Site icon Vistara News

CM Siddaramaiah : ಗ್ಯಾರಂಟಿ ಮೂಲಕ ಆಮಿಷ ಆರೋಪ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ನೋಟಿಸ್‌

CM Siddaramaiah and high court

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಗ್ಯಾರಂಟಿಗಳ ಘೋಷಣೆ (Congress Guarantee), ಆಮಿಷಗಳನ್ನು ಒಡ್ಡುವ ಮೂಲಕ ಚುನಾವಣೆಯಲ್ಲಿ ಗೆಲುವು (Winning the Elections) ಸಾಧಿಸಿದ್ದಾರೆ. ಹೀಗಾಗಿ ಅವರನ್ನು ಪ್ರಜಾಪ್ರತಿನಿಧಿ ಕಾಯಿದೆ (Peoples represenative act) ಅನ್ವಯ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ (Karnataka High court) ನೋಟಿಸ್‌ ಜಾರಿ (Notice to Siddaramaiah) ಮಾಡಿದೆ.

ಸಿದ್ದರಾಮಯ್ಯ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗುವ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ ಎನ್ನುವುದು ಅರ್ಜಿದಾರರ ಆರೋಪವಾಗಿತ್ತು. ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿ, “ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಶಾಸಕರು ಆಯ್ಕೆಯಾಗಿದ್ದಾರೆ. ಇದು ಚುನಾವಣಾ ಅಕ್ರಮಕ್ಕೆ ಸಮನಾಗಿದೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು” ಎಂದು ಕೋರಿದರು.

ಕೆಲಕಾಲ ವಾದ ಆಲಿಸಿದ ಪೀಠವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಂದೂಡಿತು.

ಗ್ಯಾರಂಟಿ ಯೋಜನೆಗಳು ಅಕ್ರಮವೇ?

“ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123 (1) ಪ್ರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವುದು ಲಂಚಕ್ಕೆ ಸಮ. ಸೆಕ್ಷನ್‌ 123 (2) ಪ್ರಕಾರ ಇದು ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್‌ 123 (4)ರ ಪ್ರಕಾರ ಅದನ್ನು ಪ್ರಚಾರ ಮಾಡುವುದೂ ಅಪರಾಧ. ಅಲ್ಲದೇ, ಇದನ್ನು ಅಭ್ಯರ್ಥಿಯ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡದಿರುವುದು ಸೆಕ್ಷನ್‌ 123 (6)ರ ಅಪರಾಧವಾಗಿದೆ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಒಂದು ವೇಳೆ ಗ್ಯಾರಂಟಿ ಯೋಜನೆಗಳು ಅಕ್ರಮ ಎಂದಾದರೆ ರಾಜ್ಯದಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್‌ ಶಾಸಕರೆಲ್ಲರಿಗೂ ಇದು ಅನ್ವಯವಾಗುವ ಸಾಧ್ಯತೆ. ಆದರೆ, ಚುನಾವಣೆಯಲ್ಲಿ ಭರವಸೆಗಳನ್ನು ನೀಡುವುದು ಅಕ್ರಮ ಅಥವಾ ವಂಚನೆ ಎಂದು ಇದುವರೆಗೆ ಪರಿಗಣಿಸಲಾಗಿಲ್ಲ. ಹೀಗಾಗಿ ಈ ಬಾರಿ ಮುಖ್ಯಮಂತ್ರಿಯ ವಿರುದ್ಧವೇ ದಾಖಲಾಗಿರುವ ಪ್ರಕರಣ ಹೆಚ್ಚು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Shadow CM : ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಶ್ಯಾಡೊ ಸಿಎಂ; ಸಿಕ್ಕಿತು ದಾಖಲೆ!

Exit mobile version