ಕಲಬುರಗಿ/ಶಿವಮೊಗ್ಗ: ನಾನು ಹಿಂದು ಧರ್ಮದ ವಿರೋಧಿಯಲ್ಲ, ಹಿಂದುತ್ವದ ವಿರೋಧಿ ಎಂಬ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಅದೇ ಹೊತ್ತಿಗೆ ಅವೆರಡೂ ಒಂದೇ ನಾಣ್ಯದ ಎರಡು ಮುಖ (Hindutva fight) ಎಂದು ಸಮರ್ಥಿಸಿಕೊಂಡಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.
ಕಲಬುರಗಿಯಲ್ಲಿ ನಡೆದ ಮಾಜಿ ಶಾಸಕ ಬಿ.ಆರ್ ಪಾಟೀಲ್ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʻʻನಾನು ಯಾವತ್ತೂ ಹಿಂದು ಧರ್ಮದ ವಿರೋಧಿಯಲ್ಲ ನಾನು ಕೂಡ ಹಿಂದೂನೇ. ನಾನು ಮನುವಾದದ ವಿರೋಧಿ, ಹಿಂದುತ್ವದ ವಿರೋದಿ ಅಷ್ಟೇʼʼ ಎಂದು ಹೇಳಿದರು.
ʻʻನಾನು ಹಿಂದು ಧರ್ಮದ ಬಗ್ಗೆ ವಿರೋಧ ಮಾಡುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವ ರಾಜಕೀಯವನ್ನು, ಆ ಮೂಲಕ ಸೃಷ್ಟಿಸುತ್ತಿರುವ ದ್ವೇಷವನ್ನು ಪ್ರಶ್ನೆ ಮಾಡಿದ್ದೇನೆʼʼ ಎಂದ ಅವರು, ಯಾವುದಾದರೂ ಧರ್ಮದಲ್ಲಿ ಕೊಲೆ ಹಿಂಸೆಗೆ ಪ್ರೋತ್ಸಾಹ ಇದೆಯಾ ಎಂದು ಪ್ರಶ್ನಿಸಿದರು.
ಒಂದೇ ನಾಣ್ಯದ ಎರಡು ಮುಖ ಎಂದ ಸಿ.ಟಿ. ರವಿ
ಈ ನಡುವೆ, ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮಾತನಾಡಿದ ಸಿ.ಟಿ. ರವಿ, ಹಿಂದುತ್ವ ವಿಚಾರ ಇವತ್ತೂ ತಗೊಳ್ತೀವಿ, ಮುಂದೂ ತಗೊಳ್ತೀವೆ ಎಂದರು.
ʻʻಹಿಂದು, ಹಿಂದುತ್ವ ಒಂದು ನಾಣ್ಯದ ಎರಡು ಮುಖಗಳು. ಹಿಂದುತ್ವ ಅಂದರೆ ಎಲ್ಲವನ್ನೂ ಒಪ್ಪಿಕೊಳ್ಳುವುದು. ದೇವನೊಬ್ಬ ನಾಮ ಹಲವು ಎಂಬ ತತ್ತ್ವ ಹಿಂದುತ್ವದಲ್ಲಿದೆ. ಜಾತಿ ಸಮಾನತೆ ಬಯಸುವುದಿಲ್ಲ, ಹಿಂದುತ್ವ ಸಮಾನತೆ ಬಯಸುತ್ತದೆ. ಸಿದ್ದರಾಮಯ್ಯ ಹಿಂದುತ್ವ ಒಪ್ಪುವುದಿಲ್ಲ ಎಂದಾದರೆ ಅವರಿಗೆ ಸಮಾನತೆ ಬೇಕಾಗಿಲ್ಲ. ಅವರಿಗೆ ಜಾತೀಯತೆ, ಅಸ್ಪೃಷ್ಯತೆ ಬೇಕು ಎಂದರ್ಥʼʼ ಎಂದು ಹೇಳಿದರು.
ʻʻಈ ಕಾರಣಕ್ಕಾಗಿಯೇ ಅವರು ದಲಿತರಾಗಿರುವ ಪರಮೇಶ್ವರ ಅವರನ್ನು ಸೋಲಿಸಿದರು. ಹಾಗಾಗಿ ಅವರು ಹಿಂದುತ್ವವನ್ನು ಒಪ್ಪಿಕೊಳ್ಳದಿರುವುದು ಸರಿಯಿದೆʼʼ ಎಂದು ಕಟಕಿಯಾಡಿದರು.
ಜೆಡಿಎಸ್‌ನವರದು ಅದೆಂಥಾ ತ್ಯಾಗ!
ಜೆಡಿಎಸ್‌ನ ಕುಟುಂಬ ರಾಜಕೀಯವನ್ನು ಕೂಡಾ ಖಂಡಿಸಿದ ಅವರು, ʻʻಜೆಡಿಎಸ್‌ನಲ್ಲಿ ಹಾಸನ ಟಿಕೆಟ್ ಭವಾನಿ ರೇವಣ್ಣಗೆ ಕೊಡಬೇಕು, ಎಮ್ಮೆಲ್ಸಿ ಬೇಕಿದ್ರೆ ಸೂರಜ್ ರೇವಣ್ಣಗೆ ಕೊಡಬೇಕು, ಎಂಪಿ ಟಿಕೆಟ್ ಪ್ರಜ್ವಲ್ ರೇವಣ್ಣಗೆ, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಮಾತ್ರ ಯೋಗ್ಯತೆ ಇರೋದು. ಅವರು ಬಿಟ್ಟುಕೊಟ್ಟರೆ ಆ ಟಿಕೆಟನ್ನು ನಿಖಿಲ್ ಕುಮಾರಸ್ವಾಮಿಗೆ ಕೊಡಬೇಕು. ಇವೆಲ್ಲವನ್ನು ಅವರು ಕರೆಯೋದು ತ್ಯಾಗ ಅಂತ ಕರಿತಾರೆ. ಇದು ಅವರ ಪರಿಭಾಷೆʼʼ ಎಂದು ಗೇಲಿ ಮಾಡಿದರು.
ʻʻಬಿಜೆಪಿಯಲ್ಲಿ ಚಹಾ ಮಾರುವವರು ಪ್ರಧಾನಿಯಾದರು, ರೈತನ ಮಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ನಮ್ಮಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು. ನಾವೆಲ್ಲ ಸಾಮಾನ್ಯ ಕಾರ್ಯಕರ್ತರಾಗಿ ಬಂದವರು. ಪ್ರತಿ ಕಾರ್ಯಕರ್ತನಿಗೂ ಯಾವ ಪದವಿಗೂ ಹೋಗುವ ಅವಕಾಶ ಬಿಜೆಪಿ ಮುಕ್ತವಾಗಿ ಇಡುತ್ತದೆʼʼ ಎಂದರು ಸಿ.ಟಿ. ರವಿ.
ಇದನ್ನೂ ಓದಿ : Modi in Karnataka : ಮೋದಿಗೆ ಸಿದ್ದರಾಮಯ್ಯ 21 ಪ್ರಶ್ನೆ; ಅದಾನಿ, ಎಚ್‌ಎಎಲ್, ವಿದ್ಯುತ್ ಸೇರಿ ನಾನಾ ವಿಷಯಗಳ ಮೂಲಕ ಕೆಣಕಿದ ಕೈ ನಾಯಕ