ಬೆಂಗಳೂರು: ರಾಜ್ಯದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ (Rain News) ಜನಜೀವನ ಅಸ್ತವ್ಯಸ್ತವಾಗಿದೆ. ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದು, ಕೃಷಿ ಜಮೀನಿಗೆ ನೀರು ನುಗ್ಗಿದ್ದರಿಂದ ನೂರಾರು ಎಕರೆಯಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಇನ್ನು ಕೆಲವೆಡೆ ರಸ್ತೆಗಳು, ಸೇತುವೆಗಳು ಜಲಾವೃತವಾಗಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಭತ್ತದ ಗದ್ದೆಗಳಿಗೆ ನುಗ್ಗಿದ ಕೆರೆ ನೀರು
ರಾಯಚೂರು: ಜಿಲ್ಲೆಯಲ್ಲಿ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭತ್ತ, ಹತ್ತಿ ಸೇರಿ ಬೆಳೆಗಳಿಗೆ ಹಾನಿಯಾಗಿದೆ. ಮುದಗಲ್ ಪಟ್ಟಣ ವ್ಯಾಪ್ತಿಯ ತೊಂಡಕ್ಕಿ ಗ್ರಾಮದಲ್ಲಿ ಕೆರೆ ನೀರು ನುಗ್ಗಿ ಭತ್ತದ ಗದ್ದೆಗಳು ಜಲಾವೃತವಾಗಿವೆ. ರಾಯಚೂರು ನಗರ ಭಾಗದಲ್ಲಿ ಮಳೆ ಕೊಂಚ ಬಿಡುವು ಕೊಟ್ಟಿದ್ದರೆ, ಲಿಂಗಸುಗೂರು ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಕೆ ತುಪ್ಪದೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕುಟುಂಬಸ್ಥರು ತೊಂದರೆ ಅನುಭವಿಸಿದರು. ಹೀಗಾಗಿ 4 ಕಿ.ಮೀ ಎತ್ತಿನ ಗಾಡಿಯಲ್ಲಿ ಹೋಗಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ | Rain News | ರಾಜ್ಯದಲ್ಲಿ ಮಳೆ ಅಬ್ಬರ; ಮುಂದುವರಿದ ಸಾವು-ನೋವು
ನಾಗಮಂಗಲ ಬಸ್ ನಿಲ್ದಾಣ ಜಲಾವೃತ
ಮಂಡ್ಯ: ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ನಾಗಮಂಗಲದ ಸೂಳೆಕೆರೆ ಕೋಡಿ ಬಿದ್ದ ಪರಿಣಾಮ ನಾಗಮಂಗಲ, ಮೈಸೂರು ರಸ್ತೆ ಜಲಾವೃತ್ತವಾಗಿದೆ. ನೀರಿನ ರಭಸಕ್ಕೆ ವಿದ್ಯತ್ ಕಂಬಗಳು ಮುರಿದಿದ್ದರಿಂದ ಚಾಮರಾಜನಗರ-ಬೀದರ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಯಿತು. ಇನ್ನು ಮಂಡ್ಯ ರಸ್ತೆಯ ಮುಸ್ಲಿಂ ಬ್ಲಾಕ್‌ನ ಹಲವು ಮನೆಗಳು ಜಲಾವೃತ್ತವಾಗಿದ್ದರಿಂದ ಜನರು ಪರದಾಡಿದರು. ಅದೇ ರೀತಿ ಮಳೆ ನೀರಿನಿಂದ ನಾಗಮಂಗಲದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತವಾಗಿದ್ದರಿಂದ ರಸ್ತೆಯಲ್ಲೇ ಬಸ್‌ಗಳು ನಿಂತಿದ್ದು ಕಂಡುಬಂತು. ಹಾಗೆಯೇ ನಾಗಮಂಗಲ ಕೆರೆ ಏರಿ ಒಡೆದು ಅವಾಂತರ ಸೃಷ್ಟಿಯಾಗಿದೆ.
