ರಮೇಶ ದೊಡ್ಡಪುರ ಬೆಂಗಳೂರು
ದಕ್ಷಿಣ ಕನ್ನಡದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಹಿಂದು ಸಂಘಟನೆಗಳಲ್ಲಿ, ವಿಶೇಷವಾಗಿ ಬಿಜೆಪಿ ಪಕ್ಷದಲ್ಲಿ ಆಂತರಿಕ ಆಕ್ರೋಶ ಭುಗಿಲೆದ್ದಿದೆ. ಆ ಪಕ್ಷದ ಯುವ ಕಾರ್ಯಕರ್ತರು ತಮ್ಮ ನಾಯಕರ ಮೇಲಿನ ಭರವಸೆಯನ್ನೇ ಕಳೆದುಕೊಂಡಿರುವುದಾಗಿ ತಿಳಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷರ ಕಾರನ್ನೇ ಅಲುಗಾಡಿಸಿ ಆಕ್ರೋಶ ಹೊರಹಾಕಿದ್ದಾರೆ. ಇದೆಲ್ಲದಕ್ಕೆ ತಣ್ಣಗೆ ಬೆದರಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ, ಗುರುವಾರ ಹಮ್ಮಿಕೊಂಡಿದ್ದ ಬೃಹತ್ ವಾರ್ಷಿಕೋತ್ಸವ ಕಾರ್ಯಕ್ರಮವನ್ನೇ ರದ್ದುಮಾಡಿದೆ.
ಪ್ರವೀಣ್ ಹತ್ಯೆ ನಂತರ ಈ ಆಕ್ರೋಶ ವ್ಯಕ್ತವಾಗಿದೆಯಾದರೂ, ಈ ಮಹಾಸ್ಫೋಟಕ್ಕೆ ಅನೇಕ ಘಟನೆಗಳ ನಂತರ ಮನಸ್ಸಿನಲ್ಲಿ ಮಡುಗಟ್ಟಿದ ಅಸಮಾಧಾನ ಕಾರಣ ಎನ್ನುವುದು ಸ್ಪಷ್ಟ. ರಾಜಸ್ಥಾನದಲ್ಲಿ ಟೇಲರ್ ಹತ್ಯೆ, ಶಿವಮೊಗ್ಗದಲ್ಲಿ ಹರ್ಷನ ಹತ್ಯೆ, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದ ಹಿಂದು ಕಾರ್ಯಕರ್ತರ ಸರಣಿ ಹತ್ಯೆಗಳ ಕುರಿತು ಕೈಗೊಂಡ ಅಥವಾ ಕೈಗೊಳ್ಳದ ಕ್ರಮಗಳು ಇದಕ್ಕೆ ಕಾರಣ. ಈ ಬಂಡಾಯಕ್ಕೆ ಕಾರಣ ಏನು? ಇದಕ್ಕೆ ಪರಿಹಾರ ಏನು? ಬಿಜೆಪಿಯಿಂದ ಪರಿಹಾರವೇ? ಬಿಜೆಪಿಯಲ್ಲೇ ಸಮಸ್ಯೆಯಿದೆಯೇ ಎಂಬ ಕುರಿತು ನಾಡಿನ ಇಬ್ಬರು ಹಿಂದು ಮುಖಂಡರು( ಹಿಂದು ಜಾಗರಣ ವೇದಿಕೆಯ ಜಗದೀಶ ಕಾರಂತ, ವಿಶ್ವ ಹಿಂದು ಪರಿಷತ್‌ನ ಕೇಶವ ಹೆಗಡೆ) ಒಬ್ಬರು ಸಂತರು (ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ) ಹಾಗೂ ಹಿಂದು ಚಿಂತಕ (ಡಾ. ಜಿ.ಬಿ. ಹರೀಶ) ತಮ್ಮ ಅಭಿಪ್ರಾಯಗಳನ್ನು ʻವಿಸ್ತಾರ ನ್ಯೂಸ್ʼ ಜತೆ ಹಂಚಿಕೊಂಡಿದ್ದಾರೆ.
