ಬಾಗಲಕೋಟೆ/ಬೆಳಗಾವಿ/ವಿಜಯನಗರ: ವರುಣನ ಅಬ್ಬರಕ್ಕೆ (Heavy Rain) ಜನರು ನುಲುಗಿ ಹೋಗಿದ್ದಾರೆ. ಮಳೆ ಕಡಿಮೆ ಆಯಿತೆಂದು ನಿಟ್ಟುಸಿರುವ ಬಿಡುವಾಗಲೇ ಪ್ರವಾಹದ ಭೀತಿ ಹೆಚ್ಚಾಗಿದೆ. ಬಾಗಲಕೋಟೆಯಲ್ಲಿ ಘಟಪ್ರಭಾ ಪ್ರಭಾವ ಬೀರಿದರೆ, ವಿಜಯನಗರದಲ್ಲಿ ತುಂಗಾಭದ್ರಾ ಉಕ್ಕಿ ಹರಿಯುತ್ತಿದೆ. ಜತೆಗೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಕೃಷ್ಣ ನದಿಯ ಒಳ ಹರಿವು ಹೆಚ್ಚಿದೆ. ಜಲಾಶಯಗಳ ಭರ್ತಿಯಿಂದ ನದಿಪಾತ್ರದ ಗ್ರಾಮದ ಜನರಿಗೆ ಆತಂಕ ಹೆಚ್ಚಾಗಿದೆ.
ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಸ್ಥಿತಿ
ಪಕ್ಕದ ಮಹಾರಾಷ್ಟ್ರ ಹಾಗೂ ಬೆಳಗಾವಿಯ ಕೆಲ ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ನದಿ ನೀರು ಹೆಚ್ಚಾದ ಕಾರಣದಿಂದಾಗಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿಯಿಂದ ಬೂದಿಹಾಳ ಮಾರ್ಗವಾಗಿ ಬರುವ ಮುಧೋಳ ಸಂಪರ್ಕದ ರಸ್ತೆ ಜಲಾವೃತಗೊಂಡಿದೆ.
ರಸ್ತೆ ಮೇಲೆ ೫-೬ ಅಡಿಯಷ್ಟು ನೀರು ಹರಿಯುತ್ತಿದ್ದು, ಬೂದಿಹಾಳದಿಂದ ಅನಗವಾಡಿಗೆ ತೆರಳಲು ೧೮ ಕಿ.ಮೀ ಸುತ್ತುವರಿದು ಬರಬೇಕಾದ ಅನಿವಾರ್ಯತೆ ಜನರಿಗೆ ಬಂದಿದೆ. ಬೂದಿಹಾಳದಿಂದ ರಾಷ್ಟ್ರೀಯ ಹೆದ್ದಾರಿ ೨೧೮ಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ೨ ಕಿ.ಮೀ ಅಂತರದ ರಸ್ತೆಗೆ, ೧೮ ಕಿ.ಮೀ ಸುತ್ತುವರೆದು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ | Rain News| ವರುಣನಿಗೆ ಅಲ್ಪ ವಿರಾಮ, ಭಾನುವಾರದವರೆಗೆ ಮಳೆ ಅಬ್ಬರ ಇರಲಿಕ್ಕಿಲ್ಲ
ಘಟಪ್ರಭಾ ನದಿಗೆ ೧೨ ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೪೦ ಸಾವಿರ ಕ್ಯೂಸೆಕ್ ದಾಟಿದರೆ, ಘಟಪ್ರಭಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಿದೆ. ಈಗಾಗಲೇ ಜಿಲ್ಲಾಡಳಿತದಿಂದ ಘಟಪ್ರಭಾ ತೀರದ ಜನರಿಗೆ ಜಾಗೃತರಾಗಿಲು ಸೂಚನೆ ನೀಡಲಾಗಿದೆ.
ರಸ್ತೆ ಸಂಚಾರ ಸಂಪರ್ಕ ಸ್ಥಗಿತ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಡವಳೇಶ್ವರ ಗ್ರಾಮದ ಬಳಿ ಇರುವ ಘಟಪ್ರಭಾ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮೇಲೆ ಇನ್ನೂ ಸ್ವಲ್ಪ ನೀರು ಆವರಿಸಿದರೆ, ಬಾಗಲಕೋಟೆ- ಬೆಳಗಾವಿ ಗಡಿ ಪ್ರದೇಶದ ಜನರ ರಸ್ತೆ ಸಂಚಾರ ಸಂಪರ್ಕ ಸ್ಥಗಿತವಾಗಲಿದೆ. ಸೇತುವೆ ಮೇಲೆ ನೀರು ನಿಂತಿದ್ದರಿಂದ ಬೈಕ್ ಸವಾರರು ಬೈಕ್ ತೊಳೆಯುತ್ತಿದ್ದ ಚಿತ್ರಣ ಕಂಡು ಬಂತು.
ಎರಡನೇ ಬಾರಿಗೆ ಜಲಾವೃತವಾದ ದತ್ತ ಮಂದಿರ
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರದಿಂದಾಗಿ ಕೃಷ್ಣಾ ಒಳ ಹರಿವಿನ ಪ್ರಮಾಣ ಏರಿಕೆ ಆಗಿದೆ. 1 ಲಕ್ಷ 30 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ತಿಂಗಳ ಅವಧಿಯಲ್ಲಿಯೇ ಎರಡನೇ ಬಾರಿಗೆ ದತ್ತ ಮಂದಿರ ಜಲಾವೃತಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಇರುವ ದತ್ತ ಮಂದಿರದಲ್ಲಿ ವೇದಗಂಗಾ, ದೂಧಗಂಗಾ, ಪಂಚಗಂಗಾ ನದಿಯ ಒಳಹರಿವಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಮಹಾರಾಷ್ಟ್ರದ ರಾಧಾನಗರ ಜಲಾಶಯದಿಂದ ೩೫೦೦ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.
ಸ್ಮಾರಕ ಮುಳಗುವ ಭೀತಿ
ಮಲೆನಾಡಿನಲ್ಲಿ ನಿರಂತರ ಮಳೆ ಪರಿಣಾಮ, ತುಂಗಭದ್ರಾ ಜಲಾಶಯದಲ್ಲಿ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಜಲಾಶಯದಿಂದ ಅಪಾರ ಪ್ರಮಾಣ ನೀರು ನದಿಗೆ ಬಿಡುಗಡೆ ಮಾಡಲಾಗಿದೆ. 1 ಲಕ್ಷ 74 ಸಾವಿರಕ್ಕೂ ಅಧಿಕ ನೀರು ನದಿಗೆ ಬಿಡುಗಡೆ ಮಾಡಿರುವ ಕಾರಣ ವಿಶ್ವವಿಖ್ಯಾತ ಹಂಪಿಯ ನದಿ ಭೋರ್ಗರೆಯುತ್ತಿದೆ. ನೀರು ಹರಿವು ಹೆಚ್ಚಳದಿಂದ ಹಂಪಿಯ ಮತ್ತಷ್ಟು ಸ್ಮಾರಕಗಳು ಮುಳಗುವ ಭೀತಿ ಇದೆ. ನದಿ ಪಾತ್ರಕ್ಕೆ ಭಕ್ತರು ತೆರಳದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Heavy Rain | ಸತತ ಮಳೆಗೆ ಸೋಮವಾರಪೇಟೆಯಲ್ಲಿ ಭೂಕುಸಿತ; ಆತಂಕದಲ್ಲಿ ಗ್ರಾಮಸ್ಥರು