Site icon Vistara News

ಏನಾದರೂ ಅನಾಹುತ ಸಂಭವಿಸಿದರೆ ಹಿಂದು ಸಮಾಜ ಹೊಣೆಯಲ್ಲ: ಸರ್ಕಾರಕ್ಕೆ ವಿಶ್ವ ಹಿಂದು ಪರಿಷತ್‌ ಎಚ್ಚರಿಕೆ

Vishwa hindu Parishad Milind Parande

ಬೆಂಗಳೂರು: ಸುಳ್ಯದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವಿಶ್ವ ಹಿಂದು ಪರಿಷತ್‌ ಖಡಕ್‌ ಎಚ್ಚರಿಕೆ ನೀಡಿದೆ. ಇಂತಹದ್ದೇ ಘಟನೆಗಳು ಮರುಕಳಿಸುತ್ತ ಹಿಂದು ಸಮಾಜ ಏನಾದರೂ ದಂಗೆ ಎದ್ದು ಅನಾಹುತ ಸಂಭವಿಸಿದರೆ ಅದಕ್ಕೆ ಹಿಂದು ಸಮಾಜವನ್ನು ಯಾವುದೇ ಕಾರಣಕ್ಕೆ ದೂರಬೇಡಿ ಎಂದು ಸಂದೇಶ ರವಾನಿಸಿದೆ.

ಈ ಕುರಿತು ವಿಶ್ವ ಹಿಂದು ಪರಿಷತ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಶಿರಚ್ಛೇದ ಪ್ರಕರಣ, ದಕ್ಷಿಣ ಕನ್ನಡದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಸೇರಿ ಎಲ್ಲದರಲ್ಲೂ ಮೃತರ ಕುಟುಂಬ ಹಾಗೂ ಹಿಂದು ಸಮಾಜಕ್ಕೆ ನ್ಯಾಯ ಸಿಗಬೇಕು. ಇದಕ್ಕಾಗಿ ಫಾಸ್ಟ್‌ಟ್ರಾಕ್‌ ಕೋರ್ಟ್‌ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಥಾಪನೆ ಮಾಡಬೇಕು.

ಜಿಹಾದಿ ಮನಸ್ಥಿತಿಯು ಇಂತಹ ಹೇಯ ಕೃತ್ಯಗಳನ್ನು ಮುಂದುವರಿಸಿದರೆ ಇದರಿಂದ ಹಿಂದು ಸಮಾಜ ಸಿಡಿದೇಳುವುದು ಸಹಜ. ಸಿಡಿದೆದ್ದಾಗ ಸಹಜವಾಗಿಯೇ ಆನಾಹುತಕಾರಿ ಸ್ಥಿತಿ ನಿರ್ಮಾಣ ಆಗಬಹುದು. ಇಂತಹ ಸ್ಥಿತಿಗೆ ಹಿಂದು ಸಮಾಜವನ್ನು ಹೊಣೆ ಮಾಡಬೇಡಿ ಎಂದಿದ್ದಾರೆ.

ಇದನ್ನೂ ಓದಿ | Praveen Nettar| ‌ಪ್ರವೀಣ್‌ ಕೊಲೆಗೆ ಉದಯಪುರದ ಕನ್ಹಯ್ಯಲಾಲ್‌ ಹತ್ಯೆ ಲಿಂಕ್‌

ಮುಸ್ಲಿಂ ಸಮಾಜದ ಕುರಿತು ಪ್ರತಿಕ್ರಿಯಿಸಿರುವ ಮಿಲಿಂದ್‌ ಪರಾಂಡೆ ಅವರು, ಮುಸ್ಲಿಂ ಸಮುದಾಯವು ಈಗ ನಿರ್ಧಾರ ಮಾಡಬೇಕಿದೆ. ಅವರಿಗೆ ಮದನಿಗಳು ಹಾಗೂ ಓವೈಸಿಗಳ ನಾಯಕತ್ವ ಬೇಕೆ ಅಥವಾ ಕಲಾಂ ಹಾಗೂ ಅಶ್ಫಾಖ್‌ ಉಲ್ಲಾ ಖಾನ್‌ ಅವರಂತಹ ನಾಯಕತ್ವ ಬೇಕೆ ಎಂದು ತೀರ್ಮಾನಿಸಬೇಕಿದೆ. ತಮ್ಮ ಸಮುದಾಯದಲ್ಲಿ ಅತಿರೇಕಗಳಿಗೆ ಹಾಗೂ ಮೂಲಭೂತವಾದಕ್ಕೆ ತಿಲಾಂಜಲಿ ನೀಡಿ, ಅಂತಹ ಮನಸ್ಥಿತಿಯವರನ್ನು ಹೊರಹಾಕದಿದ್ದರೆ, ಒಟ್ಟಾರೆ ಮುಸ್ಲಿಂ ಸಮುದಾಯದ ಮಾತು ಹಾಗೂ ಕೃತಿಯ ಮೇಲೆ ಅನುಮಾನಗಳು ಉಂಟಾಗುತ್ತವೆ. ಜಮಾತ್‌ ಎ ಇಸ್ಲಾಮಿಯಂತಹ ಸಂಘಟನೆಗಳು ಒಂದು ಕಡೆ ಮೂಲಭೂತವಾದಿಗಳಿಗೆ ಬೆಂಬಲ ನೀಡುತ್ತ ಮತ್ತೊಂದೆಡೆ ಹಿಂದು ಸಮುದಾಯದ ಉತ್ಸವಗಳಲ್ಲಿ ತಂಪು ಪಾನೀಯ ನೀಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಪರಾಂಡೆ ಕಿಡಿಕಾರಿದ್ದಾರೆ.

ಇಂಟರ್‌ನೆಟ್‌ನಲ್ಲಿ ಜಿಹಾದಿ ಪೋಸ್ಟ್‌ಗಳನ್ನು ಹರಿಯಬಿಡಲಾಗುತ್ತಿದ್ದು, ಅದನ್ನು ತಡೆಯಬೇಕು. ನೇಪಾಳದಿಂದ ದೆಹಲಿವರೆಗೆ ಭಯೋತ್ಪಾದನಾ ಕಾರಿಡಾರ್‌ ನಿರ್ಮಿಸುವ ಕುರಿತು ಸುದ್ದಿಗಳಿದ್ದು, ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಿಲಿಂದ್‌ ಪರಾಂಡೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Praveen Nettaru | ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ: ಎಸ್‌ಪಿ ಋಷಿಕೇಶ್‌ ಸೋನಾವಣೆ

Exit mobile version