ಧ್ಯೇಯ ಕಮಲ ಹಾಗೂ ಆಪರೇಷನ್ ಕಮಲ ಒಟ್ಟಾಗಿ ಸಾಗಲು ಸಾಧ್ಯವಿಲ್ಲ: ಡಾ. ಜಿ.ಬಿ. ಹರೀಶ
ಜನಸಂಘದಿಂದ ಬೇರ್ಪಟ್ಟು ಬಿಜೆಪಿ ಆರಂಭವಾದಾಗಲೇ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವ ಪ್ರವೃತ್ತಿ ಆರಂಭವಾಗಿದೆ ಎಂದಿರುವ ಲೇಖಕ ಹಾಗೂ ಹಿಂದು ಚಿಂತಕ ಡಾ. ಜಿ.ಬಿ. ಹರೀಶ, ಧ್ಯೇಯ ಕಮಲ ಹಾಗೂ ಆಪರೇಷನ್ ಕಮಲ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪನೆ ಮಾಡಿದಾಗ ಆರ್‌ಎಸ್‌ಎಸ್ ಮುಖಂಡರಾದ ಮುಕುಂದ ಅವರು ಒಂದು ಲೇಖನ ಬರೆದಿದ್ದರು. ಸಂಘಕ್ಕೆ ಸೃಷ್ಟಿಸುವ ಹಾಗೂ ನಾಶ ಮಾಡುವ ಶಕ್ತಿ ಇದೆ ಎಂದು ಅವರು ಅದರಲ್ಲಿ ತಿಳಿಸಿದ್ದರು. ಈಗ ಆಗಬೇಕಾಗಿರುವುದೂ ಅದೇ. ಯಾವುದೇ ಹೋರಾಟ, ಅಭಿಯಾನವನ್ನು ಆಯಾ ಕಾಲದ ಸಮಾಜ ಸೃಷ್ಟಿ ಮಾಡುತ್ತದೆ. ಅದಕ್ಕೆ ಮುಖವಾಗಿ ಯಾರಾದರೂ ಒಬ್ಬ ವ್ಯಕ್ತಿ ಇರುತ್ತಾರೆ. ಉದಾಹರಣೆಗೆ ಜಯಪ್ರಕಾಶ ನಾರಾಯಣ, ದಯಾನಂದ ಸರಸ್ವತಿ ಅವರು ಆ ಕಾಲದ ಸಮಾಜದ ಬೇಡಿಕೆ, ಆಕಾಂಕ್ಷೆಗಳಿಗೆ ತಕ್ಕಂತೆ ನೇತೃತ್ವ ವಹಿಸಿದರು. ಇಂದಿನ ಸಮಾಜದ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ನೇತೃತ್ವ ನೀಡಬೇಕಾಗಿದೆ.
ಬಿಜೆಪಿ ಆರಂಭವಾದಾಗಲೇ, ತಾವು ಗಾಂಧಿಯನ್ ಸಮಾಜವಾದವನ್ನು ಪಾಲನೆ ಮಾಡುತ್ತೇವೆ ಎಂದು ಅಟಲ್ ಬಿಹಾರಿ ವಾಜಪೇಯಿ ಮುಂತಾದವರು ಹೇಳಿದರು. ಆದರೆ ಬಿಜೆಪಿ ಒಪ್ಪಿಕೊಂಡ ಈ ಗಾಂಧಿಯನ್ ಸಮಾಜವಾದದ ಜತೆಗೆ ಸಾವರ್ಕರ್ ಸಿದ್ಧಾಂತ, ಹೆಡಗೇವಾರ್ ಹಿಂದುತ್ವ ಸಾಗಲು ಸಾಧ್ಯವಿಲ್ಲ. ಗಾಂಧಿಯನ್ ಸಮಾಜವಾದ ತಪ್ಪು ಎಂದು ನಾನು ಹೇಳುತ್ತಿಲ್ಲ. ಅದರ ನೆಲೆಗಟ್ಟಿನಲ್ಲಿ ಅದು ಸರಿ. ಆದರೆ ಅದು ಬಿಜೆಪಿ ಬಹಿರಂಗವಾಗಿ ಹೇಳುತ್ತಿರುವ ಹಿಂದುತ್ವಕ್ಕೆ ಹೊಂದಿಕೆ ಆಗುವುದಿಲ್ಲ. ಹಾಗಾಗಿ ಸಿದ್ಧಾಂತಗಳಲ್ಲಿ ಹೊಂದಾಣಿಕೆ, ರಾಜಿ ಮಾಡಿಕೊಳ್ಳುವ ಗುಣ ಬಿಜೆಪಿಯ ರಕ್ತದಲ್ಲೇ ಇದೆ. ಬಿಜೆಪಿ ಎರಡು ಕುದುರೆಗಳ ಮೇಲೆ ಒಟ್ಟಿಗೆ ಪ್ರಯಾಣ ಮಾಡುವ ಕೆಲಸವನ್ನು ಮಾಡುತ್ತಿದೆ. ಹಿಂದುತ್ವವಲ್ಲದ ಹಿನ್ನೆಲೆ ಹೊಂದಿರುವವರು ಸರ್ಕಾರದ ನೇತೃತ್ವ, ಪ್ರಮುಖ ಸ್ಥಾನದಲ್ಲಿ ನೆಲೆಸಲು ಅವಕಾಶ ನೀಡಿದಾಗಲೇ ಈ ವಿಚಾರ ಮತ್ತಷ್ಟು ಸ್ಪಷ್ಟವಾಯಿತು. ಪಕ್ಷಾಂತರಿಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳುತ್ತಿಲ್ಲ. ಆದರೆ ಅವರಿಗೆ ಬಿಜೆಪಿಯ ಟ್ರೈನಿಂಗ್ ಆಗಬೇಕಲ್ಲವೇ?
