Site icon Vistara News

Hijab Row: ಹಿಜಾಬ್‌ ನಿಷೇಧ ವಾಪಸ್‌ ಮಾಡಿಲ್ಲ; ಉಲ್ಟಾ ಹೊಡೆದ ಸಿಎಂ!

Hijab row and Siddaramaiah

ಮೈಸೂರು: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ (Hijab Row) ಅವಕಾಶ ನೀಡಲಾಗುವುದು ಎಂಬ ತಮ್ಮ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಬೆನ್ನಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಉಲ್ಟಾ ಹೊಡೆದಿದ್ದಾರೆ. ನಾನು ಶಾಲಾ – ಕಾಲೇಜುಗಳಲ್ಲಿ ಇದ್ದ ಹಿಜಾಬ್ ನಿಷೇಧವನ್ನು (Hijab ban) ವಾಪಸ್ ಮಾಡಿಲ್ಲ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದಷ್ಟೇ ಹೇಳಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಜಾಬ್ ನಿಷೇಧ ವಾಪಸ್ ಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಅಂತ ನಾನು ಕಾರ್ಯಕ್ರಮದಲ್ಲಿ ಹೇಳಿದ್ದೇನೆ. ಯಾವ ಶೈಕ್ಷಣಿಕ ವರ್ಷದಿಂದ ಜಾರಿ ಅಂತ ಸರ್ಕಾರದ ಹಂತದಲ್ಲಿ ಚರ್ಚೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಜಾಬ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿ‌ನ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕವಲಂದೆ, ಅಂತರಸಂತೆ, ಜಯಪುರ ಪೊಲೀಸ್ ಠಾಣೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಊಟ, ಉಡುಪು ಅವರವರ ಇಷ್ಟ. ಹೀಗಾಗಿ ಹಿಜಾಬ್ ನಿಷೇಧ ಆದೇಶ ವಾಪಸ್ ತೆಗೆದುಕೊಳ್ಳಲು ಹೇಳಿದ್ದೇನೆ ಎಂದು ಹೇಳಿದ್ದರು.

ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾನು ಅದಕ್ಕೆಲ್ಲ ಅವಕಾಶ ಕೊಡಲ್ಲ. ಹಿಜಾಬ್ ನಿಷೇಧವನ್ನು (Hijab ban to be withdrawn) ವಾಪಸ್ ಪಡೆಯಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ

ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಬಿಜೆಪಿಯಾದಿಯಾಗಿ ಹಿಂದು ಪರ ಸಂಘಟನೆಗಳವರು, ಹಿಂದು ಪರ ಚಿಂತಕರು ವ್ಯಾಪಕವಾಗಿ ಖಂಡಿಸಿದ್ದರು. ಇದೊಂದು ಮತೀಯ ತೀರ್ಮಾನವಾಗಿದೆ. ಇದು ಖಂಡನಾರ್ಹ. ಕಾಂಗ್ರೆಸ್‌ ಎಂದರೆ ಮುಸ್ಲಿಂ ಪಕ್ಷ. ಈ ಮೂಲಕ ಶಾಲೆಗಳಲ್ಲಿ ಮಕ್ಕಳಲ್ಲಿ ಮತೀಯ ಭಾವನೆಯನ್ನು ಬಿತ್ತುವಲ್ಲಿ ಈ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದೆಲ್ಲ ಟೀಕೆ ಮಾಡಲಾಗಿದೆ.

ಮತ್ತೆ ಹಿಜಾಬ್‌ಗೆ ಅವಕಾಶದಿಂದ ದ್ವೇಷ ಸೃಷ್ಟಿ; ಬಿವೈ ವಿಜಯೇಂದ್ರ ಕೆಂಡಾಮಂಡಲ

ನವದೆಹಲಿ: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ (Hijab Row) ಅವಕಾಶ ನೀಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದು ಮತ್ತು ದ್ವೇಷವನ್ನು ಸೃಷ್ಟಿಸುವ ಪ್ರಯತ್ನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಳಗ್ಗೆ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತ್ತೆ ಹಿಜಾಬ್‌ಗೆ ಅವಕಾಶ ನೀಡುವ ಸಿದ್ದರಾಮಯ್ಯ ಹೇಳಿಕೆ ನಾಡಿನ ಪಾಲಿಗೆ ಒಂದು ದುರದೃಷ್ಟದ ಸಂಗತಿ ಎಂದು ಗುಡಿಗಿದ್ದಾರೆ.

