Site icon Vistara News

Pathaan Film | ಧಾರವಾಡದಲ್ಲಿ ಪಠಾಣ್‌ ಸಿನಿಮಾ ಪ್ರದರ್ಶನಕ್ಕೆ ಆಕ್ಷೇಪ: ಪೋಸ್ಟರ್‌ ಹರಿದು ಪ್ರತಿಭಟಿಸಿದ ಹಿಂದು ಕಾರ್ಯಕರ್ತರು

patan protest

ಧಾರವಾಡ: ಜನವರಿ ೧೩ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಶಾರುಖ್‌ ಖಾನ್-‌ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ ಸಿನಿಮಾದ (Pathaan Film) ವಿರುದ್ಧ ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ. ದೇಶದ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಧಾರವಾಡದಲ್ಲೂ ಪ್ರತಿಭಟನೆಯ ಕಾವು ಕಾಣಿಸಿಕೊಂಡಿದೆ.

ಧಾರವಾಡದ ಸಂಗಮ್‌ ಚಿತ್ರ ಮಂದಿರದಲ್ಲಿ ಶುಕ್ರವಾರದಿಂದ ಪಠಾಣ್‌ ಚಿತ್ರದ ಪ್ರದರ್ಶನ ನಡೆಯಲಿದೆ. ಹೀಗಾಗಿ ಚಿತ್ರಮಂದಿರದ ಗೋಡೆಗಳಿಗೆ ಬೃಹತ್‌ ಪೋಸ್ಟರ್‌ ಹಾಕಲಾಗಿತ್ತು. ಇದನ್ನು ಗಮನಿಸಿದ ಹಿಂದು ಸಂಘಟನೆಗಳ ಕಾರ್ಯಕರ್ತರು ಚಿತ್ರ ಮಂದಿರದ ಆವರಣಕ್ಕೆ ನುಗ್ಗಿ ಪೋಸ್ಟರ್‌ನ್ನು ಹರಿದು ಹಾಕಿದರು. ಇದು ದೊಡ್ಡ ಗಾತ್ರದ ಕ್ಯಾನ್ವಾಸ್‌ ಪೋಸ್ಟರ್‌ ಆಗಿದ್ದು ಅರ್ಧ ಗೋಡೆಯನ್ನೇ ಅವರಿಸಿತ್ತು. ಕಾರ್ಯಕರ್ತರು ಕಟ್ಟಡದ ಮೇಲೆ ಹೋಗಿ ಅದನ್ನು ಮೇಲೆಳೆದು ಹರಿದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪಠಾಣ್‌ ಚಿತ್ರದಲ್ಲಿ ಬರುವ ಬೇಷರಮ್‌ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿ ನೃತ್ಯ ಮಾಡಿರುವುದು, ಅದರಲ್ಲೂ ತುಂಡು ಬಟ್ಟೆ ಹಾಕಿ ಅಶ್ಲೀಲವಾಗಿ ಕುಣಿದಿದ್ದು, ಬೇಷರಮ್‌ ಎಂಬ ಸಾಲುಗಳು ಬಂದಾಗ ಕೇಸರಿ ಬಣ್ಣವನ್ನು ತೋರಿಸುವುದು ಹಿಂದು ಸಂಘಟನೆಗಳನ್ನು ಕೆರಳಿಸಿದೆ. ಹೀಗಾಗಿ ಆರಂಭದಿಂದಲೇ ಪ್ರತಿಭಟನೆ ಕಾಣಿಸಿಕೊಂಡಿತ್ತು.

ಚಿತ್ರದಿಂದ ಈ ಹಾಡನ್ನು ತೆಗೆದುಹಾಕಬೇಕು ಎಂಬ ಆಗ್ರಹದಿಂದ ಚಿತ್ರವನ್ನೇ ಬ್ಯಾನ್‌ ಮಾಡಬೇಕು ಎನ್ನುವಷ್ಟರವರೆಗೆ ಆಗ್ರಹಗಳು ಕೇಳಿಬಂದವು. ಈ ನಡುವೆ, ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಬೇಷರಮ್‌ ಹಾಡಿದ ತುಣುಕು ಇರುವುದು ಹಿಂದು ಸಂಘಟನೆಗಳನ್ನು ಮತ್ತಷ್ಟು ಕೆರಳಿಸಿದೆ.

ಕೂಡಲೇ ಸಿನೆಮಾ ಬ್ಯಾನ್ ಮಾಡಬೇಕು ಇಲ್ಲದಿದ್ದರೆ ಚಿತ್ರಮಂದಿರಗಳಿಗೆ ನುಗ್ಗಿ ಹೋರಾಟ ಮಾಡಬೇಕಾಗುತ್ತೆ ಎಂದು ಧಾರವಾಡದ ಹಿಂದು ಸಂಘಟನೆಗಳು ಎಚ್ಚರಿಕೆ ನೀಡಿವೆ. ಕೆಲವು ದಿನಗಳ ಹಿಂದೆ ಉತ್ತರ ಭಾರತದಲ್ಲಿ ಒಂದು ಕಡೆ ಪಠಾಣ್‌ ಪೋಸ್ಟರ್‌ ಹಾಕಿದ್ದಕ್ಕೆ ಮಾಲ್‌ ಮೇಲೆಯೇ ದಾಳಿ ಮಾಡಲಾಗಿತ್ತು.

ಇದನ್ನೂ ಓದಿ | Pathan trailer | ಪಠಾಣ್‌ ಟ್ರೈಲರ್‌ ಬಿಡುಗಡೆ, ಕಟ್‌ ಆಗದ ದೀಪಿಕಾ ಕೇಸರಿ ಬಿಕಿನಿ ದೃಶ್ಯ

Exit mobile version