ಧುಮ್ಮಿಕ್ಕುತ್ತಿರುವ ಸೊಗಲ ಜಲಪಾತ
ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ, ಸವದತ್ತಿ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಸತತ ಮಳೆಯಿಂದ ಜಿಲ್ಲೆಯ ಸವದತ್ತಿ ತಾಲೂಕಿನ ಸೊಗಲ ಗ್ರಾಮದ ಐತಿಹಾಸಿಕ ಸೊಗಲ ಸೋಮೇಶ್ವರ ದೇವಸ್ಥಾನ ಎದುರು ಇರುವ ಸೊಗಲ ಜಲಪಾತ ಧುಮ್ಮಿಕ್ಕುತ್ತಿದೆ. ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮೂರು ಸೇತುವೆ ಮುಳುಗಡೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಗೆ ಕೃಷ್ಣಾ ನದಿ ಮತ್ತು ದೂದ್ ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ಸೇತುವೆಗಳು ಮುಳುಗಿ ಸಂಚಾರಕ್ಕೆ ಅಡಚಣೆಯಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ-ಯಡೂರ ಸೇತುವೆ ಮುಳುಗಡೆಯಾಗಿದೆ. ಅದೇ ರೀತಿ ದೂದ್ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲ್ಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕೊಣ್ಣುರ-ಬಾರವಾಡ ಸೇತುವೆ ಮುಳುಗಡೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣಕ್ಕೆ ಜಲದಿಗ್ಬಂಧನ
ಚಿಕಬಳ್ಳಾಪುರ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಕೋಡಿ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಗುಡಿಬಂಡೆ ಪಟ್ಟಣಕ್ಕೆ ಜಲದಿಗ್ಬಂಧನ ಉಂಟಾಗಿದೆ. ಇದರಿಂಧ ಪಟ್ಟಣಕ್ಕೆ ಸಂಪರ್ಕಿಸುವ ಮಾರ್ಗ ಬಂದ್ ಆಗಿ ವಾಹನಗಳು ಸಂಚಾರಕ್ಕೆ ಅಡಚಣೆಯಾಗಿದೆ. ಕೆರೆ ಕೋಡಿ ಮೇಲೆ ಸೇತುವೆ ಕಟ್ಟುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಇದರಿಂದ ಕೆರೆ ತುಂಬಿದಾಗ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಧಾರವಾಡ: ಜಿಲ್ಲೆ ಗಡಿ ಭಾಗದಲ್ಲಿ ಹೆಚ್ಚಿನ ಮಳೆಯಿಂದ ಕಬ್ಬೇನೂರ, ಕಲ್ಲೇ ಸೇರಿ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿದೆ. ಮಳೆ ಹಿನ್ನೆಲೆಯಲ್ಲಿ ಹಿಂಗಾರು ಬಿತ್ತನೆಯನ್ನು ರೈತರು ಮುಂದೂಡುವಂತಾಗಿದೆ.
ಕೆರೆ ಕೋಡಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರು
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ದಾಸಲಕುಂಟೆಯಲ್ಲಿ ಮಳೆಯಿಂದ ತುಂಬಿ ಹರಿಯುತ್ತಿರುವ ಕೆರೆ ಕೋಡಿ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ಏಕಾಏಕಿ ನೀರಿನ ರಭಸ ಹೆಚ್ಚಾಗಿದ್ದರಿಂದ ಕಾರು ಕೊಚ್ಚಿಹೋಗಿದ್ದು, ಸ್ಥಳೀಯರಿಂದ ಕಾರು ಚಾಲಕನ ರಕ್ಷಣೆ ಮಾಡಲಾಗಿದೆ. ಕೆರೆ ಕೋಡಿ ಉಕ್ಕಿ ಹರಿಯುತ್ತಿರುವುದರಿಂದ ತುಮಕೂರು-ತೋವಿನಕೆರೆ ರಸ್ತೆ ಸಂಪೂರ್ಣ ಬಂದ್ ಆಗಿದೆ.
