ಉಡುಪಿ: ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ಹೆಲ್ಮೆಟ್ ಇನ್ನು ಮುಂದೆ ಕಡ್ಡಾಯವಲ್ಲವೇ? (Helmet ban) ಈ ನಿಟ್ಟಿನಲ್ಲಿ ಸರ್ಕಾರ ಆದೇಶವನ್ನೇನಾದರೂ ಹೊರಡಿಸಿದೆಯೇ? ಇಂಥದ್ದೊಂದು ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು, ಕಾರ್ಕಳದಲ್ಲಿ ಸೋಮವಾರ (ಫೆ. ೨೭) ಕನ್ನಡ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಸಾರಥ್ಯದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ‍್ಯಾಲಿಯಾಗಿದೆ.
ಕಾರ್ಕಳದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಬೈಕ್ ರ‍್ಯಾಲಿಯಲ್ಲಿ ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸಿದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಸರ್ಕಾರದ ಭಾಗವಾಗಿರುವ ಇಂಧನ, ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆದಿರುವುದರಿಂದ ಸಾರ್ವಜನಿಕರು ಕಟುವಾಗಿ ಟೀಕಿಸಿದ್ದಾರೆ.
ಬೈಕ್ ರ‍್ಯಾಲಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹೆಲ್ಮೆಟ್ ಧರಿಸದೆಯೇ ಪಾಲ್ಗೊಂಡಿದ್ದರು. ಕಾರ್ಕಳದ ಸ್ವರಾಜ್ಯ ಮೈದಾನದಿಂದ ಹೊರಟ ಬಿಜೆಪಿ ವಿಜಯ ಸಂಕಲ್ಪ ಬೈಕ್ ರ‍್ಯಾಲಿ ಅಜೆಕಾರಿನ ಜ್ಯೋತಿ ಪ್ರೌಢಶಾಲೆ ಮೈದಾನದ ಬಳಿ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಸಂಸದ ತೇಜಸ್ವಿ ಸೂರ್ಯ ಕೂಡ ಭಾಗವಹಿಸಿದ್ದರು. ಇದೀಗ ಸಚಿವರು ಬೈಕ್ ಚಲಾಯಿಸುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿವೆ.
ಜನಸಾಮಾನ್ಯರಿಗಾದರೆ ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಇದೆ. ಆದರೆ, ಈ ನಿಯಮ ಸಚಿವರಿಗೆ ಅನ್ವಯಿಸುವುದಿಲ್ಲವೇ? ಬಿಜೆಪಿ ಕಾರ್ಯಕರ್ತರಿಗೆ ಅನ್ವಯಿಸುವುದಿಲ್ಲವೇ? ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.