ಬೆಂಗಳೂರು: ಭಾರತ್ ಜೋಡೋ (Bharat jodo yatra) ಯಾತ್ರೆ ವೇಳೆ ಕೆಜಿಎಫ್-2 ಕನ್ನಡ ಸಿನಿಮಾದ ಸಂಗೀತ (KGF-2 film Music) ಬಳಕೆ ಪ್ರಕರಣ ರಾಹುಲ್ ಗಾಂಧಿ (Rahul Gandhi) ಮತ್ತು ಇತರ ಕಾಂಗ್ರೆಸ್ ನಾಯಕರಿಗೆ ಉರುಳಾಗುವ ಸಾಧ್ಯತೆ ಕಂಡುಬಂದಿದೆ. ತಮ್ಮ ವಿರುದ್ಧದ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಕೋರಿ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ (Karnataka High court) ವಜಾ ಮಾಡಿದೆ. ಈ ಮೂಲಕ ಅವರ ವಿರುದ್ಧ ತನಿಖೆಗೆ ಹಸಿರು ನಿಶಾನೆ ತೋರಿದೆ.
ಭಾರತ್ ಜೋಡೋ ಯಾತ್ರೆಯ ಪ್ರಚಾರ ವಿಡಿಯೊಗೆ ಕೆಜಿಎಫ್-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಹಿರಿಯ ನಾಯಕ ಜೈರಾಮ್ ರಮೇಶ್ ಮತ್ತು ಎಐಸಿಸಿ ಸೋಷಿಯಲ್ ಮೀಡಿಯಾ ಅಂಡ್ ಡಿಜಿಟಲ್ ಮೀಡಿಯಾ ಮುಖ್ಯಸ್ಥರಾದ ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದನ್ನು ರದ್ದು ಮಾಡುವಂತೆ ಕೋರಿ ಕಾಂಗ್ರೆಸ್ ನಾಯಕರು ಮಾಡಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಳ್ಳಿಹಾಕಿದೆ.
ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕಳೆದ ಗುರುವಾರ ನಡೆದು ತೀರ್ಪನ್ನು ಕಾಯ್ದಿರಿಸಲಾಗಿತ್ತು. ಇದೀಗ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿಯನ್ನು ವಜಾ ಮಾಡಿದೆ.
ಏನಿದು ಕೆಜಿಎಫ್ ಹಾಡಿನ ವಿವಾದ?
ಕೆಜಿಎಫ್-2 ಸಿನಿಮಾದ ಮುದ್ರಿತ ಗೀತೆಯ ಹಿನ್ನೆಲೆ ಸಂಗೀತವನ್ನು ಭಾರತ್ ಜೋಡೊ ಯಾತ್ರೆಯಲ್ಲಿ ಬಳಕೆ ಮಾಡಲಾಗಿತ್ತು. ಇದು ಕೃತಿಚೌರ್ಯ ಎಂದು ಎಂಆರ್‌ಟಿ ಮ್ಯೂಸಿಕ್ ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದಲ್ಲಿ ವಾಣಿಜ್ಯ ದಾವೆ ಹೂಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಕಾಂಗ್ರೆಸ್ ಅದನ್ನು ಬಳಕೆ ಮಾಡದಂತೆ ನಿರ್ಬಂಧ ಹೇರಿತ್ತು.
ಇದರ ಆಧಾರದ ಮೇಲೆ ಯಶವಂತಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 403, 465 ಜೊತೆಗೆ 34ರ ಅಡಿ ಹಾಗೂ ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್ 63 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 66ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಈಗ ಹೈಕೋರ್ಟ್ ವಜಾ ಮಾಡಿದೆ.
ಅರ್ಜಿದಾರರ ವಾದ ಏನಾಗಿತ್ತು?
