ಚಾಮರಾಜನಗರ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ನಾನು ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಾಗಲೀ, ವರುಣ ವಿಧಾನಸಭಾ ಕ್ಷೇತ್ರದಲ್ಲಾಗಲೀ ಸ್ಪರ್ಧೆ ಮಾಡಬೇಕು ಎಂದು ಬಯಸಿರಲಿಲ್ಲ. ನನ್ನ ಅರ್ಹತೆ, ಸಾಮರ್ಥ್ಯ ನೋಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ನನಗೆ ಎರಡೂ ಕಡೆ ಸ್ಪರ್ಧೆ ಮಾಡುವಂತೆ ಸೂಚನೆ ಕೊಟ್ಟರು ಎಂದು ಸಚಿವ ವಿ. ಸೋಮಣ್ಣ (V Somanna) ಹೇಳಿದರು.
ಚಾಮರಾಜನಗರದ ಪ್ರಚಾರದ ವೇಳೆ ಮಾತನಾಡಿದ ವಿ. ಸೋಮಣ್ಣ, ಈಗ ಎರಡು, ಮೂರು ತಿಂಗಳ ಹಿಂದೆ ಅಮಿತ್ ಷಾ ಅವರು ಕರೆ ಮಾಡಿ ನಮ್ಮ ಮನೆ ಬರುತ್ತಿರುವುದಾಗಿ ಹೇಳಿದ್ದರು. ಅದರಂತೆ ಅವರು ನಮ್ಮ ಮನೆಗೆ ಬಂದು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅದಾದ ಮೇಲೆ ನನ್ನ ಅರ್ಹತೆ, ಸಾಮರ್ಥ್ಯವನ್ನು ಗಮನಿಸಿ ಮತ್ತೆ ದೆಹಲಿಗೆ ಕರೆಸಿ ಎರಡೂ ಕಡೆ ಸ್ಪರ್ಧೆ ಮಾಡುವಂತೆ ಸೂಚನೆ ಕೊಟ್ಟರು ಎಂದು ಹೇಳಿದರು.
ನಾನು ಪಕ್ಷದ ಸಂದೇಶವನ್ನು ಶಿಸ್ತಿನ ಸಿಪಾಯಿಯಾಗಿ ಸ್ವೀಕಾರ ಮಾಡಿದ್ದೇನೆ. ಅದರಂತೆ ಎರಡೂ ಕಡೆ ಸ್ಪರ್ಧೆ ಮಾಡಲು ಮುಂದಾಗಿದ್ದೇನೆ. ಇದೇ ಏಪ್ರಿಲ್ 17ರಂದು ನಾನು ವರುಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಬಿ. ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Elections : ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ರಚನೆಗೆ ಕಾಂಗ್ರೆಸ್ ಹುನ್ನಾರ; ಸಂಸದ ಪ್ರತಾಪಸಿಂಹ ಆರೋಪ
ಕಾಪುಸಿ ಬೆಂಬಲ ಕೋರಿದ್ದ ವಿ. ಸೋಮಣ್ಣ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಅವರ ಮೈಸೂರಿನ ನಿವಾಸಕ್ಕೆ ಶುಕ್ರವಾರ (ಏ. 14) ಭೇಟಿ ನೀಡಿದ್ದ ಸೋಮಣ್ಣ, ವರುಣದಲ್ಲಿ ಅವರ ಬೆಂಬಲ ಕೋರಿದ್ದರು. ಈ ಹಿಂದೆ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ವಿರುದ್ಧ ಕಾಪುಸಿ ಸ್ಪರ್ಧೆ ಮಾಡಿದ್ದರು. ಈ ಬಾರಿ ತಾವು ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೆಂಬಲ ನೀಡುವುದರ ಜತೆಗೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಪ್ರಚಾರದ ಉಸ್ತುವಾರಿ ನೋಡಿಕೊಳ್ಳುವಂತೆ ಹಾಗೂ ನಿನ್ನನ್ನೇ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ ಎಂದು ವಿ. ಸೋಮಣ್ಣ ಮನವಿ ಮಾಡಿದ್ದರು.