ನೂರಾರು ಎಕರೆ ಬೆಳೆಗಳು ಜಲಾವೃತ
ಕೊಪ್ಪಳ: ಜಿಲ್ಲೆಯಲ್ಲಿ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಧಿಕ ಮಳೆಯಿಂದಾಗಿ ವಿವಿಧೆಡೆ ಬೆಳೆಗಳು ಕೊಳೆಯಲಾರಂಭಿಸಿವೆ. ಕೊಪ್ಪಳ ತಾಲೂಕಿನ ಹನುಮನಹಳ್ಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿನ ವಿವಿಧ ಬೆಳೆಗಳು ನೀರುಪಾಲಾಗಿವೆ. ಹನುಮನಹಳ್ಳಿಯಲ್ಲಿನ ಜಲಾನಯನ ಇಲಾಖೆಯಿಂದ ಮಾಡಲಾಗಿದ್ದ ಚೆಕ್ ಡ್ಯಾಂನ ನೀರು ಹಾಗೂ ಹಳ್ಳದ ನೀರು ಹೊಲಕ್ಕೆ ನುಗ್ಗಿದ ಪರಿಣಾಮ ಸುಮಾರು 500ಕ್ಕೂ ಹೆಚ್ಚು ಎಕರೆ ಪ್ರದೇಶದ ಬೆಳೆಗಳು ನೀರಲ್ಲಿ ನಿಂತಿವೆ. ಹಾಗೆಯೇ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಬುಡಶೆಟ್ಟನಾಳ ಕೆರೆಯ ಕೋಡಿ ಬಿದ್ದು ಪರಿಣಾಮ ಕರಿಯಮ್ಮ ಗುಡಿ ಪ್ರದೇಶದಲ್ಲಿರುವ ಬಡಾವಣೆಗೆ ನೀರು ನುಗ್ಗಿ ವಿವಿಧ ಸಾಮಗ್ರಿ ನೀರುಪಾಲಾಗಿವೆ.
ಚಾಮರಾಜನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಚಾಮರಾಜನಗರ: ನಗರದ ಸೇರಿ ಜಿಲ್ಲೆಯ ಹಲವೆಡೆ ರಾತ್ರಿ ಭರ್ಜರಿ ಮಳೆ ಸುರಿದಿದೆ. ಈ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಾಮರಾಜನಗರದ ಜೋಡಿ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವ ಪರಿಸ್ಥಿತಿ ಉಂಟಾಗಿತ್ತು.
ಅದೇ ರೀತಿ ನಗರಸಭಾ ವ್ಯಾಪ್ತಿಯ ಸೋಮಣ್ಣ ಲೇಔಟ್‌ನ 100ಕ್ಕೂ ಹೆಚ್ಚು ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು, ದಿನಸಿ ಪದಾರ್ಥಗಳು ನೀರುಪಾಲಾಗಿವೆ. ಇಲ್ಲಿನ ಪೆಟ್ರೋಲ್ ಬಂಕ್ ಕೂಡ ಜಲಾವೃತವಾಗಿದೆ. ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣ ಸಂಪೂರ್ಣ ಜಲಾವೃತವಾಗಿತ್ತು. ಆಟದ ಮೈದಾನದಲ್ಲಿ ನೀರು ನಿಂತಿದ್ದರಿಂದ ಕ್ರೀಡಾಪಟುಗಳು ಅತ್ತ ತಲೆ ಹಾಕಲಿಲ್ಲ. ತಾಲೂಕಿನ ಧಾರಾಕಾರ ಮಳೆ ಹಿನ್ನಲೆಯಲ್ಲಿ ಕೀಲಗೆರೆ-ಮಾದಲವಾಡಿ ಸೇತುವೆ ಜಲಾವೃತವಾಗಿ ಈ ಭಾಗದ ಜನರ ಸಂಚಾರಕ್ಕೆ ತೊಂದರೆಯಾಗಿದೆ.
ಕಾಫಿನಾಡಿನಲ್ಲಿ ಸಾಲು ಸಾಲು ಅವಾಂತರ ಸೃಷ್ಟಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರ ಮಳೆ ಸಾಲು ಸಾಲು ಅವಾಂತರ ಸೃಷ್ಟಿಸಿದೆ. ಭಾರಿ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಪರದೇಶಪ್ಪನಮಠದಲ್ಲಿ ಹತ್ತಾರು ಎಕರೆ ಗದ್ದೆಗಳು ಮುಳುಗಡೆಯಾಗಿದ್ದು, ಗ್ರಾಮದ ದೇವಾಲಯಕ್ಕೂ ಮಳೆ ನೀರು ನುಗ್ಗಿದೆ. ಅದೇ ರೀತಿ ಕಾಫಿ ತೋಟಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದು, ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ | Rain news | ರಾಜ್ಯದಲ್ಲಿ ಮತ್ತೆ ಜೋರಾದ ಮಳೆ, ಕೋಡಿ ಬಿದ್ದ ಕೆರೆಗಳು, ಲೇಔಟ್ ಮುಳುಗಡೆ