ರಾಷ್ಟ್ರೀಯ ಮಟ್ಟದಲ್ಲಿ ಆಡ್ವಾಣಿ, ವಾಜಪೇಯಿ ನಂತರದಲ್ಲಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ 2.0 ರಚನೆಯಾಗಿದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ 2.0 ಆರಂಭವಾಗಬೇಕು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಈ ರೀತಿ ಬಹಿರಂಗವಾಗಿ ಹಾಗೂ ಆಂತರಿಕವಾಗಿ ಬಂಡಾಯ ಏಳುತ್ತಿದ್ದಾರೆ ಎಂದರೆ ಗಂಭೀರವಾಗಿ ಆಲೋಚನೆ ಮಾಡಲೇಬೇಕಾದ ಸಮಯ ಇದು. ಈ ಮಾತನ್ನು ಹೇಳಲು ಪ್ರಬಲ ಕಾರಣ ಇದೆ. ಈ ಹಿಂದೆ ಬಿಜೆಪಿಯವರು ಭ್ರಷ್ಟಾಚಾರ ವಿಚಾರದಲ್ಲಿ ಸಿಲುಕಿಕೊಂಡಾಗ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೆಲವರು ಅಶ್ಲೀಲತೆಯ ವಿಚಾರದಲ್ಲಿ ಸಿಲುಕಿಕೊಂಡಾಗ ಕಠಿಣ ಕ್ರಮ ಆಗಲಿಲ್ಲ. ಇದೆಲ್ಲವನ್ನೂ ಕಾರ್ಯಕರ್ತರು ಸಹಿಸಿಕೊಂಡರು. ಆದರೆ ಇದೀಗ ಬಿಜೆಪಿ, ಹಿಂದುತ್ವದಿಂದಲೇ ದೂರ ಸರಿಯುತ್ತಿದೆ ಎಂದು ಕಾರ್ಯಕರ್ತರಿಗೆ ಭಾಸವಾಗುತ್ತಿದೆ. ಯಾವ ಕಾರಣಕ್ಕೆ, ವಿಚಾರಕ್ಕೆ ತಮ್ಮ ಜೀವನವನ್ನೇ ಪಣವಾಗಿಟ್ಟು ಈ ಪಕ್ಷವನ್ನು ಬೆಂಬಲಿಸಿದೆವೋ ಅದರಿಂದಲೇ ದೂರ ಸರಿಯುತ್ತಿದೆ ಎಂದಾಗ ಸಹಜವಾಗಿ ಭ್ರಮನಿರಸನವಾಗಿದೆ.