ನಿನ್ನ ಬಗ್ಗೆ ನಾನು ಏನೂ ಅಂದುಕೊಂಡಿಲ್ಲ. ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸು. ನೀನೇ ನನ್ನ ಸೈನ್ಯದ ಕಮಾಂಡರ್ ಆಗಿ ಕೆಲಸ ಮಾಡು. ನಿನ್ನನ್ನೇ ನಂಬಿದ್ದೇನೆ, ದಯಮಾಡಿ ಕೈಬಿಡಬೇಡ ಎಂದು ಕಾಪು ಸಿದ್ದಲಿಂಗಸ್ವಾಮಿಗೆ ಸೋಮಣ್ಣ ಅವರು ಕೈ ಮುಗಿದು ಮನವಿ ಮಾಡಿದ್ದರು.
ಈ ವೇಳೆ ಮಾತನಾಡಿದ್ದ ಕಾ.ಪು. ಸಿದ್ದಲಿಂಗಸ್ವಾಮಿ, ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ಪೂಜೆ ಇಟ್ಟುಕೊಂಡಿದ್ದೇನೆ. ಬೆಳಗ್ಗೆಯೇ ನಿಮ್ಮ ಹೆಸರಲ್ಲಿ ಪೂಜೆ ನಡೆದಿದೆ. ನಿಮ್ಮ ನಕ್ಷತ್ರಕ್ಕೆ ಪೂಜೆ ಮಾಡಿಸಿದ್ದೇವೆ. ಈ ಬಾರಿ ನೀವು ಗೆಲ್ಲುತ್ತೀರಿ ಎಂದು ಹೇಳಿದ್ದರು.
ಕಾಪುಸಿ ಸಹೋದರ ಇದ್ದಂತೆ- ಸೋಮಣ್ಣ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ, ಕಾ.ಪು.ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದ ಹಾಗೆ. ಯಾವುದೋ ಜನ್ಮದಲ್ಲಿ ಅಣ್ಣನಾಗಿಯೋ, ತಮ್ಮನಾಗಿಯೋ ಹುಟ್ಟಿದ್ದೆವು ಎಂದನ್ನಿಸುತ್ತದೆ. ಸಿದ್ದಲಿಂಗಸ್ವಾಮಿಗೆ ಕೆಲವು ಜವಾಬ್ದಾರಿ ನೀಡಿದ್ದೇನೆ. ಇಂದು ಅವರ ಮನೆಯಲ್ಲಿ ವರುಣ ಕ್ಷೇತ್ರದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಛಲವಾದಿ ನಾರಾಯಣಸ್ವಾಮಿ ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಕಾ.ಪು. ಸಿದ್ದಲಿಂಗಸ್ವಾಮಿಗೆ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Karnataka Elections : ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ರಚನೆಗೆ ಕಾಂಗ್ರೆಸ್ ಹುನ್ನಾರ; ಸಂಸದ ಪ್ರತಾಪಸಿಂಹ ಆರೋಪ
ಆ ಎಲ್ಲ ಜವಾಬ್ದಾರಿ ಸಿದ್ದಲಿಂಗಸ್ವಾಮಿಗೆ ನೀಡಿದ್ದೇನೆ. ಇಂದಿನಿಂದ ವರುಣದಲ್ಲಿ ಪ್ರಚಾರವನ್ನು ಆರಂಭಿಸಿದ್ದೇವೆ. ಒಂದು ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ವರುಣವನ್ನು ಮತ್ತೊಂದು ಗೋವಿಂದರಾಜ ನಗರ ಮಾಡುವ ಗುರಿ ಹೊಂದಿದ್ದೇನೆ ಎಂದು ಸೋಮಣ್ಣ ತಿಳಿಸಿದ್ದರು.