ಮೈಸೂರು: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Mysore-ooty National Highway) ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು (Car Robbery) ಮಹಿಳೆಯ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ. ದರೋಡೆಕೋರರು ಎರಡು ಕಾರುಗಳಲ್ಲಿ ಬಂದಿದ್ದರು (Highway robbery) ಮತ್ತು ಲಾಂಗ್ ಬೀಸಿ ಬೆದರಿಸಿ ಚಿನ್ನಾಭರಣ ಕಿತ್ತುಕೊಂಡಿರುವುದು ಘಟನೆಯ ತೀವ್ರತೆಯನ್ನು ತೋರಿಸುತ್ತದೆ.
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ನಂಜನಗೂಡು ತಾಲೂಕಿನ ಹೊಸಹಳ್ಳಿ ಗೇಟ್ (Hosahalli Gate) ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೈಸೂರಿನ ಅಶೋಕ ಬಡಾವಣೆಯ ನಿವಾಸಿಗಳಾದ ಜಯಶ್ರೀ(45), ಮಕ್ಕಳಾದ ವಿಶಾಲ್ ಮತ್ತು ವಿಜಯ್ ದರೋಡೆಗೆ ಒಳಗಾದವರು.
ಜಯಶ್ರೀ ಅವರು ತಮ್ಮ ಮಕ್ಕಳೊಂದಿಗೆ ಕೇರಳದ ಕ್ಯಾಲಿಕಟ್‌ಗೆ ತಮ್ಮ ಮಗಳ ಮನೆಗೆ ಹೋಗಿದ್ದರು. ಶುಕ್ರವಾರ ರಾತ್ರಿ ಕಾರಿನಲ್ಲಿ ಮರಳಿ ಬರುವಾಗ ದರೋಡೆಕೋರರು ಕಾರು ಅಡ್ಡಗಟ್ಟಿ ಮಚ್ಚು, ಲಾಂಗ್‌ಗಳನ್ನು ತೋರಿಸಿ ದರೋಡೆ ಮಾಡಿದ್ದಾರೆ. ಜಯಶ್ರೀ ಅವರ ಮಾಂಗಲ್ಯ ಮತ್ತು ಇತರ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ.
ಹೊಸಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ ಒಂದು ಇನ್ನೋವಾ ಕಾರು ಮತ್ತು ಇನ್ನೊಂದು ಐ 20 ಕಾರು ಅವರನ್ನು ಅಡ್ಡಗಟ್ಟಿತು. ಒಂದೊಂದು ಕಾರಿನಲ್ಲಿ ತಲಾ ನಾಲ್ಕು ಮಂದಿ ದರೋಡೆಕೋರರು ಇದ್ದರು.
ಇನ್ನೋವಾ ಕಾರಿನಲ್ಲಿದ್ದ 4 ಜನ ದರೋಡೆಕೋರರು ಕೆಳಗಿಳಿದು ಜಯಶ್ರೀ ಅವರಿದ್ದ ಕಾರಿನ ಮೇಲೆ ಲಾಂಗ್‌ಗಳನ್ನು ಕಾರಿನ ಗ್ಲಾಸ್‌ನ ಮೇಲೆ ಬೀಸಿ 3 ಕಡೆ ಪುಡಿ ಮಾಡಿದ್ದಾರೆ. ನಂತರ ಕಾರಿನಲ್ಲಿದ್ದವರ 2 ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಜಯಶ್ರೀ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ.
ಈ ನಡುವೆ ಜಯಶ್ರೀ ಮತ್ತು ಮಕ್ಕಳ ಬೊಬ್ಬೆ ಕೇಳಿ ಜನರು ಓಡಿ ಬಂದಿದ್ದಾರೆ. ಸ್ಥಳೀಯರನ್ನು ಕಂಡು ಆರೋಪಿಗಳು ಕಾಲ್ಕಿತ್ತಿದ್ದಾರೆ. ನಂಜನಗೂಡು ಗ್ರಾಮಾಂತರ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಶಿವನಂಜ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡ ಜಾಲವೇ ಇರುವ ಶಂಕೆ
ಈ ಕೃತ್ಯದಲ್ಲಿ ದೊಡ್ಡ ಜಾಲವೇ ಇರುವ ಶಂಕೆ ಇದೆ. ಯಾಕೆಂದರೆ, ಸಾಮಾನ್ಯವಾಗಿ ದರೋಡೆಕೋರರು ಸಣ್ಣ ತಂಡಗಳಾಗಿ ಕೆಲಸ ಮಾಡುತ್ತಾರೆ. ಬಹುತೇಕ ಸಂದರ್ಭದಲ್ಲಿ ಒಂದು ಕಾರಿನಲ್ಲಿ ಇಬ್ಬರು ತಪ್ಪಿದರೆ ಮೂವರು ಮಾತ್ರ ಇರುತ್ತಾರೆ. ಆದರೆ, ಇಲ್ಲಿ ಒಟ್ಟು ಎಂಟು ಮಂದಿ ಇದ್ದು ದೊಡ್ಡ ಗ್ಯಾಂಗ್ ಇರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ಅಂಥ ದೊಡ್ಡ ದರೋಡೆಗಳು ನಡೆದಿರಲಿಲ್ಲ.
ಇದನ್ನೂ ಓದಿ : Robbery Case : ಒಂಟಿ ವೃದ್ಧೆಯ ಕಟ್ಟಿ ಹಾಕಿ ಹಣ, ಒಡವೆ ದೋಚಿದವರ ಸೆರೆ, ಕಷ್ಟ ಸುಖ ಹಂಚಿಕೊಂಡಿದ್ದೇ ತಪ್ಪಾಯ್ತು!