ಬೆಂಗಳೂರು: ಶ್ರೀ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಮತ್ತು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠದಿಂದ ಕೆಳಗಿಳಿಯಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಗುರುವಾರ ವಜಾ ಮಾಡಿದೆ.
ಮಠದ ಭಕ್ತರೆಂಬ ನೆಲೆಯಲ್ಲಿ ಎದುರ್ಕುಳ ಈಶ್ವರ ಭಟ್ ಮತ್ತು ಇತರರು ಸಲ್ಲಿಸಿದ ಅರ್ಜಿ (ಡಬ್ಲ್ಯುಪಿ 25124-25129/2016) ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜೀತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾ ಮಾಡಿದೆ.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠದಿಂದ ಇಳಿಯಲು ಆದೇಶ ನೀಡಬೇಕು, ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು, ಕರ್ನಾಟಕದ ಎಲ್ಲಾ ಮಠಗಳ ಆಡಳಿತ ನಿಯಂತ್ರಣಕ್ಕೆ ಒಂದು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಮಠದಲ್ಲಿ ಸಾಕಷ್ಟು ಆರ್ಥಿಕ ಅವ್ಯವಹಾರ ನಡೆಯುತ್ತಿದೆ ಎಂದು ಅರ್ಜಿದಾರರು ದೂರಿದ್ದರೂ, ಯಾವುದೇ ದಾಖಲಾತಿಗಳನ್ನು ನೀಡಿರಲಿಲ್ಲ. ಈ ನಡುವೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸದಂತೆ ಮಠದ ಕಡೆಯಿಂದ ಆಕ್ಷೇಪಣೆ ಸಲ್ಲಿಸಲಾಗಿತ್ತು. ಜೊತೆಗೆ ನ್ಯಾಯಾಲಯವು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅರ್ಜಿದಾರರು ಮನವಿ ಸಲ್ಲಿಸಿದರೆ ಅದನ್ನು ಕಾನೂನಾತ್ಮಕವಾಗಿ ಪರಿಗಣಿಸುವಂತೆ ಮಾಡಿದ್ದ ಕೋರಿಕೆಯ ಆದೇಶವನ್ನು ಹಿಂಪಡೆಯುವಂತೆಯೂ ಅರ್ಜಿಯನ್ನು ಸಲ್ಲಿಸಲಾಗಿತ್ತು.
2016ರಲ್ಲಿ ಸಲ್ಲಿಸಿದ್ದ ಈ ಅರ್ಜಿಯನ್ನು ರಾಜ್ಯ ಹೈಕೋರ್ಟ್ 2019ರಲ್ಲಿ ತಿರಸ್ಕರಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಠದ ವತಿಯಿಂದ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಮರ್ಥನೀಯತೆಯನ್ನು ಪರಿಶೀಲಿಸುವಂತೆ ಮತ್ತೆ ಹೈಕೋರ್ಟ್‍ಗೆ ಸೂಚನೆ ನೀಡಿತ್ತು.
ಅರ್ಜಿದಾರರ ಹಾಗೂ ಮಠದ ವಾದವನ್ನು ಆಲಿಸಿದ ನ್ಯಾಯಪೀಠ, ಅರ್ಜಿ ಸಮರ್ಥನೀಯವಲ್ಲ ಎಂಬ ಮಠದ ವಾದವನ್ನು ಎತ್ತಿಹಿಡಿದು ಅರ್ಜಿ ವಜಾಗೊಳಿಸಿತು. ಹಿರಿಯ ವಕೀಲ ಮನಮೋಹನ್ ಅವರು ಮಠದ ಪರ ವಾದ ಮಂಡಿಸಿದ್ದರು.
ಹಿಂದೆಯೂ ಅರ್ಜಿ ವಜಾ ಆಗಿತ್ತು
ಸಿವಿಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 92 ರಡಿ ಟಿ.ಟಿ.ಹೆಗಡೆ ಮತ್ತು ಲೋಕೇಶ್ ಎಂಬುವವರು ಸಲ್ಲಿಸಿದ್ದ ಇಂಥದ್ದೇ ಅರ್ಜಿಗಳನ್ನು ಬೆಂಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯ 2017ರಲ್ಲೇ ವಜಾ ಮಾಡಿತ್ತು.
ಶ್ರೀಮಠದ ವಿರುದ್ಧ ಷಡ್ಯಂತ್ರದ ಭಾಗವಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಆಕ್ರೋಶಗೊಂಡ ಶ್ರೀಮಠದ 15 ಸಾವಿರಕ್ಕೂ ಹೆಚ್ಚು ಭಕ್ತರು ಹೊಸನಗರದ ಪ್ರಧಾನ ಮಠದಲ್ಲಿ ಶಪಥ ಪರ್ವ ನಡೆಸಿ, ಎಚ್ಚರಿಕೆ ಸಂದೇಶ ರವಾನಿಸಿದ್ದರು. ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪ ಮಡಿಯಾಳ್ ಅವರ ಮಾರ್ಗದರ್ಶನದಲ್ಲಿ ಶ್ರೀಮಠದ ಎಲ್ಲ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿ ನಡೆಯುತ್ತಿದ್ದು, ಶ್ರೀಮಠದ ಪಾರದರ್ಶಕತೆಗೆ ಐಎಸ್‍ಓ ಪ್ರಮಾಣಪತ್ರ ಬಂದಿದೆ ಎಂದು ಮಠ ಹೇಳಿಕೊಂಡಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ನಕ್ಸಲರ ಅಡ್ಡೆಯಾಗಿತ್ತು ಮಠ ಎಂದ ಯತ್ನಾಳ್: ಹೈಕೋರ್ಟ್ CJಗೆ ಪತ್ರ