ಚಿಕ್ಕೋಡಿ: ಇದೊಂದು ಅತಿ ಕ್ರೂರ ಕೊಲೆ! ಸರ್ವಸಂಗ ಪರಿತ್ಯಾಗಿ, ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ ಅವರನ್ನು ಬರ್ಬರವಾಗಿ ಹತ್ಯೆ (Jain muni Murder) ಮಾಡಿ, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ. ಅಲ್ಲದೆ, ಆ ದೇಹದ ತುಂಡುಗಳನ್ನು ಬಟ್ಟೆಯಲ್ಲಿ ಸುತ್ತಿ ಕೊಳವೆ ಬಾವಿಗೆ ಎಸೆದಿದ್ದರು. ಈಗ ಮೃತದೇಹವನ್ನು ಎರಡು ದಿನಗಳ ನಿರಂತರ ಶೋಧ ನಡೆಸಿ ಪತ್ತೆ ಹಚ್ಚಿದ್ದಾರೆ.
ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದಲ್ಲಿನ ಗದ್ದೆಯೊಂದರ ಕೊಳವೆಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಟ್ಟೆಯಲ್ಲಿ ಸುತ್ತಿ ಗಂಟು ಕಟ್ಟಿದ್ದ ದುರುಳರು, ಅದನ್ನು ಯಾರಿಗೂ ಗೊತ್ತಾಗದಂತೆ ಕೊಳವೆ ಬಾವಿಯಲ್ಲಿ ಎಸೆದು ಬಂದಿದ್ದರು.
ಕರೆಂಟ್ ಶಾಕ್ ಕೊಟ್ಟು ಕೊಂದರೇ?
ಜೈನಮುನಿಗಳನ್ನು ಕೊಲ್ಲಲು ಈತ ಸಾಕಷ್ಟು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದನೇ? ಅವರನ್ನು ಕರೆಂಟ್ ಶಾಕ್ ನೀಡಿ ಕೊಲ್ಲಲಾಗಿದೆಯೇ ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ಜೈನಮುನಿ ಆಪ್ತ ಪ್ರದೀಪ್ ನಂದಗಾಂವ್ ಆರೋಪ ಮಾಡಿದ್ದಾರೆ.
ಐದು ಭಾಗ ಸಿಕ್ಕಿದೆ!
ಈವರೆಗೆ ಮೃತದೇಹದ ಒಟ್ಟು ಐದು ಭಾಗಗಳನ್ನು ಹೊರತಗೆಯಲಾಗಿದೆ. ಅವುಗಳನ್ನು ವೈದ್ಯಕೀಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಳವೆಬಾವಿಯ 20 ಅಡಿಯ ಆಳದಲ್ಲಿ ಮೃತದೇಹದ ಭಾಗಗಳು ಪತ್ತೆಯಾಗಿವೆ. ಸೀರೆ, ಟವೆಲ್ ಸೇರಿ ಇತರೆ ಬಟ್ಟೆಗಳನ್ನು ಸುತ್ತಿ ಕೊಳವೆ ಬಾವಿಗೆ ಎಸೆಯಲಾಗಿದೆ.
ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇದೆ. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.
ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ಅವರು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿತ್ತು.
ಇದನ್ನೂ ಓದಿ: Jain muni Murder : ಜೈನಮುನಿ ಕಾಮಕುಮಾರ ನಂದಿ ಹತ್ಯೆ; ಅನ್ನಾಹಾರ ಬಿಟ್ಟ ಜೈನಮುನಿ ಗುಣಧರನಂದಿ ಮಹಾರಾಜ್
ರಾತ್ರಿ ಇಡೀ ಪೊಲೀಸರಿಗೆ ತಪ್ಪು ಮಾಹಿತಿ
ತನಿಖೆ ಸಂದರ್ಭದಲ್ಲಿ ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿ ಶವವನ್ನು ಎಲ್ಲಿ ಬಿಸಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು. ಒಂದು ಬಾರಿ, ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಹೀಗಾಗಿ ಶನಿವಾರ ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕೊನೆಗೂ ಮೃತದೇಹ ಪತ್ತೆಯಾದಂತೆ ಆಗಿದೆ.
ಹಣದ ವಿಚಾರ ಕಾರಣವೇ?
ಸದ್ಯಕ್ಕೆ ಹಣದ ವಿಚಾರದ ಬಗ್ಗೆ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿಯು ಜೈನಮುನಿಯಿಂದ ಹಣವನ್ನು ಪಡೆದುಕೊಂಡಿದ್ದು, ಅದನ್ನು ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿಗಳು ಬಾಯಿಬಿಟ್ಟಿದ್ದಾರೆಂಬ ಮಾಹಿತಿ ಇದೆ. ಆದರೆ, ಇನ್ನಷ್ಟೇ ಸತ್ಯಾಂಶ ತಿಳಿದುಬರಬೇಕಿದೆ.