Site icon Vistara News

Karnataka CM: ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ದೇವರಿಗೆ ಮೊರೆ; 101 ತೆಂಗಿನಕಾಯಿ ಒಡೆದ ಹಿಂದು ಜಾಗೃತಿ ‌ಸೇನೆ

Hindu Jagruti Sene breaks 101 coconuts at RR Nagar

Hindu Jagruti Sene breaks 101 coconuts at RR Nagar

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಹಿಂದು ಜಾಗೃತಿ ‌ಸೇನೆ ಕಾರ್ಯಕರ್ತರು, ದೇವರ ಮೊರೆ ಹೋಗಿದ್ದು, 101 ತೆಂಗಿನಕಾಯಿ ಒಡೆದು ತಮ್ಮ ನೆಚ್ಚಿನ ನಾಯಕ ಸಿಎಂ ಆಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಆರ್.ಆರ್. ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಹಿಂದು ಜಾಗೃತಿ ಸೇನೆ ಅಧ್ಯಕ್ಷ ವಿನಯ್ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದ 101 ತೆಂಗಿನಕಾಯಿ ಒಡೆದಿದ್ದಾರೆ.

Congress workers protest in Ramanagara

ಡಿಕೆಶಿಗೆ ಅಧಿಕಾರ ಸಿಗಬೇಕು, ಇಲ್ಲವೆಂದರೆ ನೇಣು ಹಾಕಿಕೊಳ್ತೇನೆ; ಶರ್ಟ್ ಕಿತ್ತು ಅಭಿಮಾನಿ ಆಗ್ರಹ

ರಾಮನಗರ: ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡಬೇಕು ಇಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕನಕಪುರದಲ್ಲಿ ಅಭಿಮಾನಿಯೊಬ್ಬರು ಆಗ್ರಹಿಸಿದ್ದಾರೆ. ಕಷ್ಟಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದು ಡಿಕೆಶಿ, ಈಗ ಅಧಿಕಾರ ಮಾತ್ರ ಬೇರೆಯವರಿಗಾ?, ಅವರಿಗೆ ಅಧಿಕಾರ ಸಿಗಬೇಕು, ಇಲ್ಲವೆಂದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಶರ್ಟ್ ಕಿತ್ತು ಹಾಕಿ ಆಗ್ರಹಿಸಿದ್ದಾರೆ. ಡಿಕೆಶಿ ಅಭಿಮಾನಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಿಕೆಶಿಯನ್ನು ಸಿಎಂ ಮಾಡಲು ಆಗ್ರಹ; ಸಂಚಾರ ತಡೆ ನಡೆಸಿ ರಾಮನಗರ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

Congress workers protest in Ramanagara

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ರಾಮನಗರದ ಐಜೂರು ವೃತ್ತದಲ್ಲಿ ಮೈಸೂರು-ಬೆಂಗಳೂರು ಹಳೇ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಡಿಕೆಶಿ… ಡಿಕೆಶಿ… ಎಂದು ಘೋಷಣೆಗಳನ್ನು ಕೂಗುತ್ತಾ, ತಮ್ಮ ನಾಯಕನಿಗೆ ಸಿಎಂ ಪಟ್ಟ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ರಾಮನಗರದಲ್ಲಿ ಬಿಗಿ ಪೊಲೀಸ್ ಭದ್ರತೆ

ರಾಮನಗರ: ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಪರ ಹೈಕಮಾಂಡ್‌ ಒಲವು ತೋರಿದರೆ ಡಿ.ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ, ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಜಿಲ್ಲೆಯಾದ್ಯಂತ ಅಲರ್ಟ್‌ ಆಗಿರಲು ಪೊಲೀಸರಿಗೆ ಮೇಲಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ | Karnataka CM: ಒಬ್ಬೊಬ್ಬರಾಗಿ ಸರಣಿ ಪಟಾಕಿ ಸಿಡಿಸುತ್ತಿರುವ 17 ವಲಸಿಗರು: ಸಿದ್ದರಾಮಯ್ಯ ಪರವೋ? ವಿರುದ್ಧವೋ?

ಯಾವುದೇ ಪ್ರತಿಭಟನೆ ನಡೆಸದಂತೆ ಬೆಂಬಲಿಗರಿಗೆ ಡಿಕೆ ಬ್ರದರ್ಸ್ ಈಗಾಗಲೇ ಸೂಚಿಸಿದ್ದಾರೆ. ಪಕ್ಷಕ್ಕೆ ಮುಜುಗರ ಆಗದಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬೆಂಗಳೂರು, ಮೈಸೂರಿನಿಂದ 6 ಕೆಎಸ್‌ಆರ್‌ಪಿ ತುಕಡಿಗಳು ಜಿಲ್ಲೆಗೆ ಆಗಮಿಸಿವೆ.

Exit mobile version