ಬೆಂಗಳೂರು: 2ನೇ ಪೋಕ್ಸೊ ಪ್ರಕರಣದಲ್ಲಿ ಮುರುಘಾಶ್ರೀಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಬಂಧನವಾದ ಕೆಲವೇ ನಿಮಿಷಗಳಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಉಚ್ಚ ನ್ಯಾಯಾಲಯ ಆದೇಶಿಸಿದೆ. ಮೊದಲ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಐದೇ ದಿನಗಳಲ್ಲಿ 2ನೇ ಪೋಕ್ಸೊ ಪ್ರಕರಣದಲ್ಲಿ ಶ್ರೀಗಳನ್ನು ಮತ್ತೆ ಬಂಧಿಸಲಾಗಿತ್ತು. ಚಿತ್ರದುರ್ಗ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಶ್ರೀಗಳ ಬಿಡುಗಡೆಗೆ ಹೈಕೋರ್ಟ್ ಸೂಚಿಸಿದೆ.
ಚಿತ್ರದುರ್ಗದಲ್ಲಿ ಇರದಂತೆ ಹೈಕೋರ್ಟ್ ಅದೇಶ ಮಾಡಿದೆ. ಆದರೂ, ಸರ್ಕಾರದ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡಿ ಬಂಧನ ವಾರಂಟ್‌ಗೆ ಮನವಿ ಮಾಡಿದ್ದರು. ಇದರಿಂದ ಜಾಮೀನು ರಹಿತ ವಾರಂಟ್ ಹೊರಡಿಸಿ, ಸ್ವಾಮೀಜಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದು ಹೈಕೋರ್ಟ್ ಆದೇಶದ ಉಲ್ಲಂಘನೆ ಆಗಿದೆ ಎಂದು ಮುರುಘಾಶ್ರೀ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದಾರೆ.
ಇದನ್ನು ಓದಿ | Car Accident: ಕೈ ನಾಯಕಿ ವೀಣಾ ಕಾಶಪ್ಪನವರ್ ಕಾರು ಅಪಘಾತ; ಅಪಾಯದಿಂದ ಪಾರು
ಈ ವೇಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ತಮ್ಮ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಹೀಗಾದರೆ ಹೈಕೋರ್ಟ್ ಕ್ರಮಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರು ಜಾಮೀರು ರಹಿತ ಬಂಧನ ವಾರಂಟ್‌ಗೆ ತಡೆಯಾಜ್ಞೆ ನೀಡಿದ್ದಾರೆ.
ದಾವಣಗೆರೆ ವಿರಕ್ತ ಮಠದಲ್ಲಿದ್ದ ಸ್ವಾಮೀಜಿಯನ್ನು ಸೋಮವಾರ ಮಧ್ಯಾಹ್ನ ಬಂಧಿಸಿ ಚಿತ್ರದುರ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿತ್ತು. ನಂತರ ಮುರುಘಾಶ್ರೀಗಳು ಮತ್ತೆ ಜೈಲು ಸೇರುವುದು ಗ್ಯಾರಂಟಿಯಾಗಿತ್ತು, ಆದರೆ, ಜಾಮೀನು ರಹಿತ ಬಂಧನ ವಾರಂಟ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಕರಾರು ಅರ್ಜಿ ಸಲ್ಲಿಸುತ್ತೇವೆ
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಬಾಲಕಿಯರ ಪರ ವಕೀಲ ಶ್ರೀನಿವಾಸ್ ಅವರು, ಬಂಧನ ವಾರಂಟ್ ಹೊರಡಿಸುವುದು ಅವಶ್ಯ ಹಾಗೂ ಅನಿವಾರ್ಯವಾಗಿತ್ತು. ಕೋರ್ಟ್ ಬಂಧನ ವಾರಂಟ್ ಹೊರಡಿಸಿರುವುದು ಸಂತಸ ತಂದಿದೆ. ಮೊದಲನೇ ಪ್ರಕರಣದಲ್ಲಿ ಬೇಲ್ ಸಿಕ್ಕಾಗ ಸಂತ್ರಸ್ತ ಬಾಲಕಿಯ ಕುಟುಂಬ ಆತಂಕಕ್ಕೆ ಒಳಗಾಗಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್‌ಗೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ತಯಾರಿ ನಡೆದಿತ್ತು. ಎರಡನೇ ಪ್ರಕರಣದಲ್ಲಿ ಜಾಮೀನು ಸಿಗದೇ ಇದ್ದರೂ ಅವರು ಹೊರಗಡೆ ಬಂದಿದ್ದು ಜೈಲು ಅಧಿಕಾರಿಗಳ ಕರ್ತವ್ಯ ಲೋಪ. ಎರಡನೇ ಪ್ರಕರಣಕ್ಕೆ ಜಾಮೀನು ಅರ್ಜಿ ಸಲ್ಲಿಸಿದರೆ ಅದಕ್ಕೆ ನಾವು ತಕರಾರು ಅರ್ಜಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ಎರಡು ಪ್ರಕರಣಗಳು ದಾಖಲಾಗಿದ್ದವು. ಒಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣವಾದರೆ ಎರಡನೇ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಜತೆಗೆ ಅವರು ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರು ಎಂಬುದನ್ನು ಉಲ್ಲೇಖಿಸಲಾಗಿದೆ. ಮೊದಲ ಪ್ರಕರಣದಲ್ಲಿ ಪೋಕ್ಸೊ ಪ್ರಕರಣ ಮಾತ್ರ ಇದ್ದರೆ, ಎರಡನೇ ಕೇಸ್‌ನಲ್ಲಿ ಪೋಕ್ಸೋ ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯೂ ಅನ್ವಯವಾಗಿದೆ.
ನಿಜವೆಂದರೆ, ಮೊದಲನೇ ಪ್ರಕರಣದಲ್ಲಿ ಜಾಮೀನು ಪಡೆದಾಗ ಎರಡನೇ ಪ್ರಕರಣದ ಉಲ್ಲೇಖ ಆಗಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಎರಡನೇ ಪ್ರಕರಣದಲ್ಲಿ ನಡೆಯಬೇಕಾದ ಬಂಧನ, ವಿಚಾರಣೆಯ ಯಾವ ಪ್ರಕ್ರಿಯೆಗಳೂ ನಡೆದಿರಲಿಲ್ಲ. ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಾಗ (ನವೆಂಬರ್ 16) ಶ್ರೀಗಳಿಗೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅದರಲ್ಲಿ ಚಿತ್ರದುರ್ಗ ಜಿಲ್ಲಾ ಪ್ರವೇಶ ಮಾಡುವಂತಿಲ್ಲ ಎನ್ನುವುದು ಕೂಡ ಒಂದಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