Site icon Vistara News

ಮುರುಘಾಶ್ರೀ ಪ್ರಕರಣ| ಮಠಕ್ಕೆ ಸರ್ಪಗಾವಲು, ಬ್ಯಾರಿಕೇಡ್‌ಗಳು ರೆಡಿ, ಶ್ರೀಗಳ ಬಂಧನಕ್ಕೆ ಕ್ಷಣಗಣನೆ?

murugha mutt

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಪರಿಸರದಲ್ಲಿ ಪೊಲೀಸ್‌ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಕತ್ತಲಾಗುತ್ತಿದ್ದಂತೆಯೇ ನಗರದಾದ್ಯಂತ ಹೈ ಅಲರ್ಟ್‌ ಪರಿಸ್ಥಿತಿ ನಿರ್ಮಾಣಗೊಂಡಿದೆ. ಡಿಸಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಬ್ಯಾರಿಕೇಡ್‌ಗಳನ್ನು ತಂದು ಇಳಿಸಲಾಗಿದೆ, ನ್ಯಾಯಾಲಯದ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
– ಇಷ್ಟೆಲ್ಲ ಭದ್ರತಾ ವ್ಯವಸ್ಥೆಗಳನ್ನು ಗಮನಿಸಿದರೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಇಲ್ಲಿನ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರ ಬಂಧನಕ್ಕೆ ನಡೆದಿರುವ ಸಿದ್ಧತೆಯೇ ಎಂಬ ಪ್ರಶ್ನೆ ಮೂಡಿದೆ.

ಡಿಸಿ ಸರ್ಕಲ್‌ನಲ್ಲಿ ಬ್ಯಾರಿಕೇಡ್‌ಗಳನ್ನು ತಂದಿಡಲಾಗಿರುವುದು.

ಮಠದ ಅಧೀನದಲ್ಲಿರುವ ಹೈಸ್ಕೂಲ್‌ನಲ್ಲಿ ೧೦ನೇ ತರಗತಿಯಲ್ಲಿ ಕಲಿಯುತ್ತಿರುವ, ಮಠದ್ದೇ ಹಾಸ್ಟೆಲ್‌ನಲ್ಲಿ ವಾಸಿಸುವ ಇಬ್ಬರು ವಿದ್ಯಾರ್ಥಿನಿಯರು ಐದು ದಿನಗಳ ಹಿಂದೆ ಮೈಸೂರಿನ ನಜರ್‌ ಬಾದ್‌ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಮುರುಘಾಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಿದ್ದರು. ಅವರಿಗೆ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಮತ್ತು ಇತರ ಮೂವರು ಸಹಕರಿಸಿದ್ದಾರೆ ಎಂದು ದೂರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಾಗಿ ಅದು ಚಿತ್ರದುರ್ಗ ಗ್ರಾಮೀಣ ಪೊಲೀಸ್‌ ಠಾಣೆಗೆ ರವಾನೆಯಾಗಿತ್ತು. ಈ ನಡುವೆ, ಮಠಕ್ಕೆ ಬಾಲಕಿಯರನ್ನು ಕರೆತಂದು ಮಹಜರು ಮಾಡಲಾಗಿದೆ. ವಾರ್ಡನ್‌ ರಶ್ಮಿ ಅವರನ್ನು ಗುರುವಾರ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಇತ್ತ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಗಳ ಬಂಧನಕ್ಕೆ ಒತ್ತಡ ಹೆಚ್ಚುತ್ತಿದೆ.

ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿದರೆ ಪೊಲೀಸರು ಅತಿಶೀಘ್ರವೇ ಮುರುಘಾಶರಣರನ್ನು ಬಂಧಿಸುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿದೆ. ಶ್ರೀಗಳು ತಮ್ಮ ಬಂಧನದ ವಿರುದ್ಧ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರಾದರೂ ಕೋರ್ಟ್‌ ಇನ್ನೂ ಅದರ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ. ಹೀಗಾಗಿ ಒಂದೊಮ್ಮೆ ಬಂಧನಕ್ಕೆ ಮುಂದಾದರೆ ಸ್ವಾಮೀಜಿಗಳಿಗೆ ಯಾವುದೇ ಕಾನೂನಾತ್ಮಕ ರಕ್ಷಣೆ ಇರುವುದಿಲ್ಲ.

ಚಿತ್ರದುರ್ಗದ ಮುರುಘಾಮಠದ ಎದುರು ಬಿಗಿ ಭದ್ರತೆ

ಕೆಎಸ್‌ಆರ್‌ಪಿ ಬಸ್‌ಗಳ ಆಗಮನ
ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಇಂದು ರಾತ್ರಿ ಏನೋ ನಡೆಯಲಿದೆ ಎನ್ನುವ ಸೂಚನೆಯನ್ನು ನೀಡುತ್ತಿವೆ.

ನ್ಯಾಯಾಲಯದ ಸಮೀಪವೇ ಇರುವ ಡಿಸಿ ವೃತ್ತದಲ್ಲಿ ಡಿಎಆರ್‌ ಸಿಬ್ಬಂದಿಗಳು ನೂರಕ್ಕೂ ಅಧಿಕ ಬ್ಯಾರಿಕೇಡ್‌ಗಳನ್ನು ಇಳಿಸಿದ್ದಾರೆ. ಒಂದೊಮ್ಮೆ ಶ್ರೀಗಳನ್ನು ಬಂಧಿಸಿದರೆ ಅವರನ್ನು ಇದೇ ದಾರಿಯಾಗಿ ಕೋರ್ಟ್‌ಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಕೋರ್ಟ್‌ ಸುತ್ತ ರಾತ್ರಿ ಸಾಮಾನ್ಯವಾಗಿ ಇಷ್ಟೊಂದು ಭದ್ರತೆ ಯಾವತ್ತೂ ಇರುವುದಿಲ್ಲ. ಹೀಗಾಗಿ ರಾತ್ರಿ ಇಲ್ಲಿಗೆ ಕರೆ ತರುತ್ತಾರಾ ಎಂಬ ಪ್ರಶ್ನೆ ಮೂಡಿಸಿದೆ.

ಬೆಂಗಳೂರು ಕಡೆಯಿಂದ ಚಿತ್ರದುರ್ಗ ಜಿಲ್ಲೆಯ ಕಡೆಗೆ ನಾಲ್ಕು ಕೆಎಸ್‌ಆರ್‌ಪಿ ವಾಹನಗಳು ಬಂದಿವೆ. ಇವು ಜಿಲ್ಲೆಯ ಗಡಿ ಭಾಗವನ್ನು ಪ್ರವೇಶಿಸಿವೆ. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಚಿತ್ರದುರ್ಗದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮಠದ ಸುತ್ತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಮಠದ ಒಳಗೆ ಹೋಗುವ, ಹೊರಬರುವ ಪ್ರತಿ ವಾಹನವನ್ನೂ ಪೊಲೀಸರು ತಪಾಸಣೆ ಮಾಡಿಯೇ ಬಿಡುತಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | 5 ಗಂಟೆ ಸತತ ವಿಚಾರಣೆ ಬಳಿಕ ವಾರ್ಡನ್‌ ರಶ್ಮಿ ಸಾಂತ್ವನ ಕೇಂದ್ರಕ್ಕೆ ಶಿಫ್ಟ್‌, ನಾಳೆ ಮತ್ತೆ ಗ್ರಿಲ್

Exit mobile version