Site icon Vistara News

54 ವರ್ಷ ವಯಸ್ಸು, 44 ವರ್ಷ ಅನುಭವ, 164 ಕೇಸು, 3 ಹೆಂಡ್ತಿ, 20 ಬಾರಿ ಜೈಲು: ಇದು ಒಬ್ಬ ಕಳ್ಳನ ಬಯೊಡಾಟಾ

Kalla prakash

ಬೆಂಗಳೂರು: ಅವನ ವಯಸ್ಸು ೫೪. ಆದರೆ ಕಳ್ಳತನದಲ್ಲಿ ಅವನಿಗೆ ೪೪ ವರ್ಷಗಳ ಅನುಭವ. ಅಂದರೆ, ೧೦ನೇ ವಯಸ್ಸಿಗೇ ಕೆಲಸ ಶುರು ಮಾಡಿದ್ದ! ಇದುವರೆಗೆ ಮಾಡಿರುವ ಸಾಹಸಗಳ ಸಂಖ್ಯೆ ೧೬೦+! ಜೈಲಿಗೆ ಹೋಗಿರುವುದು ೨೦ ಸಾರಿ!: ಇದು ಬೆಂಗಳೂರಿನ ರಾಜಾಜಿ ನಗರ ಪೊಲೀಸರಿಂದ ಬಂಧಿತನಾಗಿರುವ ಫುಲ್‌ ಟೈಮ್‌ ಕಳ್ಳನೊಬ್ಬನ ಬಯೊಡಾಟಾ.

ಈ ಕಳ್ಳನ ಹೆಸರು ಪ್ರಕಾಶ್‌. ರಾಜಾಜಿನಗರದ ನಿವಾಸಿ. ೧೯೭೮ರಲ್ಲಿ ೧೦ನೇ ವಯಸ್ಸಿನಲ್ಲಿ ಮೊದಲ ಬಾರಿ ಕಳ್ಳತನ ನಡೆಸಿದ ಈ ವ್ಯಕ್ತಿ ಬೇರೆ ವೃತ್ತಿ ಬಗ್ಗೆ ಆಲೋಚನೆ ಮಾಡಿದ್ದೇ ಇಲ್ಲ. ಇದರಲ್ಲೇ ಸಾಕಷ್ಟು ಸಂಪತ್ತು ಮಾಡಿಕೊಂಡಿದ್ದಾನೆ. ಐಷಾರಾಮಿ ಬದುಕನ್ನೂ ಕಟ್ಟಿಕೊಂಡಿದ್ದಾನೆ.

ಮೂರು ಹೆಂಡಿರ ಗಂಡ
ಕಳ್ಳರಿಗೆಲ್ಲ ಯಾರು ಹೆಣ್ಣು ಕೊಡ್ತಾರೆ ಅಂತ ನೀವೇನಾದರೂ ಯೋಚನೆ ಮಾಡಿದ್ದರೆ ಯೂ ಆರ್‌ ರಾಂಗ್‌. ಯಾಕೆಂದರೆ, ಪ್ರಕಾಶ್‌ಗೆ ಒಂದಲ್ಲ, ಎರಡಲ್ಲ, ಮೂರು ಮದುವೆಯಾಗಿದೆ. ಶಿವಮೊಗ್ಗ, ಬಳ್ಳಾರಿ ಮತ್ತು ಕೋಲಾರ ಮೂಲದ ಮೂವರು ಇವನಿಗೆ ಪತ್ನಿಯರು. ಒಟ್ಟು ಏಳು ಮಂದಿ ಮಕ್ಕಳು.

ಮಕ್ಕಳಿಗೂ ಕಳ್ಳತನ ಕಲಿಸಿದ್ದಾನೆ!
ತಮ್ಮ ಅಪ್ಪ ಒಬ್ಬ ಕಳ್ಳ ಅಂತ ಆ ಮಕ್ಕಳಿಗೆ ಗೊತ್ತಿದೆಯಾ? ಅಪ್ಪ ಅರೆಸ್ಟ್‌ ಆದಾಗ ಮಕ್ಕಳಿಗೆ ಏನಾದರೂ ಬೇಸರ ಆಗಿರಬಹುದಾ ಅಂತಾನೂ ನೀವು ಯೋಚಿಸಬೇಕಾಗಿಲ್ಲ.‌ ಯಾಕೆಂದರೆ, ಪ್ರಕಾಶ್‌ ತಾನು ಕಳ್ಳನಾಗಿದ್ದು ಮಾತ್ರವಲ್ಲ, ಇಡೀ ಕುಟುಂಬಕ್ಕೂ ಈ ಉದ್ಯಮವನ್ನು ಪರಿಚಯಿಸಿದ್ದಾನೆ. ಅವನ ಸಹೋದರ ವರದರಾಜ್‌ ಮತ್ತು ಮಕ್ಕಳಾದ ಬಾಲರಾಜ್‌, ಮಿಥುನ್‌ ಕೂಡಾ ಕಳ್ಳತನದಲ್ಲಿ ಪಂಟರುಗಳೇ. ಅಳಿಯ ಜಾನ್‌ಗೂ ಅದನ್ನು ಕಲಿಸಿದ್ದಾನೆ! ಮಕ್ಕಳು ಮತ್ತು ಅಳಿಯ ಪ್ರಕಾಶ್‌ಗೆ ಸಾಥ್‌ ಕೊಡಲು ಆರಂಭಿಸಿದ್ದು ೨೦೦೬ರಲ್ಲಿ. ಅಂದರೆ ಈಗ ಅವರೆಲ್ಲ ಸೇರಿ ಕಳವು ಮಾಡಲು ಶುರು ಮಾಡಿ ೧೬ ವರ್ಷ ಆಯಿತು.

ಎಂಟು ವರ್ಷದಲ್ಲಿ ಸೆಂಚುರಿ!
ಪ್ರಕಾಶನ ವೃತ್ತಿ ಬದುಕು ಆರಂಭದಲ್ಲೇ ಭರ್ಜರಿ ವೇಗವನ್ನು ಪಡೆದುಕೊಂಡಿತ್ತು. ಅಂದರೆ, ೧೯೭೮ರಿಂದ ೧೯೮೬ರ ನಡುವೆ ಎಂಟೇ ವರ್ಷದಲ್ಲಿ ಆತ ಸೆಂಚುರಿ ಬಾರಿಸಿಬಿಟ್ಟಿದ್ದ. ಅಂದರೆ, ಈ ಅವಧಿಯಲ್ಲಿ ೧೦೦ ಅಂಗಡಿ, ಮನೆಗಳನ್ನು ನುಗ್ಗಿಬಿಟ್ಟಿದ್ದ!
ಶೇಷಾದ್ರಿಪುರಂನ ಚಿನ್ನದ ಅಂಗಡಿಯಲ್ಲಿ ಗೋಡೆ ಕೊರೆದು ಎರಡೂವರೆ ಕೆಜಿ ಚಿನ್ನ ಕಳವು ಮಾಡಿದ್ದು, ಕೇರಳದ ಕೊಟ್ಟಾಯಂನಲ್ಲಿ 2.5 ಕೆಜಿ ಚಿನ್ನ ದೋಚಿದ್ದು, ಮಾರ್ಕೆಟ್‌ನ ಸೇಠ್‌ ಅಂಗಡಿ ಬೀಗ ಒಡೆದು ನಾಲ್ಕು ಕೆಜಿ ಚಿನ್ನ, ೨೦ ಕೆಜಿ ಬೆಳ್ಳಿಯನ್ನು ಲೂಟಿ ಮಾಡಿದ್ದು ಆ ಕಾಲದ ಮಹಾ ಸಾಹಸಗಳು. ಆಗ ಪ್ರಕಾಶನ ಕೃತ್ಯಗಳಿಗೆ ಬೆಂಬಲ ನೀಡಿದವರು ಸಹಚರರಾದ ಜೋಸೆಫ್‌, ಆನಂದನ್‌ ಮತ್ತು ಬಾಷಾ.
೧೯೮೯ ಮತ್ತು ೧೯೯೦ರ ಅವಧಿಯಲ್ಲಿ ವೈರಮುಡಿ ಮತ್ತು ನಾಗೇಶ್‌ ಎಂಬ ಸಹಚರರ ಜತೆ ಸೇರಿಕೊಂಡು ಮೈಸೂರಿನಲ್ಲಿ ೨೦ ಮನೆಗಳಿಗೆ ಕನ್ನ ಹಾಕಿದ ʻಕೀರ್ತಿʼ ಈ ಕಳ್ಳನದ್ದು! 1992ರಲ್ಲಿ ನಾಗೇಶನ ಜೊತೆ ಸೇರಿಕೊಂಡು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎರಡು ಚಿನ್ನದ ಅಂಗಡಿ ಒಡೆದು 17 ಕೆಜಿ ಚಿನ್ನಾಭರಣ ಕಳವು ಮಾಡಿದ್ದ ಅಂದರೆ ಅವನೆಂಥಾ ಖತರ್‌ನಾಕ್‌ ಇರಬಹುದು ನೀವೇ ಯೋಜಿಸಿ. ಅದಕ್ಕಿಂತಲೂ ದೊಡ್ಡದು ನಡೆದಿದ್ದು ಅದೇ ವರ್ಷ (೧೯೯೨) ಶಿವಮೊಗ್ಗದಲ್ಲಿ. ಶಿವಮೊಗ್ಗದ ಫೈನಾನ್ಸ್‌ ಕಚೇರಿಗೆ ನುಗ್ಗಿ ೩ ಕೋಟಿ ರೂ. ನಗದು ಕಳವು ಮಾಡಿದ್ದ. ಕಂಟ್‌ ಮಂಡೂರು ಎಂಬಲ್ಲಿಂದ ೭ ಕೆಜಿ ಚಿನ್ನಾಭರಣ ದೋಚಿದ್ದ. ೧೯೯೭ರಲ್ಲಿ ಗೋವಾದಲ್ಲಿ ೭ ಕೆಜಿ ಚಿನ್ನಾಭರಣ ಕಳವು ಮಾಡಿದ್ದ.

ಜೈಲಿಗೆ ಹೋದಾಗಲೆಲ್ಲ ಹೊಸ ಟೀಮ್‌!
ಪ್ರಕಾಶನನ್ನು ಪೊಲೀಸರು ಸುಮ್ಮನೆ ಬಿಟ್ಟಿಲ್ಲ. ಒಟ್ಟು ೨೦ ಬಾರಿ ಜೈಲಿಗೆ ಕಳುಹಿಸಿದ್ದಾರೆ. ಆದರೆ, ಅವನನ್ನು ಜೈಲಿಗೆ ಕಳುಹಿಸುವುದು ಕೂಡಾ ಡೇಂಜರೇ. ಯಾಕೆಂದರೆ, ಪ್ರತಿ ಬಾರಿ ಜೈಲಿಗೆ ಕಳುಹಿಸಿದಾಗಲೂ ಒಂದೊಂದು ಹೊಸ ಟೀಮ್‌ ಕಟ್ಟಿಕೊಂಡು ಬರುತ್ತಿದ್ದ ಅವನು!
ರಾಜ್ಯದ ಬೆಂಗಳೂರು, ಕೋಲಾರ, ಬಳ್ಳಾರಿ, ಶಿವಮೊಗ್ಗ, ಗುಲ್ಬರ್ಗ ಮತ್ತು ಗೋವಾ, ಕೇರಳದಲ್ಲಿ ಅವನು ಹೆಚ್ಚು ಕೈಚಳಕ ತೋರಿಸಿದ್ದಾನೆ. ಐಷಾರಾಮಿ ಮನೆಗಳು, ಜ್ಯುವೆಲ್ಲರಿ ಶಾಪ್, ಫೈನಾನ್ಸ್ ಕಚೇರಿಗಳೇ ಇವನ ಪ್ರಮುಖ ಟಾರ್ಗೆಟ್.

ರಾಜಾಜಿನಗರದ ಮನೆ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಆಗಸ್ಟ್‌ ೨೨ರಂದು ಪೊಲೀಸರು ಈಗ ಇವನನ್ನು ಬಂಧಿಸಿದ್ದಾರೆ. ಈಗ ಜೈಲಿನಲ್ಲಿದ್ದಾನೆ. ಇನ್ನು ಯಾವಾಗ ಹೊರಬರುತ್ತಾನೋ ಗೊತ್ತಿಲ್ಲ. ಬಂದ ಮೇಲೆ ಸುಮ್ಮನೆ ಉಳಿಯುವ ಜಾಯಮಾನವಂತೂ ಅವನದಲ್ಲ! ಹೊಸ ಟೀಮ್‌, ಹೊಸ ಟಾರ್ಗೆಟ್‌! ಹೇಗೂ ಮನೆಯಲ್ಲೇ ಮಕ್ಕಳು, ಅಳಿಯ, ಸೋದರ ಹೀಗೆ ಕಳ್ಳರ ಸಂಸಾರವೇ ಇದೆ!

ಇದನ್ನೂ ಓದಿ| Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!

Exit mobile version