ಇನ್ನು ಸಮಾಜದ ಕುರಿತು ಹೇಳುವುದಾದರೆ, ಸಮಾಜದಲ್ಲಿ ಪ್ರತಿಯೊಂದನ್ನೂ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರೇ ಮಾಡಬೇಕು ಎಂದು ಹಿಂದು ಸಮಾಜ ಕುಳಿತುಕೊಳ್ಳುವುದು ಮಹಾಪರಾಧ. ತಾವು ಮತ ನೀಡಿದ್ದೇವೆ, ನಮ್ಮ ರಕ್ಷಣೆಯನ್ನು ಅವರು ಮಾಡುತ್ತಾರೆ ಎಂದು ಔಟ್‌ಸೋರ್ಸ್ ನೀಡಲು ಆಗುವುದಿಲ್ಲ. ಗಾಂಧಿ, ಬುದ್ಧನ ಪರಂಪರೆಯಂತೆಯೇ ಭಾರತಕ್ಕೆ ಕೃಷ್ಣ, ಶಿವಾಜಿ ಪರಂಪರೆಯೂ ಇದೆ. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಕ್ಷಾತ್ರ ಪರಂಪರೆಯನ್ನು ಪುನರುಜ್ಜೀವನಗೊಳಿಸದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ. ಆತ್ಮರಕ್ಷಣೆಯನ್ನು ಕಾಂಟ್ರ್ಯಾಕ್ಟ್ ನೀಡಲು ಬರುವುದಿಲ್ಲ.
ಹಿಂದು ಸಮಾಜಕ್ಕೆ ಧೈರ್ಯ ತುಂಬುವ ನಾಯಕರು ಬೇಕಾಗಿದ್ದಾರೆ: ವಜ್ರದೇಹಿ ಸ್ವಾಮೀಜಿ
ಹಿಂದು ಸಮಾಜವನ್ನು ಧೃತಿಗೆಡುವಂತೆ ಮಾಡುವ ನಾಯಕರುಗಳೇ ಕಾಣುತ್ತಿದ್ದು, ಧೈರ್ಯ ತುಂಬುವವರು ಇಂದಿನ ಅಗತ್ಯವಾಗಿದ್ದಾರೆ ಎಂದು ಮಂಗಳೂರಿನ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಹಿಂದು ಸಮಾಜದಲ್ಲಿ ಭಯವನ್ನು ಉಂಟುಮಾಡುವ ಕಾರ್ಯವನ್ನು ಎಸ್‌ಡಿಪಿಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಸ್‌ಎಫ್), ಕರ್ನಾಟಕ ಫೋರಂ ಫಾರ್ ಡಿಗ್ನಿಟಿಯಂತಹ(ಕೆಎಫ್‌ಡಿ) ಸಂಘಟನೆಗಳು ಮಾಡುತ್ತಿವೆ. ಈ ಸಂಘಟನೆಗಳು ಅಮಾಯಕ ಮುಸ್ಲಿಮರ ತಲೆಗೆ ಇಲ್ಲದ್ದನ್ನು ತುಂಬಿ ಅವರನ್ನು ಮತಾಂಧತೆಯ ಕುಕೃತ್ಯಕ್ಕೆ ದೂಡುತ್ತಿವೆ. ಭಾರತವನ್ನು ಕಂಗೆಡಿಸುವುದೇ ಈ ಸಂಘಟನೆಗಳ ಉದ್ದೇಶವೇ ಹೊರತು ಇದು ಕೇವಲ ದಕ್ಷಿಣ ಕನ್ನಡ, ಉತ್ತರ ಕನ್ನಡಕ್ಕೆ ಸೀಮಿತವಾದ ಪ್ರತ್ಯೇಕ ಘಟನೆಗಳಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಹಾಗೆಯೇ ಇದು ಇಡೀ ಭಾರತದ ಮೇಲಿನ ದಾಳಿಯೇ ವಿನಃ ಕೇವಲ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಮೇಲಿನ ದಾಳಿ ಎಂದು ಸರಳೀಕರಿಸಬಾರದು.
ಇನ್ನು ಸರ್ಕಾರದ ವಿಚಾರಕ್ಕೆ ಬಂದರೆ, ಇದು ಬಹುಮತದ ಬಿಜೆಪಿ ಸರ್ಕಾರ ಅಲ್ಲ. ಇದು ಬಿ.ಎಸ್. ಯಡಿಯೂರಪ್ಪ ಅವರು ವಿವಿಧ ಪ್ರಯತ್ನಪಟ್ಟು ಸ್ಥಾಪಿಸಿರುವ ಸರ್ಕಾರ. ಈಗ ಸಮಸ್ಯೆಗಳಿವೆ. ಆದರೆ ಈ ಸರ್ಕಾರ ಇರುವುದರಿಂದ ಕನಿಷ್ಠ ಇಷ್ಟಾದರೂ ರಕ್ಷಣೆ ಸಿಗುತ್ತಿದೆ ಎನ್ನುವುದನ್ನು ಯಾರೂ ಮರೆಯಬಾರದು. ಹರ್ಷ ಹತ್ಯೆ ಇರಬಹುದು, ವಿವಿಧ ಪ್ರಕರಣಗಳಲ್ಲಿ ಬೇಗನೆ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪ್ರವೀಣ್ ಹತ್ಯೆ ಮಾಡಿದವರನ್ನು ಕೇವಲ ಒಂದೂವರೆ ದಿನದಲ್ಲಿ ಬಂಧಿಸಿದ್ದಾರೆ. ಬೇರೆ ಸರ್ಕಾರವಿದ್ದರೆ ಇದನ್ನು ಊಹಿಸಲೂ ಆಗುತ್ತಿರಲಿಲ್ಲ.