ಹಿಜಾಬ್‌ ರಾಜಕೀಯ ಮಕ್ಕಳ ಮನಸ್ಸನ್ನು ಸಹ ಕಲುಷಿತ ಮಾಡಿದೆ. ಅವರು ಏನೇ ರಾಜಕೀಯ ಮಾಡಲಿ. ಆದರೆ, ಕನಿಷ್ಠ ಶಾಲೆಗೆ ಹೋಗುವ ಮಕ್ಕಳನ್ನು ಆದರೂ ರಾಜಕೀಯದಿಂದ ದೂರ ಇಡಬೇಕಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ.

ʻʻಹಿಜಾಬ್ ಧರಿಸಿಕೊಂಡು ಶಾಲೆಗೆ ಹೋಗಲು ಅವಕಾಶ ಕೊಡುತ್ತೇವೆ ಅಂದಿದ್ದಾರೆ. ಇದೇ ಸರ್ಕಾರ ಕಲಬುರ್ಗಿಯಲ್ಲಿ ಪರೀಕ್ಷೆಗೆ ಹೋಗುವ ಹೆಣ್ಣುಮಕ್ಕಳ ತಾಳಿ, ಕಾಲುಂಗುರ ತೆಗೆಸಿದೆ. ಇದು ಯಾವ ನ್ಯಾಯʼ ಎಂದು ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಇಂದಿನ ದುಸ್ಥಿತಿಗೆ ಕಾಂಗ್ರೆಸ್ಸೇ ಕಾರಣ

ʻʻಮಾತು ಎತ್ತಿದರೆ ಅಲ್ಪಸಂಖ್ಯಾತರ ಬಗ್ಗೆ ಮಾತಾಡ್ತಾರೆ ಸಿದ್ದರಾಮಯ್ಯ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಗಿದೆ. ಇಷ್ಟು ವರ್ಷ ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ಇವತ್ತಿಗೂ ಸಹ ಶೇ. 50ಕ್ಕೂ ಹೆಚ್ಚು ಅಲ್ಪಸಂಖ್ಯಾತರು ಶಿಕ್ಷಣ ವಂಚಿತರಾಗಿದ್ದಾರೆ. ಇವತ್ತು ಅವರೆಲ್ಲ ಕೆಲಸ ಇಲ್ಲದೆ ಬೇಜವಾಬ್ದಾರಿಯಿಂದ ಓಡಾಡುತ್ತಾರೆ ಇದ್ದಾರೆ ಅಂದರೆ ಅದಕ್ಕೆ ಕಾರಣ ಯಾರು? ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್‌ ಆಗಿ ಉಪಯೋಗಿಸುತ್ತಿದೆʼʼ ಎಂದು ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ʻʻನಮ್ನ ಪ್ರಧಾನಿ ಅಲ್ಪಸಂಖ್ಯಾತ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂಬ ಉದ್ದೇಶದಿಂದ ತ್ರಿವಳಿ ತಲಾಕ್ ಅನ್ನು ತೆಗೆದುಹಾಕುವ ಕೆಲಸ ಮಾಡಿದ್ದಾರೆ. ಆದರೆ, ನೀವು ಕಾಂಗ್ರೆಸ್‌ನವರು ಯಾವತ್ತಾದರೂ ಅಲ್ಪಸಂಖ್ಯಾತರ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಈ ರೀತಿಯ ಕೆಲಸ ಮಾಡಿದ್ದೀರಾʼʼ ಎಂದು ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Hijab Row‌: ಶೀಘ್ರದಲ್ಲೇ ಹಿಜಾಬ್ ನಿಷೇಧ ವಾಪಸ್‌? ಸಿದ್ದರಾಮಯ್ಯ ಮಹತ್ವದ ಘೋಷಣೆ

