ಮಂಗಳೂರು: ಹಿಜಾಬ್ ವಿವಾದದ (Hijab Controversy) ಬಳಿಕ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಇಳಿಮುಖವಾಗಿರುವುದು ಬೆಳಕಿಗೆ ಬಂದಿದೆ. ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಟಿ.ಸಿ (ವರ್ಗಾವಣೆ ಪ್ರಮಾಣಪತ್ರ) ಪಡೆದು ಕಾಲೇಜು ತೊರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2020-21 ಹಾಗೂ 2021-22 ರ ಸಾಲಿನಲ್ಲಿ ಸುಮಾರು 900 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ದಾಖಲಾತಿ ಪಡೆದುಕೊಂಡಿದ್ದರು. ಈ 900 ವಿದ್ಯಾರ್ಥಿನಿಯರ ಪೈಕಿ 145 ವಿದ್ಯಾರ್ಥಿನಿಯರು ತಮ್ಮ ಟಿಸಿಯನ್ನು ಪಡೆದುಕೊಂಡಿರುವುದಾಗಿ ಮಾಹಿತಿ ದೊರಕಿದೆ. ಅಂದರೆ ಶೇ.೧೬ರಷ್ಟು ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ ಪಡೆದುಕೊಂಡು ತಾವು ಓದುತ್ತಿದ್ದ ಕಾಲೇಜು ತೊರೆದಿದ್ದಾರೆ.
ಇದನ್ನೂ ಓದಿ | Al-Jawahiri Dead | ನಮ್ಮ ರಾಜ್ಯದ ಹಿಜಾಬ್ ವಿವಾದದಲ್ಲೂ ಮೂಗು ತೂರಿಸಿದ್ದ ಅಲ್- ಜವಾಹಿರಿ!
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 39 ಸರ್ಕಾರಿ ಹಾಗೂ 36 ಅನುದಾನಿತ ಕಾಲೇಜುಗಳಿವೆ. ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಸುಮಾರು ಶೇ.34% ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಟಿಸಿ ಹಿಂಪಡೆದುಕೊಂಡಿದ್ದಾರೆ. ಉಳಿದಂತೆ ಅನುದಾನಿತ ಕಾಲೇಜಿನ ಶೇ. 8% ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ತೆಗೆದುಕೊಂಡಿದ್ದಾರೆ.
ಮಂಗಳೂರಿನ ಕಾರ್ ಸ್ಟ್ರೀಟ್‌ನಲ್ಲಿರುವ ದಯಾನಂದ ಪೈ-ಸತೀಷ್ ಪೈ ಅನುದಾನಿತ ಕಾಲೇಜಿನಲ್ಲಿ 51 ಮುಸ್ಲಿಂ ವಿದ್ಯಾರ್ಥಿನಿಯರು ದಾಖಲಾಗಿದ್ದು, 35 ವಿದ್ಯಾರ್ಥಿನಿಯರು ತಮ್ಮ ಟಿಸಿ ಹಿಂಪಡೆದುಕೊಂಡಿದ್ದಾರೆ. ಮಂಗಳೂರು ಹೊರವಲಯದ ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 20 ವಿದ್ಯಾರ್ಥಿನಿಯರು ಅರ್ಧದಲ್ಲೇ ತಮ್ಮ ಶಿಕ್ಷಣ ಮೊಟಕುಗೊಳಿಸಿದ್ದಾರೆ.
ಕಾಲೇಜಿಗೂ ಬಾರದೆ ಟಿಸಿಯನ್ನೂ ಪಡೆಯದೆ ಶಿಕ್ಷಣವೇ ಬೇಡ ಎಂಬ ತೀರ್ಮಾನಕ್ಕೂ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಬಂದಿದ್ದಾರೆ. ವಿವಾದದ ಮೂಲ ಕೇಂದ್ರವಾಗಿದ್ದ ಉಡುಪಿ ಜಿಲ್ಲೆಯ ಅಜ್ಜರಕಾಡಿನ 9 ವಿದ್ಯಾರ್ಥಿನಿಯರೂ ಟಿಸಿ ಪಡೆದುಕೊಂಡಿದ್ದಾರೆ. ಟಿಸಿ ಪಡೆದುಕೊಂಡ ವಿದ್ಯಾರ್ಥಿನಿಯರು ಸದ್ಯ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕಲಿಕೆ ಮುಂದುವರಿಸಲು ಅವಕಾಶ ಇದೆ. ಟಿಸಿ ಪಡೆದ ವಿದ್ಯಾರ್ಥಿನಿಯರಲ್ಲಿ ಹಲವರು ಬೇರೆ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ವಿವರ ಲಭಿಸಬೇಕಿದೆ.
ಇದನ್ನೂ ಓದಿ | ಶಾಲೆಗಳಲ್ಲಿ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ: ಮತ್ತೆ ಶುರುವಾಗುತ್ತಾ ಹಿಜಾಬ್ ವಿವಾದದ ಧರ್ಮ ಸಂಘರ್ಷ