Site icon Vistara News

Karnataka Election 2023: ಹಾವೇರಿ ಕಾಂಗ್ರೆಸ್‌ನಲ್ಲಿ ಭಿನ್ನಮತ: ಪಕ್ಷ ತೊರೆದ ಹಿರೇಮಠ; ಜೆಡಿಎಸ್‌ನತ್ತ ಮನೋಹರ ತಹಶೀಲ್ದಾರ್?

Hiremath quits Haveri Congress and Manohar Tahsildar to join JDS Karnataka Election 2023 updates

ಹಾವೇರಿ: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಪ್ರಮಾಣದ ಬದಲಾವಣೆಗಳೂ ಕಂಡುಬರುತ್ತಿವೆ. ಪಕ್ಷಾಂತರ ಪರ್ವ, ಬಂಡಾಯದ ಬಿಸಿಗಳು ಎಲ್ಲ ರಾಜಕೀಯ ಪಕ್ಷಗಳಿಗೂ ತಟ್ಟುತ್ತಿವೆ. ಈಗ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಜಿಲ್ಲಾ ರಾಜಕೀಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರೆ, ಹಿರಿಯ ರಾಜಕಾರಣಿ ಮಾಜಿ ಸಚಿವ ಮನೋಹರ ತಹಶೀಲ್ದಾರ್‌ ಪಕ್ಷ ಬಿಡಲು ಮುಂದಾಗಿದ್ದಾರೆ. ‌

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಹಾವೇರಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಪ್ರಾಥಮಿಕ ‌ಸದಸ್ಯತ್ವಕ್ಕೆ ಎಂ.ಎಂ. ಹಿರೇಮಠ ರಾಜೀನಾಮೆ ನೀಡಿದ್ದಾರೆ. ನಾಲ್ಕು ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಾಜಿ ಸಚಿವ ರುದ್ರಪ್ಪ ಲಮಾಣಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಇವರು ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದಾರೆ.

ಪಕ್ಷೇತರ ಅಭ್ಯರ್ಥಿ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರವನ್ನು ಈಗಾಗಲೇ ರವಾನೆ ಮಾಡಿರುವ ಹಿರೇಮಠ ಅವರು ಪಕ್ಷೇತರ ಅಭ್ಯರ್ಥಿಯಾಗಿ ಎಂ.ಎಂ. ಹಿರೇಮಠ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರು, ಬ್ಯಾಡಗಿಯಲ್ಲಿಯೂ ಅನೇಕ ಕಾಂಗ್ರೆಸ್‌ ಮುಖಂಡರು ಪಕ್ಷ ತೊರೆಯಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ.

ಜೆಡಿಎಸ್‌ನತ್ತ ಮನೋಹರ್‌ ತಹಶೀಲ್ದಾರ್‌?

50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಅನುಭವಿ, ಹಿರಿಯ ರಾಜಕಾರಣಿ, ಮಾಜಿ ಸಚಿವ ಮನೋಹರ ತಹಶೀಲ್ದಾರ ಹಾನಗಲ್ ಟಿಕೆಟ್ ತಪ್ಪುತ್ತಿದ್ದಂತೆ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೆ ಮುಂದಾಗಿರುವ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಇದೇ ಮಾರ್ಚ್‌ 31ರಂದು ಅವರು ಕಾಂಗ್ರೆಸ್‌ ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಬೆಂಬಲಿಗರ ಸಭೆ ಕರೆದಿದ್ದಾರೆ.

ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪುತ್ತಿದ್ದಂತೆ ವ್ಯಗ್ರರಾಗಿರುವ ಮನೋಹರ್‌ ತಹಸೀಲ್ದಾರ್‌, ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆನ್ನಲಾಗಿದ್ದು, ಇದರ ಭಾಗವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಒಂದು ವೇಳೆ ಮಾತುಕತೆ ಫಲಪ್ರದವಾದರೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಮುಂದಾಗಿದ್ದಾರೆನ್ನಲಾಗಿದೆ.

ನನಗೆ ಮೋಸ ಮಾಡಿದರು

ಇದು ನನಗೆ ಕೊನೇ ಚುನಾವಣೆಯಾಗಿತ್ತು. ಹೀಗಾಗಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದೆ. ನನಗೊಂದು ಅವಕಾಶ ಮಾಡಿಕೊಡಿ, 50 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನಿಂದ ಕೆಲಸ ಮಾಡುತ್ತ ಬಂದಿದ್ದೇನೆ. 2018 , 2021ರಲ್ಲಿ ಟಿಕೆಟ್ ಕೊಡಲಿಲ್ಲ. ಎಂಎಲ್‌ಸಿ ಮಾಡುವ ಭರವಸೆ ನೀಡಿದ್ದರು. ಉಪ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದ್ದರು. ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಮಾಡುವುದಾಗಿ ಹೇಳಿ ಬಳಿಕ ಸಲೀಂ ಅಹ್ಮದ್‌ಗೆ ಟಿಕೆಟ್ ಕೊಟ್ಟರು. ನನಗೆ ಮೋಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Documents Digitalization: ಶ್ರೀನಿವಾಸ್‌ ಹೆಬ್ಬಾರ್‌ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ

ಮಾ. 30ರಂದು ತೀರ್ಮಾನ

ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೆ. ನನ್ನ ಮಗನಿಗೆ ಟಿಕೆಟ್ ಕೇಳಿರಲಿಲ್ಲ. ನನಗೆ ಟಿಕೆಟ್ ನೀಡಲು‌ ಆಗದಿದ್ದರೆ, ನನ್ನ ತಾಲೂಕಿನವರಿಗೆ ಯಾರಿಗಾದರೂ ಕೊಡಿ ಎಂದು ಹೇಳಿದ್ದೆ. ನನಗೂ ಟಿಕೆಟ್ ಕೊಡಲಿಲ್ಲ, ನನ್ನ ತಾಲೂಕಿನವರಿಗೂ ಕೊಡಲಿಲ್ಲ. ಈ ಸಾರಿ ಹೊರಗಿನವರಿಗೆ ಟಿಕೆಟ್ ಕೊಟ್ಟೆ ನಾವು ಚುನಾವಣೆಗೆ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ಮಾ. 30ರಂದು ನನ್ನ ಬೆಂಬಲಿಗರ ಸಭೆ ಕರೆದಿದ್ದು, ಅಲ್ಲಿ ನಿರ್ಧಾರ ಮಾಡುತ್ತೇನೆ. ನಮ್ಮ‌ ದಾರಿ ನಮಗೆ, ಅವರ ದಾರಿ ಅವರಿಗೆ. ಎಲ್ಲರ ಜತೆ ಸಂಪರ್ಕ ಮಾಡುವ ಅನಿವಾರ್ಯತೆ ಇದೆ. ಮುಂದೇನು ಮಾಡಬೇಕು ಎನ್ನುವ ಚಿಂತನೆ ಮಾಡುತ್ತಿದ್ದೇನೆ. ಬೆಂಗಳೂರಿಗೆ ಹೋಗಿ ಬೇರೆ ಬೇರೆ ನಾಯಕರನ್ನು ಭೇಟಿ ಮಾಡುತ್ತೇನೆ. ಅವರ ಕ್ಯಾಂಡಿಡೇಟ್ ಹೇಗೆ ಗೆಲ್ಲುತ್ತಾರೆ ಎಂಬುದನ್ನು ನಾವೂ ನೋಡ್ತೀವಿ ಎಂದು ಬಹಿರಂಗ ಎಚ್ಚರಿಕೆಯನ್ನು ನೀಡಿದರು.

Exit mobile version