ಬೆಂಗಳೂರು: ಕಾಂಗ್ರೆಸ್ ಪಕ್ಷದವರ ಆರೋಪದಲ್ಲಿ ಯಾವುದೇ ಹುರುಳಿರುವುದಿಲ್ಲ ಎನ್ನುವ ಬಿಜೆಪಿ ನಾಯಕರು, ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದೆಯೆಂದು ನಮ್ಮ ಆರೋಪಕ್ಕೆ ತನಿಖಾ ತಂಡವನ್ನು ರಚಿಸಿದ್ದೇತಕ್ಕೆ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಗುರುವಾರ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಕಾಂಗ್ರೆಸ್‌ನವರು ಯಾವುದೇ ಸಾಕ್ಷಿ, ದಾಖಲೆಗಳು ಇಲ್ಲದೇ ಕೇವಲ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ನಾವು ಹಿಟ್ ಅಂಡ್ ರನ್ ಮಾಡುತ್ತಿರುವುದಾದರೆ ನಾವು ಮಾಡಿದ ಆರೋಪಕ್ಕೆ ನೀವು ತನಿಖಾ ತಂಡ ರಚಿಸುತ್ತಿರುವುದೇಕೆ? ನಾವು ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡಿದಾಗ ಆರೋಪಪಟ್ಟಿ ಸಲ್ಲಿಸಿದ್ದೇಕೆ? ಪಿಎಸ್ಐ ಅಕ್ರಮದ ಬಗ್ಗೆ ಹೇಳಿದಾಗ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುತ್ತೀರಿ. ನಂತರ ನೀವೇ ತನಿಖಾ ತಂಡ ರಚನೆ ಮಾಡಿದ್ದೀರಿ. ಸುಮಾರು 50ಕ್ಕೂ ಹೆಚ್ಚು ಜನ ಅಧಿಕಾರಿಗಳು ಸೇರಿದಂತೆ ಬಂಧನವಾಗಿದ್ದಾರೆ. ಹಾಗಾದರೆ ಇದೆಲ್ಲವೂ ಹಿಟ್ ಅಂಡ್ ರನ್ ಹೇಗೆ ಆಗುತ್ತೆ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ
ನಳಿನ್ ಕುಮಾರ್ ಕಟೀಲ್ ಅವರು ದೊಡ್ಡ ಭಾಷಣ ಮಾಡುತ್ತಾರೆ. ಆದರೆ ಬಿಟ್ ಕಾಯಿನ್, ಪಿಎಸ್ ಐ ಹಗರಣ, ಗಂಗಾ ಕಲ್ಯಾಣ ಹಗರಣದ ಬಗ್ಗೆ ಮಾತನಾಡಿದರೆ ಮೌನವಾಗುತ್ತಾರೆ. “ನಾ ಖಾವೂಂಗಾ ನಾ ಖಾನೇದೂಂಗಾ” ಎಂದು ಮೋದಿ ಅವರು ಹೇಳಿದ್ದಾರೆ. ಆದರೆ ಇಲ್ಲಿ ನಾನು ತಿಂದು ನಿಮಗೂ ತಿನ್ನಲು ಬಿಡುತ್ತೇನೆ ಎಂಬಂತೆ ನಡೆಯುತ್ತಿದೆ. ಇದಕ್ಕೆ ನಿಮ್ಮ ಸ್ಪಷ್ಟನೆ ಏನು? ಮಾನ್ಯ ಸಮಾಜ ಕಲ್ಯಾಣ ಸಚಿವರೇ ನಿಮಗೆ ಗೌರವ ಇದ್ದರೆ ನೀವೇ ಸ್ಥಾನ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಟಾಸ್ಕ್‌ಫೋರ್ಸ್ ರಚಿಸಿದ ಸೋನಿಯಾ ಗಾಂಧಿ