ಬೆಂಗಳೂರು: ಕೆಲವು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದದ ಮಿ ಟೂ ಪ್ರಕರಣದ (Me too case) ಭಾಗವಾಗಿ ಖ್ಯಾತ ಚಿತ್ರ ನಟಿ ಶ್ರುತಿ ಹರಿಹರನ್ ಅವರು ಬಿಗ್ ಬಾಸ್ ಸ್ಪರ್ಧಿ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅವರ ವಿರುದ್ಧ ದಾಖಲಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನಗರದ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ರದ್ದು ಮಾಡಬೇಕು ಎಂದು ಕೋರಿ ಪ್ರಶಾಂತ್ ಸಂಬರ್ಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ತಡೆಯಾಜ್ಞೆ ನೀಡಲಾಗಿದೆ.
ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಅವರು ತಮ್ಮ ಜತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಮಿ ಟೂ ಆರೋಪಗಳು ಉತ್ತುಂಗದಲ್ಲಿದ್ದ ಕಾಲದಲ್ಲಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಇದು ದೊಡ್ಡ ಮಟ್ಟದ ಸುದ್ದಿಯಾಗಿದ್ದು, ಹಲವರು ಶ್ರುತಿ ಹರಿಹರನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು
ಶ್ರುತಿ ಹರಿಹರನ್ ಮಾಡಿದ್ದ ಆರೋಪದ ಕುರಿತಂತೆ 2018ರ ಅಕ್ಟೋಬರ್ 25ರಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು. ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರಿಗೆ ಆಪ್ತರಾಗಿದ್ದ ಸಂಬರಗಿ ಹಾಜರಿದ್ದರು.
ಈ ಸಭೆ ನಡೆದ ಬಳಿಕ ಶ್ರುತಿ ಹರಿಹರನ್ ಪ್ರಶಾಂತ್ ಸಂಬರ್ಗಿ ಭಾರಿ ಸಿಟ್ಟರಾಗಿದ್ದರು. ನಂತರ ತನ್ನ ವಿರುದ್ಧ ಮಾಧ್ಯಮಗಳಲ್ಲಿ ಸಂಬರಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು, ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿದ್ದರು. ಸಂಬರಗಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಇದರ ವಿಚಾರಣೆ ಈ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಈ ವಿಚಾರಣೆಗೆ ತಡೆ ಕೋರಿ ಪ್ರಶಾಂತ್ ಸಂಬರ್ಗಿ ಹೈಕೋರ್ಟ್ ಮೊರೆ ಹೊಕ್ಕಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠವು ಮುಂದಿನ ವಿಚಾರಣೆವರೆಗೂ ತಡೆ ನೀಡಿ ಆದೇಶ ಹೊರಡಿಸಿದೆ. ವಿಚಾರಣೆಯನ್ನು 2023ರ ಫೆಬ್ರವರಿ 1ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ | Dolly Dhananjay | ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಗೆ ಡಾಲಿ ಧನಂಜಯ, ಶ್ರುತಿ ಹರಿಹರನ್ ಮೆಚ್ಚುಗೆ!