ಪ್ರತಿ ಬಾರಿಯೂ ಒಡೆದು ಆಳುವ ಯತ್ನ ನಡೆಸುವ ಕಾಂಗ್ರೆಸ್‌

ʻʻಕಾಂಗ್ರೆಸ್ ಅವತ್ತಿನಿಂದ ಇವತ್ತಿನವರೆಗೂ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹಿಂದೆ ಬ್ರಿಟಿಷ್ ಅನುಸರಿಸಿದ್ದನ್ನು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಈ ನೀತಿ ಮುಂದುವರಿಸುತ್ತಿದೆ. ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಕೊನೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅಂತ ಗೊತ್ತಾದಾಗ ವೀರಶೈವ ಲಿಂಗಾಯತ ಧರ್ಮ ಅಂತ ತಂದು ಬೆಂಕಿ ಹಚ್ಚುವ ಕೆಲಸ ಮಾಡಲಾಯಿತುʼʼ ಎಂದು ಬಿ.ವೈ ವಿಜಯೇಂದ್ರ ಆಕ್ರೋಶವನ್ನು ಹೊರ ಹಾಕಿದ್ದರು.

ʻʻಇವತ್ತು ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಆದರೆ, ಅದರ ಬಗ್ಗೆ ಸರ್ಕಾರಕ್ಕೆ ಯಾವ ಕಾಳಜಿಯೂ ಇಲ್ಲ. ಬೇಜವಾಬ್ದಾರಿಯಿಂದ ನಡೆದುಕೊಳ್ತಾ ಇದೆʼʼ ಎಂದು ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದರು.

ʻʻಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಕನಸು ಕಾಣುತ್ತಿದೆ. ಆದರೆ ಪಂಚ ರಾಜ್ಯ ಚುನಾವಣೆ ರಿಸಲ್ಟ್ ಬಂದ ಮೇಲೆ ಮೋದಿ ಗ್ಯಾರಂಟಿ ಏನು, ಅದರ ತಾಕತ್ತೇನು ಎನ್ನುವುದು ಗೊತ್ತಾಗಿದೆ. ಈ ವಿಷ್ಯ ಗೊತ್ತಾದ ಕಾರಣಕ್ಕಾಗಿಯೇ ಕಾಂಗ್ರೆಸ್ ಸಮಾಜದಲ್ಲಿ ವಿಷ ಬೀಜ ಬಿತ್ತನೆ ಮಾಡುವ ಕೆಲಸ ಮಾಡುತ್ತಲಿದೆʼʼ ಎಂದು ವಿಜಯೇಂದ್ರ ಆರೋಪಿಸಿದ್ದರು.

ಸಮವಸ್ತ್ರ ಸಂಹಿತೆ ಹಿಂದಿನಿಂದಲೂ ಜಾರಿಯಲ್ಲಿದೆ

ʻʻಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಸಿದ್ದರಾಮಯ್ಯ ಅವರು ಬಂದ್ಮೇಲೆ ಮಾಡಿದ್ದು ಅಲ್ಲ. ಈ ಹಿಂದೆಯಿಂದಲೂ ಸಹ ಇದೆ. ಮಕ್ಕಳು ಒಳ್ಳೆ ಪ್ರಜೆಗಳಾಗಬೇಕು ಎಂದಲ್ಲವೇ ಶಿಕ್ಷಣ ಕೊಡೋದು? ಯುನಿಫಾರ್ಮ್ ಕೂಡ ಅದಕ್ಕಾಗಿಯೇ ಮಾಡಿರುವುದುʼʼ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾವಾಗ ಎಲೆಕ್ಷನ್‌ನಲ್ಲಿ ಸೋಲುತ್ತದೆ ಅಂತ ಗೊತ್ತಾಗುತ್ತೋ ಅವಾಗೆಲ್ಲ ಧರ್ಮದ, ಈ ರೀತಿಯ ವಿಚಾರ ಎಳೆದು ತರುತ್ತದೆʼʼ ಎಂದು ಹೇಳಿದ್ದರು.

Exit mobile version