Site icon Vistara News

Divorce case : ಪತ್ನಿಗೆ 25 ಲಕ್ಷ ಜೀವನಾಂಶ ಕೊಡಲು ಆಗದು ಎಂದ ಗಂಡ, ಹಾಗಿದ್ದರೆ 40 ಲಕ್ಷ ಕೊಡಬೇಕು ಎಂದ ಹೈಕೋರ್ಟ್‌!

Education News Let the mindset of schools change HC refuses to quash student suicide case

ಬೆಂಗಳೂರು: ಹೆಂಡತಿ, ಮಕ್ಕಳೊಂದಿಗೆ ಸಂಬಂಧ ಮುರಿದುಕೊಂಡಿದ್ದ ಕಾರಣಕ್ಕಾಗಿ ಅವರಿಬ್ಬರೂ ವಿಚ್ಚೇದನ (Divorce case) ನೀಡಿದರು. ಕೌಟುಂಬಿಕ ನ್ಯಾಯಾಲಯ ಪತ್ನಿಯ ಜೀವನ ನಿರ್ವಹಣೆ ಮತ್ತು ಮಕ್ಕಳ ವ್ಯಾಸಂಗವನ್ನು ಪರಿಗಣಿಸಿ ೨೫ ಲಕ್ಷ ರೂ. ಜೀವನಾಂಶ ನೀಡುವಂತೆ ಗಂಡನಿಗೆ ಸೂಚಿಸಿತು. ಈ ನಡುವೆ ಜೀವನಾಂಶವನ್ನು ಹೆಚ್ಚಿಸುವಂತೆ ಪತ್ನಿ ಮತ್ತು ಕಡಿಮೆ ಮಾಡಿ ಎಂದು ಪತಿ ಇಬ್ಬರೂ ಹೈಕೋರ್ಟ್‌ ಮೊರೆ ಹೊಕ್ಕಿದ್ದರು. ಈಗ ಹೈಕೋರ್ಟ್‌ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಅವನು ೨೫ ಲಕ್ಷದ ಬದಲು ೪೦ ಲಕ್ಷ ರೂ. ಜೀವನಾಂಶ ಕೊಡಬೇಕು ಎಂದು ಸೂಚಿಸಿದೆ.

ಏನಿದು ವಿಚಿತ್ರ ಪ್ರಕರಣ?

ಅವರಿಬ್ಬರೂ ದಕ್ಷಿಣ ಕನ್ನಡದವರು. ಮದುವೆಯಾಗಿ ೧೯ ವರ್ಷ ಆಗಿದೆ. ಇಬ್ಬರು ಗಂಡು ಮಕ್ಕಳು. ೨೦೦೩ರಲ್ಲಿ ಮದುವೆಯಾದ ಬಳಿಕ ಆರು ವರ್ಷ ದುಬೈನಲ್ಲಿ ನೆಲೆಸಿದ್ದರು. ಈ ನಡುವೆ ಭಿನ್ನಾಭಿಪ್ರಾಯಗಳಿಂದ ಸಂಬಂಧ ಹಳಸಿದಾಗ 2009ರ ಡಿಸೆಂಬರ್‌ನಲ್ಲಿ ಪತ್ನಿ, ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ದುಬೈ ತೊರೆದು ಮಂಗಳೂರಿನ ತಾಯಿಯ ಮನೆಗೆ ಬಂದಿದ್ದರು.

ಈ ನಡುವೆ, ಪತ್ನಿ ಮತ್ತು ಮಕ್ಕಳನ್ನು ಮರಳಿ ಕರೆ ತರಲು ಗಂಡ ಪ್ರಯತ್ನಿಸಿದರಾದರೂ ಫಲ ಸಿಗಲಿಲ್ಲ. ಹೀಗಾಗಿ ಗಂಡ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿಯು ತನ್ನ ಹಾಗೂ ಮಕ್ಕಳನ್ನು ನಿರ್ಲಕ್ಷ್ಯ ಮಾಡುವುದಲ್ಲದೇ ಅನಗತ್ಯವಾಗಿ ನಿಂದಿಸುತ್ತಿದ್ದರು. ಮದ್ಯ ವ್ಯಸನಿಯಾಗಿದ್ದ ಅವರಿಗೆ ಬೇರೆ ಹೆಣ್ಣು ಮಕ್ಕಳ ಜತೆಗೂ ಸಂಬಂಧವಿತ್ತು. ಅವರ ಕಿರುಕುಳದಿಂದಾಗಿ ಮಕ್ಕಳೊಂದಿಗೆ ತವರು ಮನೆ ಸೇರಬೇಕಾಯಿತು ಎಂದು ಹೇಳಿದ್ದರು.

ಇಬ್ಬರ ವಾದಗಳನ್ನೂ ಕೇಳಿದ ದಕ್ಷಿಣ ಕನ್ನಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ 25 ಲಕ್ಷ ರೂ. ಶಾಶ್ವತ ಜೀವನಾಂಶ ನೀಡುವಂತೆ ಪತಿಗೆ 2015ರ ಜುಲೈ 1ರಂದು ಆದೇಶಿಸಿತ್ತು. ಈ ಮೊತ್ತ ಕಡಿತಗೊಳಿಸುವಂತೆ ಕೋರಿ ಪತಿ ಮತ್ತು ಜೀವನಾಂಶ ಮೊತ್ತ ಹೆಚ್ಚಿಸುವಂತೆ ಪತ್ನಿ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಪತ್ನಿ ಪರ ವಕೀಲರು, ದಂಪತಿ 13 ವರ್ಷದಿಂದ ದೂರವಿದ್ದಾರೆ. ಅವರು ಮತ್ತೆ ಸಹ ಜೀವನ ನಡೆಸಲು ಕಷ್ಟ. ಪತಿಯು ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಉತ್ತಮ ವರಮಾನ ಗಳಿಸುತ್ತಿದ್ದಾರೆ. ಪತಿಯನ್ನು ತೊರೆದು ಬಂದ ಕ್ಷಣದಿಂದ ಮಕ್ಕಳನ್ನು ಪತ್ನಿಯೇ ಪೋಷಿಸುತ್ತಿದ್ದಾರೆ. ಅವರಿಗೆ ಸ್ವತಂತ್ರ ಆದಾಯ ಮೂಲವಿಲ್ಲ. ಆದ್ದರಿಂದ ಶಾಶ್ವತ ಜೀವನಾಂಶ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೋರಿದರು.

ಅಲ್ಲದೆ, ಕೌಟುಂಬಿಕ ನ್ಯಾಯಾಲಯವು 2015ರಲ್ಲಿ ₹25 ಲಕ್ಷ ಜೀವನಾಂಶ ಘೋಷಿಸಿದ್ದರೂ ಅದನ್ನು ಈವರೆಗೂ ಪತಿ ಪಾವತಿಸಿಲ್ಲ. ಸದ್ಯ ಜೀವನ ನಿರ್ವಹಣೆ ವೆಚ್ಚ ಹೆಚ್ಚಿರುವುದರಿಂದ ಜೀವನಾಂಶ ಏರಿಕೆ ಮಾಡಬೇಕು ಎಂದು ಪತ್ನಿ ಪರ ವಕೀಲರು ಕೋರಿದ್ದರು.

ಪತಿಯ ಪರ ವಕೀಲರು, ಮೊದಲ ಮಗ ಮುಂಬೈನ ಐಐಟಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಪತಿಯೇ ವಹಿಸಿಕೊಂಡಿದ್ದಾರೆ. ಎರಡನೇ ಮಗನ ಶೈಕ್ಷಣಿಕ ವೆಚ್ಚ ಭರಿಸಲು ಸಿದ್ಧವಾಗಿದ್ದಾರೆ. ಆದರೆ ವಿದ್ಯಾವಂತೆಯಾಗಿರುವ ಪತ್ನಿಗೆ ಯಾವುದೇ ಆದಾಯ ಮೂಲವಿಲ್ಲ ಎಂಬುದನ್ನು ಒಪ್ಪಲಾಗದು. ಮೊದಲನೇ ಮಗನ ವಿದ್ಯಾಭ್ಯಾಸಕ್ಕಾಗಿ ಪತಿ ದೊಡ್ಡ ಮಟ್ಟದ ಸಾಲ ಪಡೆದಿದ್ದಾರೆ. ಆದರಿಂದ ಪತ್ನಿಗೆ ಹೆಚ್ಚಿನ ಮೊತ್ತದ ಜೀವನಾಂಶ ನೀಡಲಾಗದು. ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶವನ್ನು ಕಡಿತಗೊಳಿಸಬೇಕು ಎಂದು ಕೋರಿದ್ದರು.

ವಿಚ್ಛೇದಿತ ಪತ್ನಿಯ ಜೀವನ ನಿರ್ವಹಣೆ ಹಾಗೂ ಆಕೆಯ ಸುಪರ್ದಿಯಲ್ಲಿರುವ ಎರಡನೇ ಮಗನ ವೃತ್ತಿಪರ ಕೋರ್ಸ್ ವ್ಯಾಸಂಗದ ವೆಚ್ಚ ಪರಿಗಣಿಸಿ, ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ₹25 ಲಕ್ಷ ಶಾಶ್ವತ ಜೀವನಾಂಶ ಮೊತ್ತವನ್ನು ₹40 ಲಕ್ಷಕ್ಕೆ ಹೆಚ್ಚಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಪ್ರಕರಣದಲ್ಲಿ ಮೇಲ್ಮನವಿದಾರರ ಮೊದಲ ಮಗ ಮುಂಬೈ ಐಐಟಿಯಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ₹26.50 ಲಕ್ಷ ವ್ಯಯಿಸಲಾಗುತ್ತಿದೆ. ಎರಡನೇ ಮಗ ಸದ್ಯ ಪತ್ನಿಯ ಸುಪರ್ದಿಯಲ್ಲಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಮೊದಲನೆ ಮಗನ ವ್ಯಾಸಂಗದ ಸಂಪೂರ್ಣ ವೆಚ್ಚದ ಜವಾಬ್ದಾರಿ ಹೊತ್ತಿರುವಂತೆ ಎರಡನೇ ಮಗನ ವಿದ್ಯಾಭ್ಯಾಸದ ಖರ್ಚನ್ನೂ ತಂದೆಯೇ ಹೊರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಎರಡನೇ ಪುತ್ರನ ವೃತ್ತಿಪರ ಕೋರ್ಸ್ ವ್ಯಾಸಂಗ ಮತ್ತು ಪತ್ನಿಯ ಜೀವನ ನಿರ್ವಹಣೆ ಪರಿಗಣಿಸಿದಾಗ ಜೀವನಾಂಶವನ್ನು ಹೆಚ್ಚಿಸುವುದು ಸೂಕ್ತ. ಅದರಂತೆ ₹40 ಲಕ್ಷ ಜೀವನಾಂಶ ನಿಗದಿಪಡಿಸಿದರೆ, ಎರಡನೇ ಮಗನ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚ ನೋಡಿಕೊಳ್ಳಬಹುದು ಎಂದು ತೀರ್ಮಾನಿಸಿದ ಹೈಕೋರ್ಟ್, ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶದ ಮೊತ್ತವನ್ನು ₹40 ಲಕ್ಷಕ್ಕೆ ಹೆಚ್ಚಿಸಿದೆ. ಆ ಪೈಕಿ ಮೂರು ತಿಂಗಳ ಒಳಗೆ ₹10 ಲಕ್ಷ ಮತ್ತು ಉಳಿದ ₹30 ಲಕ್ಷವನ್ನು ಒಂದು ವರ್ಷದ ಒಳಗೆ ಎರಡು ಕಂತಿನಲ್ಲಿ ಪತ್ನಿಗೆ ಪಾವತಿಸುವಂತೆ ಪತಿಗೆ ಆದೇಶಿಸಿದೆ.

ಇದನ್ನೂ ಓದಿ | High court order | ಪತ್ನಿಯಿಂದ ಜೀವನಾಂಶ ಕೊಡಿಸಿ ಎಂದು ಕೇಳಿದ ಸೋಮಾರಿ ಗಂಡನಿಗೆ ಹೈಕೋರ್ಟ್‌ ತಪರಾಕಿ

Exit mobile version