ಬೆಂಗಳೂರು : ಭಾರತ ಸರ್ಕಾರ ಪ್ರತಿವರ್ಷ ಸೆಪ್ಟೆಂಬರ್ 14ರಂದು ‘ಹಿಂದಿ ದಿವಸ್’ ಆಚರಿಸುತ್ತದೆ. ಇದು 1949ರಲ್ಲಿ ಹಿಂದಿ ನುಡಿಯನ್ನು ಭಾರತದ ಆಡಳಿತ ನುಡಿಯನ್ನಾಗಿಸಿದ ದಿನವನ್ನು ಸಂಭ್ರಮಿಸುವ ಉದ್ದೇಶದಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದೆ ಇದ್ದ ಹಿಂದಿ ದಿವಸ್ ಆಚರಣೆ ಇತ್ತೀಚಿಗೆ ಹಿಂದಿ ಸಪ್ತಾಹ್, ಹಿಂದಿ ಪಕ್ವಾಡ್, ಹಿಂದಿ ಮಾಸವಾಗಿ ಬದಲಾಗಿದೆ. ಹಿಂದಿ ಹೇರಿಕೆಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನವಾಸಿ ಬಳಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಈ ವರ್ಷ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ “ಹಿಂದಿ ಹೇರಿಕೆ: ಮೂರು ಮಂತ್ರ- ನೂರು ತಂತ್ರ” ಕೃತಿಯ ಬರಹಗಾರ ಆನಂದ್ ಅವರೊಂದಿಗೆ ಮಾತುಕತೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆನಂದ್ ಅವರು ಸಮಾನತೆಯೇ ಜೀವಾಳವಾದ ಭಾರತೀಯ ಸಂವಿಧಾನಕ್ಕೆ ಅಂಟಿಕೊಂಡಿರುವ ಅಸಮಾನತೆಯ ಕಳಂಕವೆಂದರೆ ಭಾರತದ ಇಂದಿನ ಭಾಷಾನೀತಿ. ಬಹುಭಾಷಿಕ ನಾಡುಗಳಲ್ಲಿ ಯಾವುದೇ ಒಂದು ನುಡಿಯನ್ನು ಉಳಿದವುಗಳಿಗಿಂತ ಮೇಲಿರಿಸಿದರೆ, ಅದು ಉಳಿದ ನುಡಿಗಳಿಗೆ ಕಂಟಕವಾಗುವ ಅಪಾಯವಿದ್ದು, ಭಾರತದ ಸ್ಥಿತಿ ಅದೇ ಆಗಿದೆ. ಈ ಹಿನ್ನೆಲೆಯಲ್ಲಿ ಯಾವ ಅಸಮಾನತೆಯನ್ನು ಭಾರತ ಸರ್ಕಾರ ಹಬ್ಬದಂತೆ ಆಚರಿಸಿಕೊಂಡು ಬರುತ್ತಿದೆಯೋ ಅದರ ಕೆಡುಕುಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಪ್ರಜ್ಞಾವಂತ ಭಾರತೀಯರೆಲ್ಲರೂ ಆಲೋಚಿಸಬೇಕಾಗಿದೆ. ನುಡಿ ಸಮಾನತೆಯನ್ನು ಎತ್ತಿ ಹಿಡಿಯುವ ಭಾಷಾನೀತಿಯ ಬಗ್ಗೆ ನಾವೆಲ್ಲರೂ ಇಂದು ಆಲೋಚಿಸುವ, ಅದರ ಕುರಿತು ಮಾತನ್ನಾಡುವ ಅಗತ್ಯ ಹಿಂದಿಗಿಂತ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದರು
ಮುಂದುವರಿದು, ಕನ್ನಡದ ಉಳಿವಿಗಾಗಿ, ಭಾರತದ ಭಾಷಾನೀತಿಯು ಬದಲಾಗಬೇಕಾದ ಅಗತ್ಯ ಇರುವಂತೆಯೇ ಕನ್ನಡವನ್ನು ಕಟ್ಟಿಕೊಳ್ಳಲು ನುಡಿಹಮ್ಮುಗೆಯೊಂದನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವೂ ಇರುವುದನ್ನು ನಾವಿಂದು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.
“ನುಡಿ ಹಮ್ಮುಗೆ: ಇದು ಕನ್ನಡಕ್ಕೊಂದು ಕೈದೀವಿಗೆ” ಎಂಬ ಹೊತ್ತಗೆಯನ್ನು ಕೂಡ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು, ಈ ಕಾರ್ಯಕ್ರಮದಲ್ಲಿ ಅನೇಕ ಕನ್ನಡ ಪರ ಹೋರಾಟಗಾರರು ಭಾಗವಹಿಸಿದ್ದರು.