Site icon Vistara News

ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವಿಚಾರಣೆಯನ್ನು ಮುಂದೂಡಿದ ಹೈಕೋರ್ಟ್‌

ಬೆಂಗಳೂರು: ಧ್ವನಿವರ್ಧಕ ಬಳಕೆ ತಡೆಯ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ 3 ವಾರ ಮುಂದೂಡಿದೆ. ಈ ಅವಧಿಯಲ್ಲಿ ಲೌಡ್ ಸ್ಪೀಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಯಾನ ನಡೆಸಿ ಹಾಗೂ ಕೈಗೊಂಡ ಕ್ರಮದ ಕುರಿತಾದ ವರದಿಯನ್ನು ಸಲ್ಲಿಸುವಂತೆ ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಲೌಡ್ ಸ್ಪೀಕರ್‌ ಬಳಕೆಗೆ ಈ ಹಿಂದೆ ಹೈಕೋರ್ಟ್‌ಗೆ ಮನವಿ ನೀಡಲಾಗಿತ್ತು. ಈ ವಿಚಾರವಾಗಿ ಹೈಕೋರ್ಟ್‌ನಲ್ಲಿ ‌ ನಡೆದ ವಿಚಾರಣೆಯಲ್ಲಿ ಸರಕಾರಿ ಪರ ವಕೀಲರಾದ ಹೆಚ್.ಆರ್. ಶೌರಿ ವಾದ ಮಂಡಿಸಿದರು. ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧ‌ ಹೇರಲಾಗಿದೆ. ಉತ್ಸವ, ಸಮಾರಂಭಗಳ ವೇಳೆ ವಿಶೇಷ ಅನುಮತಿಗೆ ಅವಕಾಶ ನೀಡಲಾಗಿದೆ. ಲೌಡ್ ಸ್ಪೀಕರ್ ಅನುಮತಿಗೆ ನಗರ ಪಾಲಿಕೆ ಎಕ್ಸಿಕ್ಯುಟಿವ್ ಇಂಜಿನಿಯರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಮೂಲಕ 2 ವರ್ಷಗಳವರೆಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತಿದೆ. 2 ವರ್ಷದ ನಂತರ ಈ ಲೈಸೆನ್ಸ್ ನವೀಕರಿಸಬಹುದು ಎಂದು ವಕೀಲರು ತಿಳಿಸಿದರು.

ಈ ವಾದವನ್ನು ಕೇಳಿದ ಬಳಿಕ ನ್ಯಾಯಾಧೀಶರಾದ ಸಿಜೆ ರಿತುರಾಜ್ ಅವಸ್ತಿ, ನ್ಯಾ.ಅಶೋಕ್ ಎಸ್.ಕಿಣಗಿ ಅವರು ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ನಿಲ್ಲಿಸಲು ಕೈಗೊಂಡ ಕ್ರಮವೇನು? ಎಷ್ಟು ಧಾರ್ಮಿಕ ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ. ಧಾರ್ಮಿಕ ಸ್ಥಳಗಳ ಸರ್ವೆ ನಡೆಸಿ ನಂತರ ಕ್ರಮ ಕೈಗೊಳ್ಳಲು ಹೈಕೋರ್ಟ್‌ ಸೂಚನೆ ನೀಡಿದೆ. ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ತಡೆಗೆ ಅಭಿಯಾನ ನಡೆಸಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಕುರಿತಾದ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.

ಇದನ್ನೂ ಓದಿ: ಲೌಡ್‌ ಸ್ಪೀಕರ್‌ಗೆ ಪರ್ಮಿಷನ್‌ ಕೋರಿ 3,489 ಅರ್ಜಿ, ಮಸೀದಿಗಳಿಂದಲೇ ಗರಿಷ್ಠ ಮನವಿ

Exit mobile version