, ಸಂರಕ್ಷಣೆ ಮಾಡುವಲ್ಲಿ ಪುರಾತತ್ವ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಕ್ಕಿ ಹರಿದ ಬೆಣ್ಣೆಹಳ್ಳ, ತುಪ್ಪರಿ ಹಳ್ಳ
ಧಾರವಾಡ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಜನರು ತತ್ತರಿಸಿದ್ದಾರೆ. ಈಗಾಗಲೇ ಬೆಣ್ಣೆಹಳ್ಳ, ತುಪ್ಪರಿ ಹಳ್ಳಗಳು ಸಂಪೂರ್ಣ ಭರ್ತಿಯಾಗಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಸ್‌ಡಿಆರ್‌ಎಫ್ ತಂಡ ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.
ಈರುಳ್ಳಿ ಬೆಳೆ ಹಾನಿ
ವಿಜಯಪುರ: ಕಳೆದ ಕೆಲ ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ವಿವಿಧೆಡೆ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಲೂಕಿನ ಜಮ್ಮಲದಿನ್ನಿ ಗ್ರಾಮದ ಅಶೋಕ ಈಚನಾಳ ಎಂಬುವವರ 4 ಎಕರೆ ಈರುಳ್ಳಿ (ಉಳ್ಳಾಗಡ್ಡಿ) ಬೆಳೆ ಹಾನಿಯಾಗಿದ್ದು, ಇಂಗಳಗೇರಿ ಗ್ರಾಮದ ರಾಮನಗೌಡ ಕರಬಸಪ್ಪ ಪಡೇಕನೂರ ಎಂಬುವವರ 4 ಎಕರೆ ಈರುಳ್ಳಿ ಹಾನಿಯಾಗಿದೆ. ಸಂಕಷ್ಟದಲ್ಲಿ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.
ಗಾಳಿ ಮಳೆಗೆ ಗೋಡೆ ಕುಸಿದು ಯುವಕ ಸಾವು
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ಯವಕ ಮೃತಪಟ್ಟಿದ್ದಾನೆ. ಚಂದ್ರಶೇಖರ ನಾರಾಯಣ ಹರಿಜನ (21) ಮೃತ ಯುವಕ. ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಗೋಡೆ ಯುವಕನ ಮೇಲೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಯುವಕ ಮೃತಪಟ್ಟಿದ್ದಾನೆ.
ಮೈಸೂರು ವಿವಿ ಆವರಣದಲ್ಲಿ ಶಿಥಿಲ ಕಟ್ಟಡದ ಚಾವಣಿ ಕುಸಿತ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶಿಥಿಲಗೊಂಡಿದ್ದ ಕಟ್ಟಡದ ಚಾವಣಿ ಕುಸಿದಿದೆ. ಕನ್ನಡ ಗ್ರಂಥಾಲಯದ ಚಾವಣಿ ಕುಸಿತವಾಗಿದ್ದು, ರಿಜಿಸ್ಟ್ರಾರ್ ಶಿವಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯ ಕೊರತೆ, ಕುಡಿಯುವ ನೀರಿನ ಸಮಸ್ಯೆಗಳಿಂದ ಬೇಸತ್ತ ವಿದ್ಯಾರ್ಥಿಗಳು, ಸಮರ್ಪಕ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಚಾರ್ಮಾಡಿ ಘಾಟ್‌ನಲ್ಲಿ ಭೂ ಕುಸಿತ, ಟ್ರಾಫಿಕ್ ಜಾಮ್
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನಲ್ಲಿ ಬಿದಿರುತಳ ಎಂಬ ಗ್ರಾಮದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದೆ. ರಸ್ತೆ ಬದಿಯ ಒಂದು ಭಾಗ ಕುಸಿದು ಬಿದ್ದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಆದರೆ, ಹೆಚ್ಚಿನ ಮಳೆಯಾದರೆ ಈ ಭಾಗದಲ್ಲಿ ಭಾರಿ ವಾಹನಗಳು ಸಂಚಾರ ಮಾಡಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ರಸ್ತೆ ಕುಸಿದಿರುವ ಜಾಗಕ್ಕೆ ಟೇಪ್ ಹಾಕಿ ಕಲ್ಲುಗಳನ್ನು ಅಡ್ಡವಿಟ್ಟಿದ್ದಾರೆ. ಇನ್ನೂ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಗಂಟೆಗೂ ಹೆಚ್ಚು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಗೆ ಮರ ಬಿದ್ದ ಪರಿಣಾಮ ಸುಮಾರು ಒಂದು ಕಿ.ಮೀ. ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಆದರೆ, ಸ್ಥಳೀಯರು ಸರ್ಕಾರ ಮಳೆಗಾಲ ಮುಗಿಯುವವರೆಗೆ ಈ ಭಾಗದಲ್ಲಿ ಭಾರಿ ವಾಹನಗಳಿಗೆ ಸಂಚಾರ ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Bengaluru in trouble| ನವೆಂಬರ್ ವರೆಗೂ ಮಳೆ, ಆಮೇಲೆ ಥರಗುಟ್ಟುವ ಚಳಿಗೆ ರೆಡಿ ಆಗಬೇಕು!