ಆದರೆ ಸರ್ಕಾರದವರ ಮಾತುಗಳನ್ನು ಕೇಳಿದರೆ ಧೃತಿಗೆಡುತ್ತದೆಯೇ ಹೊರತು ಧೈರ್ಯ ಬರುವುದೇ ಇಲ್ಲ. ಹಿಂದು ಸಮಾಜಕ್ಕೆ ಪ್ರೇರಣೆ ನೀಡುವ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡುವ ನಾಯಕರು ಇಂದು ಬೇಕಾಗಿದ್ದಾರೆ. ಉತ್ತರ ಪ್ರದೇಶದಂತಹ ಗೂಂಡಾ ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿ ಆಗಿ ಬಂದ ನಂತರ ಬದಲಾವಣೆ ಆಗಿಲ್ಲವೇ? ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ ಎಂದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ?
ಈಗ ನಮ್ಮ ಜತೆಗೆ ಇರುವವರಲ್ಲಿ ಸಮಸ್ಯೆಗಳಿವೆ ಎಂದು ಭ್ರಮನಿರಸನ ಮೂಡಿಸುವ ಕೆಲಸಗಳು ಆಗುತ್ತಿವೆ. ಆದರೆ ಈ ಕುರಿತು ಹಿಂದು ಸಮಾಜ ಎಚ್ಚರಿಕೆ ವಹಿಸಬೇಕು. ಹೊರಗಿನಿಂದ ಒಳ್ಳೆಯವರನ್ನು ಹಿಡಿದುಕೊಂಡು ಬರಲು ಆಗುವುದಿಲ್ಲ. ಹೊರಗಿನಿಂದ ಬರುವವರು ಇವರಿಗಿಂತಲೂ ಕೆಳಮಟ್ಟದಲ್ಲಿರುತ್ತಾರೆ. ಈಗ ಇರುವವರನ್ನೇ ಸರಿದಾರಿಗೆ ಕರೆದುಕೊಂಡು ಬರುವುದೇ ನಿಜವಾದ ಪರಿಹಾರ ಎಂದು ವಜ್ರದೇಹಿ ಸ್ವಾಮೀಜಿ ತಿಳಿಸಿದ್ದಾರೆ.
ನಮ್ಮ ರಕ್ಷಣೆಯ ಜವಾಬ್ದಾರಿಯನ್ನು ಮತ್ಯಾರೋ ಮಾಡಲು ಸಾಧ್ಯವಿಲ್ಲ: ಜಗದೀಶ ಕಾರಂತ
ಇಸ್ಲಾಮಿಕ್ ಶಕ್ತಿಗಳು ಭಾರತವನ್ನು ಅಶಕ್ತಗೊಳಿಸಲು ವಿವಿಧ ಉಪಾಯಗಳನ್ನು ಹುಟ್ಟುಹಾಕುತ್ತಿರುತ್ತವೆ. ಇವುಗಳಿಂದ ರಕ್ಷಣೆಯನ್ನು ಪಡೆಯಬೇಕಾದದ್ದು ಹಿಂದು ಸಮಾಜದ ಹೊಣೆ ಹಾಗೂ ಅಧಿಕಾರ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ತಿಳಿಸಿದ್ದಾರೆ.