ಕೆಜಿಎಫ್ 2 ಹಾಡಿನ ಬಳಕೆ ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾಯಿದೆ ಉಲ್ಲಂಘನೆ ಮಾಡಿದಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ, ಪ್ರತಿಬಂಧಕಾದೇಶವನ್ನೂ ಪಡೆದುಕೊಳ್ಳಲಾಗಿದೆ. ಇದು ಕ್ರಿಮಿನಲ್ ಅಪರಾಧ ಪ್ರಕರಣವಾಗಿರುವುದರಿಂದ ತನಿಖೆ ನಡೆಯಬೇಕು. ಹಕ್ಕು ಸ್ವಾಮ್ಯ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ರೂಪದಲ್ಲಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ದೂರುದಾರ ಎಂಆರ್‌ಟಿ ಮ್ಯೂಸಿಕ್ ಪರ ವಕೀಲರಾದ ವಕೀಲ ಪವನ್ ಕುಮಾರ್ ಅವರ ಪರವಾಗಿ ಹಿರಿಯ ವಕೀಲ ಎಸ್ ಶ್ರೀರಂಗ ವಾದಿಸಿದ್ದರು.
ಕಾಂಗ್ರೆಸ್ ಪರ ವಕೀಲರ ವಾದವೇನಿತ್ತು?
ಭಾರತ್ ಜೋಡೋ ಆಯೋಜಕರ ಪರವಾಗಿ ವಕೀಲೆ ಲೀಲಾ ದೇವಾಡಿಗ ಅವರು ವಕಾಲತ್ತು ಹಾಕಿದ್ದರು. ಅವರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್ 63ರ ಅಡಿ ಅಪರಾಧ ಎನಿಸಲು ಆರೋಪಿಯು ಉದ್ದೇಶಪೂರ್ವಕವಾಗಿ ಹಕ್ಕುಸ್ವಾಮ್ಯ ಉಲ್ಲಂಘಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಆ ಉದ್ದೇಶವಿಲ್ಲ. ಇದಲ್ಲದೇ ಅರ್ಜಿದಾರರು ಯಾವುದೇ ರೀತಿಯಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ ಆರ್ಥಿಕ ಲಾಭ ಪಡೆದಿಲ್ಲ” ಎಂದಿದ್ದರು.
2022ರ ಡಿಸೆಂಬರ್ 16ರಂದು ಎಫ್‌ಐಆರ್‌ಗೆ ತಡೆ ನೀಡಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ಅಂತಿಮ ವಿಚಾರಣೆ ನಡೆದು ಈಗ ರಾಹುಲ್ ಮತ್ತು ಟೀಮ್ ವಿರುದ್ಧ ತನಿಖೆಗೆ ಹಸಿರು ನಿಶಾನೆ ತೋರಿದಂತಾಗಿವೆ.
ಹೈಕೋರ್ಟ್ ಹೇಳಿದ್ದೇನು?
- ಅರ್ಜಿದಾರರು ಅನುಮತಿ ಪಡೆಯದೇ ಸೋರ್ಸ್ ಕೋಡ್ ತಿರುಚಿದ್ದು (ಟ್ಯಾಂಪರ್), ಅದನ್ನು ಬಳಕೆ ಮಾಡಿರುವುದು ಅನುಮಾನಕ್ಕೆ ಆಸ್ಪದವಿಲ್ಲದೆ ದೂರುದಾರರ ಕೃತಿಸ್ವಾಮ್ಯದ ಉಲ್ಲಂಘನೆಗೆ ಸಮನಾಗಿದೆ.
- ಅರ್ಜಿದಾರರು ದೂರುದಾರರ ಕೃತಿಸ್ವಾಮ್ಯವನ್ನು ಲಘುವಾದ ರೀತಿಯಲ್ಲಿ ಬಳಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಸಾಕ್ಷ್ಯ ಪರಿಶೀಲಿಸಬೇಕಾದ ಪ್ರಕರಣವಾಗಿದ್ದು, ತನಿಖೆಯಿಂದ ಹೊರಬರಬೇಕಿದೆ.
- ಇದನ್ನು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಿ ಮುಂದಿನ ತನಿಖೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Bharat jodo | ಕೆಜಿಎಫ್-2 ಸುಲ್ತಾನ ಹಾಡಿನ ಸಂಗೀತ ಬಳಕೆ; ರಾಹುಲ್ ಗಾಂಧಿ ಸೇರಿ ಮೂವರ ವಿರುದ್ಧ ಎಫ್‌ಐಆರ್