ಬೆಂಗಳೂರು : ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರುವವರು ಎಚ್ಚರಿಕೆಯಿಂದ ಇರಬೇಕು ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ವಿದೇಶದಲ್ಲಿ ನಾಪತ್ತೆಯಾದ ತನ್ನ ಪತ್ನಿಗಾಗಿ ಇಲ್ಲೊಬ್ಬ ಪತಿ ಅಕ್ಷರಶಃ ಹೋರಾಟನ್ನೇ ಮಾಡಿ ಕೊನೆಗೂ ಪತ್ನಿಯನ್ನು ವಾಪಾಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.
ಬೆಂಗಳೂರು ನಿವಾಸಿಗಳಾದ ಇಶಾಕ್ ಹಾಗೂ ಆತನ ಪತ್ನಿ ಗೀತಾ ಇಶಾಕ್ ದುಬೈಗೆ ಹೋಗಲು ಸ್ಟೆಲ್ಲಾ ಎಂಬ ಏಜೆಂಟ್ ಸಂಪರ್ಕಿಸಿದ್ದರು. ವಿದೇಶದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಸ್ಟೆಲ್ಲಾ ಎಂಬಾಕೆ ಇಶಾಕ್ನಿಂದ ಹಂತ ಹಂತವಾಗಿ ಸುಮಾರು ಒಂದೂವರೆ ಲಕ್ಷ ರೂ.ವರೆಗೂ ಹಣ ಪಡೆದಿದ್ದಾಳೆ.
ಅನೇಕ ದಿನಗಳು ಸತಾಯಿಸಿದ ಸ್ಟೆಲ್ಲಾ, ಕೊನೆಗೂ ಮಾರ್ಚ್ನಲ್ಲಿ ಇಶಾಕ್ ಮತ್ತು ಪತ್ನಿ ಗೀತಾ ದುಬೈಗೆ ಹೊರಡುವ ದಿನಾಂಕ ನಿಗದಿಪಡಿಸಿದ್ದಾಳೆ. ಸದ್ಯ ಈಗಲಾದರೂ ದುಬೈಗೆ ಹೋಗಬಹುದಲ್ಲಾ ಎಂದು ದಂಪತಿ ಆಸೆಯಿಂದ ಕಾದಿದ್ದರು.
ಆದರೆ ಗೀತಾಳ ಟಿಕೆಟ್ ಮಾತ್ರ ಸಿಕ್ಕಿದೆ, ಅವರು ಮೊದಲು ಹೋಗಲಿ, ಮಾರನೆ ದಿನ ನಿಮ್ಮನ್ನು ಕಳುಹಿಸಿಕೊಡುತ್ತೇನೆ ಎಂದು ಇಶಾಖ್‌ಗೆ ಸ್ಟೆಲ್ಲಾ ಭರವಸೆ ನೀಡಿದ್ದಳು. ಇದನ್ನು ನಂಬಿದ ಇಶಾಕ್, ಪತ್ನಿಯನ್ನು ಕಳಿಸಿಕೊಟ್ಟಿದ್ದಾನೆ.
ಇದನ್ನು ಓದಿ| ಹಿಮಾಲಯಕ್ಕೆ ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿದ್ದ ವೈದ್ಯ ನಾಪತ್ತೆ
ಸ್ಟೆಲ್ಲಾ ಹೇಳಿದಂತೆ ಇಶಾಕ್ ತನ್ನ ಪತ್ನಿ ಗೀತಾಳನ್ನು ಶಾರ್ಜಾಗೆ ಕಳಿಸಿಕೊಟ್ಟ. ಆದರೆ ಇಶಾಕ್‌ನನ್ನು ದುಬೈಗೆ ಕಳಿಸಿಕೊಡಲೇ ಇಲ್ಲ. ಅತ್ತ ಶಾರ್ಜಾಗೆ ಹೋದ ಪತ್ನಿ ಕಡೆಯಿಂದಲೂ ಯಾವ ಸುದ್ದಿಯೂ ಬರಲಿಲ್ಲ. ಹೀಗೆ ಮೂರು ತಿಂಗಳು ಕಳೆದು ಹೋಯಿತು.
ಕೊನೆಗೆ ಗೀತಾ ಹೇಗೋ ಕಷ್ಟಪಟ್ಟು ಪತಿ ಇಶಾಕ್ಗೆ ಕರೆ ಮಾಡಿ ತಾನಿರುವ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಕೂಡಲೇ ಇಶಾಕ್ ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪಕಿಸಿ ಪತ್ನಿಯನ್ನು ಕರೆಸಿಕೊಡುವಂತೆ ಮನವಿ ಮಾಡಿದ್ದಾನೆ. ಇದರ ಜತೆಗೆ, ಪತ್ನಿಯನ್ನು ಕರೆಸಿಕೊಡುವಂತೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಕೊನೆಗೂ ಮೂರು ತಿಂಗಳ ಬಳಿಕ ಪತ್ನಿ ಗೀತಾಳನ್ನು ಇಶಾಕ್ ವಾಪಾಸ್ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಮನೆಗೆಲಸಕ್ಕೆ ಬಿಟ್ಟಿದ್ದ ಏಜೆಂಟ್
ಭಾರತಕ್ಕೆ ಬಂದ ಬಳಿಕ ಗೀತಾ ಶಾರ್ಜಾದಲ್ಲಿ ಆದ ತನ್ನ ಅನುಭವಗಳನ್ನು ಹೇಳಿಕೊಂಡಿದ್ದಾಳೆ. ತಾನು ಶಾರ್ಜಾಗೆ ತಲುಪುತ್ತಿದ್ದಂತೆ ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ಕರೆದುಕೊಂಡು ಹೋಗಿ ಯಾವುದೋ ಮನೆಯಲ್ಲಿ ಬಿಟ್ಟಿದ್ದ. ಆ ಮನೆಯವರು ನನ್ನನ್ನು ಮನೆಗೆಲಸಕ್ಕೆ ಇರಿಸಿಕೊಂಡಿದ್ದರು. ದಿನಕ್ಕೆ ಒಂದೇ ಒಂದು ಬ್ರೆಡ್ ಪೀಸ್ ನೀಡುತ್ತಿದ್ದರು. ತುಂಬಾ ಕಿರುಕುಳ ನೀಡುತ್ತಿದ್ದರು ಎಂದು ಗೀತಾ ಅಳಲು ತೋಡಿಕೊಂಡಿದ್ದಾಳೆ.
ಕೊನೆಗೂ ಇಶಾಕ್ ತನ್ನ ಪತ್ನಿ ಗೀತಾಳನ್ನು ಮೂರು ತಿಂಗಳ ಕಾಲ ಹೋರಾಟ ಮಾಡಿ ವಾಪಾಸ್ ಕರೆಸಿಕೊಂಡಿದ್ದಾನೆ. ವಂಚನೆ ಎಸಗಿ ನಾಪತ್ತೆಯಾಗಿರುವ ಸ್ಟೆಲ್ಲಾ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇದನ್ನು ಓದಿ| ಹುಬ್ಬಳ್ಳಿಯ ಕಿಮ್ಸ್‌ನಲ್ಲೆ ಮಗು ಪ್ರತ್ಯಕ್ಷ: ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್