Site icon Vistara News

High court order : ಹುಬ್ಬಳ್ಳಿ ಠಾಣೆಗೆ ದಾಳಿ ಮಾಡಿದ 40 ಜನರಿಗೆ ಜಾಮೀನು ನಕಾರ, NIA ಕೋರ್ಟ್‌ ಸ್ಥಾಪನೆಗೆ ಸಲಹೆ

high-court-order: High court rejects bail plea of 40 accused in hubbali incident

high-court-order: High court rejects bail plea of 40 accused in hubbali incident

ಹುಬ್ಬಳ್ಳಿ: 2022ರ ಏಪ್ರಿಲ್‌ನಲ್ಲಿ ಮಸೀದಿಯ ಗುಮ್ಮಟದ ಮೇಲೆ ಭಗವಾಧ್ವಜ ಹಾರಾಡುತ್ತಿರುವಂತಹ ಚಿತ್ರವೊಂದನ್ನು ತಮ್ಮ ವಾಟ್ಸ್‌ ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡ ಘಟನೆಯನ್ನು ಆಧರಿಸಿ ನಡೆದ ಹುಬ್ಬಳ್ಳಿ ಗಲಭೆಯ 40 ಮಂದಿ ಆರೋಪಿಗಳಿಗೆ ಹೈಕೋರ್ಟ್‌ (High court order) ಜಾಮೀನು ನಿರಾಕರಿಸಿದೆ.

ಸ್ಟೇಟಸ್‌ ಹಾಕಿದವವನನ್ನು ಬಂಧಿಸಬೇಕು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್‌ ಠಾಣೆಯ ಮುಂದೆ ಜಮಾಯಿಸಿದ ಜನರು ದೊಂಬಿ ಎಬ್ಬಿಸಿದ್ದರು. ಈ ಗಲಭೆ ಪ್ರಕರಣದಲ್ಲಿನ 40 ಆರೋಪಿಗಳಿಗೆ ಜಾಮೀನು ನೀಡಲಾಗದು ಎಂದು ಕೋರ್ಟ್‌ ಹೇಳಿದೆ.

ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ 2022ರ ಏಪ್ರಿಲ್‌ ಮಧ್ಯಭಾಗದಲ್ಲಿ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿಯ ಶೋಯೆಬ್‌ ಅಲಿ ಅಲಿಯಾಸ್‌ ಶಾಜಿದ್ ಅಲಿ ಎಂಬುವರೂ ಸೇರಿದಂತೆ ಒಟ್ಟು 40 ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾಗೊಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು, ಸಾರ್ವಜನಿಕ ಆಸ್ತಿ ಹಾನಿಗೆ ತಡೆ ಕಾಯಿದೆ–1984 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ–1967ರ ವಿವಿಧ ಸೆಕ್ಷನ್‌ಗಳ ಅಡಿ 140 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ 40 ಆರೋಪಿಗಳು ಕೋರಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎನ್‌ಐಎ (ರಾಷ್ಟ್ರೀಯ ತನಿಖಾ ದಳದ) ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಬಂಧನದ ಭರವಸೆ ನೀಡಿದರೂ ಅಟ್ಯಾಕ್

ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಎಂ.ಶೀಲವಂತ ಅವರು, ಘಟನೆ ನಡೆಯುವ ಮುನ್ನ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೂ ಆರೋಪಿಗಳು ಅದನ್ನು ಲೆಕ್ಕಿಸದೆ, ಸಾವಿರಾರು ಸಂಖ್ಯೆಯಲ್ಲಿ ಠಾಣೆಯ ಮುಂದೆ ಜಮಾಯಿಸಿ ಪೊಲೀಸರ ಮೇಲೆ ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದಿದ್ದಾರೆ. ಸರ್ಕಾರಿ ವಾಹನಗಳನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಜಖಂಗೊಳಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗುರುತರ ಅಪರಾಧ ಎಸಗಿದ್ದಾರೆ. ಆದಕಾರಣ ಜಾಮೀನು‌ ನೀಡಬಾರದು ಎಂಬ ವಾದಕ್ಕೆ ಕೋರ್ಟ್‌ ಮನ್ನಣೆ ನೀಡಿದೆ.

ಮೂರು ವಿಭಾಗದಲ್ಲಿ ಎನ್‌ಐಎ ಕೋರ್ಟ್‌ ಸ್ಥಾಪನೆಗೆ ಶಿಫಾರಸು

ಈ ನಡುವೆ ನ್ಯಾಯಮೂರ್ತಿಗಳು ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಎನ್‌ಐಎ ನ್ಯಾಯಾಲಯ ಸ್ಥಾಪನೆಗೂ ಕೋರ್ಟ್‌ ಸಲಹೆ ನೀಡಿದೆ.

ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯವು ಎನ್‌ಐಎ ಪ್ರಕರಣಗಳ ಜೊತೆಗೆ ಇತರೆ ಪ್ರಕರಣಗಳನ್ನೂ ವಿಚಾರಣೆ ನಡೆಸುತ್ತಿದ್ದು, ಇದರಿಂದ ಎನ್‌ಐಎ ಪ್ರಕರಣಗಳ ವಿಚಾರಣೆಯ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಎನ್‌ಐಎ ದಾಖಲಿಸುವ ಪ್ರಕರಣಗಳ ಶೀಘ್ರ ವಿಚಾರಣೆಗಾಗಿ ಬೆಳಗಾವಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಗಳನ್ನು ಮುಂದಿನ ಆರು ತಿಂಗಳಲ್ಲಿ ರಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಬೇರೆ ಬೇರೆ ವಿಭಾಗಗಳಲ್ಲಿ ವಿಶೇಷ ನ್ಯಾಯಾಲಯಗಳ ರಚನೆ ಮಾಡದೇ ಹೋದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮೇಲಿರುವ ಹೊರೆ ಹೆಚ್ಚಾಗಲಿದೆ. ಇದು ಸಂವಿಧಾನದ 14 ಮತ್ತು 21ನೇ ವಿಧಿಗಳಲ್ಲಿ ಕೊಡಮಾಡಲಾಗಿರುವ ಸಮಾನತೆ ಮತ್ತು ತ್ವರಿತ ವಿಚಾರಣೆಯ ಹಕ್ಕುಗಳಿಗೆ ವಿರುದ್ಧವಾಗಲಿದೆ ಎನ್ನುವುದು ಕೋರ್ಟ್‌ ಅಭಿಪ್ರಾಯ.

ಇದನ್ನೂ ಓದಿ : High court order : ವಿಧವಾ‌ ವೇತನ ವಂಚನೆ; 80 ವರ್ಷದ ನಿವೃತ್ತ ಅಧಿಕಾರಿಯ ಶಿಕ್ಷೆಯನ್ನು 1 ದಿನಕ್ಕೆ ಇಳಿಸಿದ ಕೋರ್ಟ್

Exit mobile version