ಆತ್ಮ ರಕ್ಷಣೆ, ಆಸ್ತಿಯ ರಕ್ಷಣೆ, ಮನೆಯ ರಕ್ಷಣೆ, ಕುಟುಂಬದ ರಕ್ಷಣೆ, ಅಕ್ಕನ ಮಾನ, ತಂಗಿಯ ಪ್ರಾಣ, ತಾಯಿಯ ಗೌರವವನ್ನು ಕಾಪಾಡಿಕೊಳ್ಳುವುದು ಪ್ರತಿ ಹಿಂದುವಿನ ಕರ್ತವ್ಯ. ಅದಕ್ಕೆ ಸಮಾಜ ಸಿದ್ಧ ಆಗುವುದೇ, ಹೊರಗಿನ ಆಕ್ರಮಣಗಳನ್ನು ಎದುರಿಸಲು ಇರುವ ಪರಿಹಾರ. ಇಸ್ಲಾಮಿಕ್ ಆಕ್ರಮಣಕಾರರು ದೇಶವನ್ನು ಆಳುತ್ತಿದ್ದಾಗಲೂ ಹಿಂದು ಸಮಾಜ ಇಂತಹ ಕ್ಷಾತ್ರತೇಜಸ್ಸನ್ನು ಪ್ರದರ್ಶಿಸಿದೆ.
ಸಮಾಜವನ್ನು ಇಂತಹ ಆಕ್ರಮಣಗಳಿಂದ ರಕ್ಷಣೆ ಮಾಡುವುದು ಸರ್ಕಾರಗಳು, ಆಡಳಿತಗಾರರ ವ್ಯಾಪ್ತಿಯನ್ನು ಮೀರಿದ ವಿಚಾರಗಳು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆದ ಹಿಂಸಾಚಾರ, ಕಾಶ್ಮೀರದಲ್ಲಿ ನಡೆದ ಘಟನೆಗಳು ನಮಗೆ ಇದನ್ನೇ ಕಲಿಸಿವೆ. ಸಂಘಟನೆಗಳ ಒಳಗೆ ವಿಷಬೀಜವನ್ನು ಬಿತ್ತಿ, ಪರಸ್ಪರರಲ್ಲೆ ಅಪನಂಬಿಕೆಯನ್ನು ಮೂಡಿಸಿ ತಾವು ಗೆಲ್ಲುವ ಹುನ್ನಾರವನ್ನು ಕೆಲವರು ಮಾಡುತ್ತಿದ್ದಾರೆ. ಇಂತಹ ಷಡ್ಯಂತ್ರಗಳಿಂದ, ಸೈಕಾಲಾಜಿಕಲ್ ವಾರ್‌ಗಳಿಂದ ಎಚ್ಚರಿಕೆಯನ್ನು ಕಾರ್ಯಕರ್ತರು, ಒಟ್ಟಾರೆ ಹಿಂದು ಸಮಾಜ ವಹಿಸಬೇಕು.
ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಸುರಕ್ಷತೆ ಬೇಕು: ಕೇಶವ ಹೆಗಡೆ
ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ಸುರಕ್ಷತೆ ಬೇಕಾಗಿದೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದ್ದಾರೆ.
ದೇಶದ ವಿವಿಧೆಡೆ ಹಿಂದುಗಳ ಮೇಲೆ, ಹಿಂದು ಕಾರ್ಯಕರ್ತರ ಮೇಲೆ ದಾಳಿಗಳು ಮರುಕಳಿಸುತ್ತಿವೆ. ಹರ್ಷ ಹತ್ಯೆಯ ನಂತರ ಇದೀಗ ಪ್ರವೀಣ್ ಹತ್ಯೆ ನಡೆದಿರುವುದು ದುರದೃಷ್ಟಕರ. ಹಿಂದು ಸಂಘಟನೆಗಳಲ್ಲಿ ತೊಡಗಿಸಿಕೊಂಡ ಸಮರ್ಪಿತ ಕಾರ್ಯಕರ್ತರೇ ಸಮಾಜವನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡದಿದ್ದಾರೆ ಪರಿಸ್ಥಿತಿ ಗಂಭೀರವಾಗುತ್ತದೆ. ಈಗಾಗಲೆ ನಡೆದಿರುವ ಪ್ರಕರಣಗಳ ಕುರಿತು ಕಠಿಣ ಕ್ರಮಗಳನ್ನು ಕೈಗೊಂಡರೆ ಆಗ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡುತ್ತದೆ.
ಇದನ್ನೂ ಓದಿ | Praveen Nettaru | ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲು, ಪಕ್ಷದ ಜನೋತ್ಸವ ಕಾರ್ಯಕ್ರಮ ರದ್ದು