Site icon Vistara News

Hijab Row‌: ಶೀಘ್ರದಲ್ಲೇ ಹಿಜಾಬ್ ನಿಷೇಧ ವಾಪಸ್‌? ಸಿದ್ದರಾಮಯ್ಯ ಮಹತ್ವದ ಘೋಷಣೆ

CM Siddaramaiah

ಮೈಸೂರು: ವಿರೋಧದ ನಡುವೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್‌ (Hijab Row‌) ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಊಟ, ಉಡುಪು ಅವರವರ ಇಷ್ಟ. ಹೀಗಾಗಿ ಹಿಜಾಬ್ ನಿಷೇಧ ಆದೇಶ ವಾಪಸ್ ತೆಗೆದುಕೊಳ್ಳಲು ಹೇಳಿರುವುದಾಗಿ ಸಿಎಂ ತಿಳಿಸಿದ್ದಾರೆ.

ನಂಜನಗೂಡು ತಾಲೂಕಿ‌ನ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಕವಲಂದೆ, ಅಂತರಸಂತೆ, ಜಯಪುರ ಪೊಲೀಸ್ ಠಾಣೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾನು ಅದಕ್ಕೆಲ್ಲ ಅವಕಾಶ ಕೊಡಲ್ಲ. ಹಿಜಾಬ್ ನಿಷೇಧವನ್ನು (Hijab ban to be withdrawn) ವಾಪಸ್ ಪಡೆಯಲು ಹೇಳಿದೀನಿ ಎಂದು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ

ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ-ಭಾಷೆ ನಾಗರಿಕವಾಗಿದ್ದರೆ ಪೊಲೀಸರ ಮೇಲಿನ ಗೌರವ ಹೆಚ್ಚಾಗುತ್ತದೆ. ಹಣವಂತರು, ಬಲಾಡ್ಯರು ಈಗಲೂ ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಹಣ ಬಲದಿಂದ ಪೊಲೀಸರನ್ನು ಖರೀದಿಸಬಹುದು ಎನ್ನುವ ಭ್ರಮೆಯಲ್ಲಿರುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು. ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ. ಜನರೇ ನಮ್ಮ ಮಾಲೀಕರು ಎನ್ನುವ ಭಾವನೆ ಎಲ್ಲಾ ಅಧಿಕಾರಿಗಳಲ್ಲೂ ಇರಬೇಕು ಎಂದು ಸಿಎಂ ಕಿವಿಮಾತು ಹೇಳಿದರು.

ಇದನ್ನೂ ಓದಿ | Patrika Bhavan: ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ ಸಮಾಜಮುಖಿ: ಸಿದ್ದರಾಮಯ್ಯ

ನಾಗರಿಕ ಹಕ್ಕುಗಳ ರಕ್ಷಣೆ ಪೊಲೀಸ್ ಇಲಾಖೆಯ ಕರ್ತವ್ಯ. ಕಾನೂನು ಉಲ್ಲಂಘಿಸಲು ಕೆಲವರು ಚಾಪೆ ಕೆಳಗೆ ನುಸುಳುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದ ಅವರು, ಗುಪ್ತಚರ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿದ್ದರೆ ಅಪರಾಧ ಘಟಿಸುವುದಕ್ಕಿಂತ ಮೊದಲೇ ತಡೆಯಲು ಸಾಧ್ಯ. ಠಾಣೆಯ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವ ಕಾನೂನು ಬಾಹಿರ ಚಟುವಟಿಕೆಗಳೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಠಾಣೆಯಲ್ಲೇ ಕುಳಿತು ಮಹಜರ್ ಬರೆಯಬಾರದು. ಸ್ಥಳಕ್ಕೆ ಹೋಗಿ ಮಹಜರ್ ಮಾಡಬೇಕು ಎಂದರು.

ಚಾಳಿಬಿದ್ದ ಅಪರಾಧಿಗಳ ಮೇಲೆ ತೀವ್ರ ನಿಗಾ ಇಡಬೇಕು. ರೌಡಿಗಳ ಚಲನ ವಲನದ ಬಗ್ಗೆ ಠಾಣಾಧಿಕಾರಿಗಳಿಗೆ, ಠಾಣೆಯ ಸಿಬ್ಬಂದಿಗೆ ಮಾಹಿತಿ ಇರಬೇಕು ಎಂದು ಸೂಚಿಸಿದರು.

ಇದನ್ನೂ ಓದಿ | ಸಂಸದರ ಅಮಾನತು ಖಂಡಿಸಿ ಬೀದಿಗಿಳಿದ ಕೈಪಡೆ; ಸರ್ವಾಧಿಕಾರಿ ಆಡಳಿತವೆಂದ ಡಿಕೆಶಿ

ಬಿಜೆಪಿಯವರು ಗ್ಯಾರಂಟಿ ಯೋಜನೆಗಳ ಲಾಭ ಪಡೀತಿಲ್ವಾ?

ನಾವು ಎಲ್ಲ ಜಾತಿ, ಎಲ್ಲಾ ಧರ್ಮದವರಿಗೆ ಮಾತ್ರವಲ್ಲ ಎಲ್ಲಾ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು 10 ಕೆಜಿ ಅಕ್ಕಿ ಪಡೆಯುತ್ತಿಲ್ಲವಾ? ಬಿಜೆಪಿಯವರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿಲ್ಲವೇ? ಬಿಜೆಪಿಯವರು ಗೃಹಜ್ಯೋತಿ, ಗೃಹಲಕ್ಷ್ಮಿ ಯ ಹಣ ಪಡೆಯುತ್ತಿಲ್ಲವೇ? ನಮ್ಮ ಗ್ಯಾರಂಟಿ ಸ್ಕೀಂಗಳ ಲಾಭ ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುಳ್ಳು ಹೇಳುವವರು, ನಮ್ಮ ಸರ್ಕಾರದ ಲಾಭ ಪಡೆದೂ ನಕ್ರಾ ಮಾಡುವವರ ಜತೆ ಹೋಗಬೇಡಿ ಎಂದರು.

ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು. ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಆಶ್ರಯ ಸಮಿತಿ ಅಧ್ಯಕ್ಷರಾದ‌ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version