ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುತ್ತಿರುವ ವೇಳೆ ಎಸಿಬಿ ದಾಳಿ ನಡೆಸಿದ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಮತ್ತೆ ಎಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ, ಆಗಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರ ಹೆಸರು ಬಾಯಿಬಿಟ್ಟಿದ್ದರು. ಈ ಕುರಿತು ಕ್ರಮ ಕೈಗೊಳ್ಳದೆ ಎಸಿಬಿ ವಿಳಂಬ ಧೋರಣೆ ಅನುಸರಿಸುತ್ತಿತ್ತು. ಇತ್ತೀಚೆಗೆ ಎಸಿಬಿ ನಡೆಯನ್ನು ಟೀಕಿಸಿದ್ದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು, ಎಸಿಬಿ ಎನ್ನುವುದು ಕಲೆಕ್ಷನ್ ಸೆಂಟರ್ ಆಗಿದೆ ಎಂದಿದ್ದರು. ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸಿಬಿ ಜೆ. ಮಂಜುನಾಥ್ ಅವರನ್ನು ಬಂಧಿಸಿತ್ತು.
ಎಸಿಬಿ ಇಲ್ಲಿಯವರೆಗೆ ಸಲ್ಲಿಸಿರುವ ಎಲ್ಲ ಬಿ ರಿಪೋರ್ಟ್‌ಗಳ ವರದಿಯನ್ನೂ ನೀಡಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದರು. ಅದರಂತೆ ಏಕಸದಸ್ಯ ಪೀಠದ ಎದುರು ಗುರುವಾರ ವಿಚಾರಣೆಗೆ ಹಾಜರಾದ ಎಸಿಬಿ ಪರ ವಕೀಲರು 105 ಪುಟಗಳ ದಾಖಲೆಗಳನ್ನು ಸಲ್ಲಿಸಿದರು. 819 ಸರ್ಚ್ ವಾರಂಟ್‌ಗಳನ್ನು ಪಡೆಯಲಾಗಿತ್ತು. 28 ಸರ್ಚ್ ವಾರಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಬಿ ರಿಪೋರ್ಟ್‌ಗಳ ಕುರಿತೂ ವರದಿ ಸಲ್ಲಿಸಿದರು. ಆದರೆ ದಾಖಲೆಗಳು ಅಪೂರ್ಣವಾಗಿದ್ದರಿಂದ ನ್ಯಾಯಮೂರ್ತಿಗಳು ಮತ್ತೆ ಅಸಮಾಧಾನಗೊಂಡರು.
ನೀವು ಕೊಟ್ಟ ವರದಿ ಸಂಪೂರ್ಣ ಸತ್ಯವಾದ ವರದಿಯಲ್ಲ. ನೀವು ಈ ಆಟ ಆಡುತ್ತೀರೆಂದು ತಿಳಿದೇ ಮಾಹಿತಿ ಪಡೆದಿದ್ದೇನೆ. ನೀವು 2022ರಲ್ಲಿ ಸಲ್ಲಿಸಿದ ಬಿ ರಿಪೋರ್ಟ್ ಗಳ ಮಾಹಿತಿ ನೀಡಿಲ್ಲ. ನೀವು ಮಾರ್ಚ್ ಹಾಗೂ ಏಪ್ರಿಲ್‌ನಲ್ಲೂ ಬಿ ರಿಪೋರ್ಟ್ ಸಲ್ಲಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ನೌಕರನಲ್ಲದ ವ್ಯಕ್ತಿ ಡಿಸಿಗೆ ಸಹಾಯಕನಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನಿಮ್ಮ ಎಡಿಜಿಪಿಯನ್ನು ರಕ್ಷಣೆ ಮಾಡಲು ಹೀಗೆ ಮಾಡುತ್ತಿದ್ದೀರಾ? ನನಗೆ ಎಸಿಬಿ ಎಡಿಜಿಪಿ ವಿರುದ್ಧ ಯಾವುದೇ ದ್ವೇಷ ಇಲ್ಲ. ಆದರೆ ಎಡಿಜಿಪಿ ವಿರುದ್ಧ ಅನುಮಾನ ಬರಲು ಅನೇಕ ಕಾರಣಗಳಿವೆ. ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳುವಂತೆ ನಿಮ್ಮ ಎಡಿಜಿಪಿಗೆ ತಿಳಿಸಿ ಎಂದು ಸೂಚಿಸಿದರು.
ವ್ಯವಸ್ಥೆಯಲ್ಲಿ ಒಳ್ಳೆಯದು ಆಗುವುದು ಯಾರಿಗೂ ಬೇಡ. ಭ್ರಷ್ಟಾಚಾರದ ಕ್ಯಾನ್ಸರ್ 4ನೇ ಹಂತಕ್ಕೆ ಹೋಗಲಿ ಎಂದು ಹೀಗೆ ಮಾಡುತ್ತಿದ್ದೀರ ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ | ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವೈರಲ್