ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ವಿರುದ್ಧ ಮಾತನಾಡಿದ್ದಕ್ಕೆ ತಮಗೆ ಬೆದರಿಕೆ ಒಡ್ಡಲಾಗಿತ್ತು ಎಂದು ಕಳೆದ ವಾರ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಆರೋಪವನ್ನು ದಾಖಲು ಮಾಡಿಸಿದ್ದಾರೆ.
ನಿರ್ಗಮಿತ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಆವಸ್ಥಿ ಅವರ ಬೀಳ್ಕೊಡುಗೆ ನಿಮಿತ್ತ ಆಯೋಜಿಸಿದ್ದ ಔತಣ ಕೂಟದಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರ ಮೂಲಕ ತಮಗೆ ವರ್ಗಾವಣೆ ಬೆದರಿಕೆ ಒಡ್ಡಲಾಗಿತ್ತು ಎನ್ನುವುದನ್ನು ನ್ಯಾ. ಎಚ್.ಪಿ. ಸಂದೇಶ್ ಲಿಖಿತವಾಗಿ ಸೋಮವಾರ ದಾಖಲಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಆರೋಪಿಯಾಗಿರುವ ಪ್ರಕರಣವನ್ನು ತೀವ್ರ ನಿಗಾ ವಹಿಸುವುದನ್ನು ಮುಂದುವರಿಸಿದರೆ ವರ್ಗಾವಣೆ ಮಾಡುವುದಾಗಿ ಪರೋಕ್ಷವಾಗಿ ಬೆದರಿಕೆ ಒಡ್ಡಲಾಗಿತ್ತು ಎಂದು ಜುಲೈ 4ರ ವಿಚಾರಣೆ ಸಂದರ್ಭದಲ್ಲಿ ನ್ಯಾ. ಎಚ್.ಪಿ. ಸಂದೇಶ್ ಮೌಖಿಕವಾಗಿ ತಿಳಿಸಿದ್ದರು.
ಈ ಹೇಳಿಕೆ ನ್ಯಾಯಾಂಗ ಹಾಗೂ ಅಧಿಕಾರಿ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ನಂತರ ಮತ್ತೊಮ್ಮೆ ವಿಚಾರಣೆ ವೇಳೆ ವಿಚಾರವನ್ನು ಪ್ರಸ್ತಾಪಿಸಿದ್ದ ನ್ಯಾ. ಎಚ್.ಪಿ. ಸಂದೇಶ್, ಇದಕ್ಕೆಲ್ಲ ನಾನು ಹೆದರುವುದಿಲ್ಲ. ಬಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧ. ನಾನು ಕೃಷಿ ಕುಟುಂಬದಿಂದ ಬಂದವನು, ವಾಪಸ್ ತೆರಳಿ ಕೃಷಿ ಮಾಡಲೂ ಸಿದ್ಧ ಎಂದಿದ್ದರು. ಅಂದು ಮೌಖಿಕವಾಗಿ ಬಹಿರಂಗಪಡಿಸಿದ್ದ ವಿಚಾರವನ್ನು ಸೋಮವಾರ ಲಿಖಿತ ರೂಪದಲ್ಲಿ ದಾಖಲಿಸಲಾಯಿತು.
ಮುಂದೂಡಿಕೆಗೆ ಮನವಿ
5 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಮಹೇಶ್ ಜಾಮೀನು ಅರ್ಜಿ ವಿಚಾರಣೆಗೆ ಸೋಮವಾರ ವಿಚಾರಣೆ ಆರಂಭವಾದಾಗ, ಎಸಿಬಿ ಪರವಾಗಿ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. ಸೀಮಂತ್‌ಕುಮಾರ್ ಸಿಂಗ್ ಅವರ ಕುರಿತು ಈ ಹಿಂದೆ ನ್ಯಾಯಪೀಠ ದಾಖಲಿಸಿರುವ ಹೇಳಿಕೆಗೆ ಹಾಗೂ ಈ ಕುರಿತು ನೀಡಿರುವ ನಿರ್ದೇಶನಗಳಿಗೆ ತಡೆ ನೀಡುವಂತೆ ಕಕ್ಷಿದಾರರು ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದೆ. ಹಾಗಾಗಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ | ಎಸಿಬಿ ಸೀಮಂತ್‌ಕುಮಾರ್ ಸಿಂಗ್ ವಿರುದ್ಧ ತನಿಖೆಯಾಗಲಿ: ನ್ಯಾ. ಸಂದೇಶ್‌ಗೆ ವಕೀಲರ ಸಂಘ ಬೆಂಬಲ
ಈ ಕುರಿತು ಪ್ರತಿಕ್ರಿಯಿಸಿದ ನ್ಯಾ. ಎಚ್.ಪಿ. ಸಂದೇಶ್ ಲಿಖಿತವಾಗಿ ಹೇಳಿಕೆಯನ್ನು ದಾಖಲಿಸಿದರು. 2022ರ ಜೂನ್ 22ರಂದು ಪ್ರರಕಣದ ವಿಚಾರಣೆ ನಡೆಸುವಾಗ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಎಸಿಬಿ ನಿಷ್ಕ್ರಿಯತೆ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿ ಜುಲೈ 4ಕ್ಕೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಇದರ ನಡುವೆ, ಮುಖ್ಯನ್ಯಾಯಮೂರ್ತಿಗಳ ನಿವೃತ್ತಿ ಹಿನ್ನೆಲೆಯಲ್ಲಿ ಭೋಜನ ಕೂಟವನ್ನು ಜುಲೈ 1ರಂದು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕದಲ್ಲಿ ಬಂದು ಕುಳಿತು, ತಮಗೆ ದೆಹಲಿಯಿಂದ ಈ ಕುರಿತು ಕರೆ ಬಂದಿರುವುದಾಗಿ ತಿಳಿಸಿದರು. ದೂರವಾಣಿ ಕರೆ ಮಾಡಿದವರು ನನ್ನ ಕುರಿತು ಮಾಹಿತಿ ಕೇಳಿದ್ದಾರೆ ಎಂದು ಹೇಳಿದರು. ನಾನು ಯಾವುದೇ ರಾಜಕೀಯ ಪಕ್ಷದ ಜತೆಗೆ ಸಂಬಂಧ ಹೊಂದಿಲ್ಲ ಎಂದು ನಾನು ಹೇಳಿದೆ. ಇಷ್ಟಕ್ಕೂ ನ್ಯಾಯಾಧೀಶರು ಸುಮ್ಮನಾಗದೆ, ಎಡಿಜಿಪಿ (ಸೀಮಂತ್‌ಕುಮಾರ್ ಸಿಂಗ್) ಉತ್ತರ ಭಾರತದವರಾಗಿದ್ದು, ಬಹಳ ಪ್ರಭಾವಶಾಲಿಯಾಗಿದ್ದಾರೆ. ನಿಮ್ಮ ವರ್ಗಾವಣೆಯನ್ನೂ ಮಾಡಿಸಬಹುದು ಎಂದು ತಿಳಿಸಿದರು.
ಈ ರೀತಿ ತಮಗೆ ತಿಳಿಸಿದ್ದು ಬೆದರಿಕೆ ಅಷ್ಟೆ ಅಲ್ಲದೆ ನ್ಯಾಯಾಂಗದ ಸ್ವತಂತ್ರ ವಿಚಾರಣೆಗೆ ಮಾಡಿದ ಅಡ್ಡಿಯೂ ಆಗಿದೆ ಎಂದು ತಿಳಿಸಿದ ನ್ಯಾ. ಸಂದೇಶ್, ಲಿಖಿತ ದಾಖಲೆಯಲ್ಲಿ ಆ ನ್ಯಾಯಮೂರ್ತಿಯ ಹೆಸರನ್ನು ಬರೆಸಲಿಲ್ಲ. ನನಗೆ ಈ ರೀತಿ ತಿಳಿಸಿದ ನ್ಯಾಯಮೂರ್ತಿಯ ಹೆಸರನ್ನು, ಯಾರಿಗೆ ತಿಳಿಸಬೇಕೊ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಕಳಂಕಿತರನ್ನು ನೇಮಿಸಬೇಡಿ
ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಂದುವರಿಸಿದ ನ್ಯಾ. ಎಚ್.ಪಿ. ಸಂದೇಶ್ ಅವರು, ಎಸಿಬಿಯಂತಹ ಸಂಸ್ಥೆಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸಬಾರದು. ಮುಖ್ಯಕಾರ್ಯದರ್ಶಿಯವರು ಈ ಕುರಿತು ಎಚ್ಚರಿಕೆ ವಹಿಸಬೇಕು. ಇಲ್ಲಿಗೆ ನೇಮಕವಾಗುವ ಅಧಿಕಾರಿ ವಿಶ್ವಾಸಾರ್ಹತೆಯನ್ನು ಹೊಂದಿರಬೇಕು ಹಾಗೂ ಬಾಹ್ಯ ಒತ್ತಡದ ಕಾರಣಕ್ಕೆ ನೇಮಿಸಬಾರದು. ಯಾವುದೇ ಅಧಿಕಾರಿ ಅಥವಾ ಆತನ ಕುಟುಂಬದವರು ಎಸಿಬಿ ಅಥವಾ ಲೋಕಾಯುಕ್ತದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದರೆ ಅಂತಹ ಅಧಿಕಾರಿಯನ್ನು ನೇಮಕ ಮಾಡಬಾರದು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.
ಮತ್ತೆ ಎಸಿಬಿಗೆ ತರಾಟೆ
ಪ್ರರಕಣದಲ್ಲಿ ಆರೋಪಿಗಳನ್ನು ರಕ್ಷಣೆ ಮಾಡಲಾಗುತ್ತಿದೆಯೇ ಎಂದು ಎಸಿಬಿ ವಿರುದ್ಧ ನ್ಯಾ. ಎಚ್.ಪಿ. ಸಂದೇಶ್ ಟೀಕಿಸಿದರು. ಡಿಸಿ ಕಚೇರಿಯ ಇತರೆ ಸಿಬ್ಬಂದಿಯೇ, ಮಹೇಶ್ ತಮ್ಮ ಕಚೇರಿಯ ಸಿಬ್ಬಂದಿ ಎಂದು ಹೇಳುತ್ತಾರೆ. ಆದರೆ ಎಸಿಬಿಯವರು ಮಾತ್ರ, ಮಹೇಶ್ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಅಲ್ಲ ಎಂದು ಹೇಳುತ್ತಾರೆ ಎಂದು ತಿಳಿಸಿದರು. ಎಸಿಬಿ ಪರ ವಾದ ಮಂಡನೆಗೆ ಆಗಮಿಸಿದ್ದ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರ ಕುರಿತು ಮಾತನಾಡಿದ ನ್ಯಾ. ಎಚ್.ಪಿ. ಸಂದೇಶ್, ಎಸಿಬಿ ಬೇಡ ಲೋಕಾಯುಕ್ತ ಬೇಕು ಎಂದು ವಿಭಾಗೀಯ ಪೀಠದಲ್ಲಿ ವಾದ ಮಂಡಿಸುತ್ತೀರಿ. ಆದರೆ ಇಲ್ಲಿ ಎಸಿಬಿ ಪರವಾಗಿಯೇ ವಾದ ಮಂಡಿಸುತ್ತಿದ್ದೀರಿ. ಯಾವುದಾದರೂ ಒಂದು ನಿಲುವು ತಳೆದುಕೊಳ್ಳಿ ಎಂದು ತಿಳಿಸಿದರು.
ಇದನ್ನೂ ಓದಿ | ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವೈರಲ್