Site icon Vistara News

Amit shah | ಇಂದಿನಿಂದ 3 ದಿನ ಅಮಿತ್ ಶಾ ರಾಜ್ಯ ಪ್ರವಾಸ, ಎಲ್ಲಿಗೆ ಭೇಟಿ, ಏನೇನು ಚರ್ಚೆ?

Amit Shah in karnataka

ಬೆಂಗಳೂರು: ಇಂದು ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮೂರು ದಿನ ರಾಜ್ಯದಲ್ಲಿ ಓಡಾಡಲಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಮುಂದಿನ ಚುನಾವಣೆಗೆ ಸಂಬಂಧಿಸಿ ಉತ್ತೇಜನ ನೀಡಲು ಆಗಮಿಸುತ್ತಿದ್ದಾರೆ.

ಗುಜರಾತ್ ಚುನಾವಣೆ ಬಳಿಕ ಕರ್ನಾಟಕ ಮುಂದಿನ ಟಾರ್ಗೆಟ್ ಆಗಿದ್ದು, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೊಳಿಸಲು ಪ್ಲಾನ್ ಹಾಕಿಕೊಳ್ಳಲಾಗಿದೆ. ವಿಜಯಿ ಸ್ಥಾನಗಳ ಸಂಖ್ಯೆ 150 ತಲುಪಬೇಕಿದ್ದರೆ ಹಳೆ ಮೈಸೂರು ಭಾಗದಲ್ಲಿ 30 ಸ್ಥಾನ ಗೆಲ್ಲಬೇಕಿದೆ. ಇಲ್ಲಿ ಬಲವಾಗಿರುವ ಜೆಡಿಎಸ್ಸನ್ನು ಮಣಿಸಲು, ಜೆಡಿಎಸ್‌ನ ಪಂಚರತ್ನ ಯಾತ್ರೆಗೆ ತಿರುಗೇಟು ಕೊಡಲು ಶಾ ತಂತ್ರ ಹೆಣೆಯುತ್ತಿದ್ದಾರೆ.

ಕಳೆದ ಬಾರಿ ಹಲವಾರು ಸಲ ಶಾ ಇಲ್ಲಿ ಭೇಟಿ ನೀಡಿದ್ದರು. ಬಿಜೆಪಿ 104 ಸ್ಥಾನ ಗೆದ್ದಿತ್ತು. ಯಡಿಯೂರಪ್ಪ ಸಿಎಂ ಎಂದು ಘೋಷಣೆ ಮಾಡಿದಾಗಲೂ ಕಾಂಗ್ರೆಸ್‌ 104 ಸ್ಥಾನ ಗೆದ್ದಿತ್ತು. ಹೀಗಾಗಿ ಈ ಬಾರಿ ಐದು ತಿಂಗಳ ಮೊದಲೇ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಶಾ ಮೊದಲ ಭೇಟಿಯಲ್ಲಿ ಪಕ್ಷದ ನಾಯಕರ ಜತೆ ಚರ್ಚೆ ನಡೆಸಿ ಇತರ ಪಕ್ಷಗಳಿಂದ ಬರಲು ಆಸಕ್ತಿ ಇರುವವರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಜನಾರ್ದನ ರೆಡ್ಡಿ ನೂತನ ಪಕ್ಷದಿಂದ ಆಗುವ ಸಾಧಕ ಬಾಧಕಗಳ ಬಗ್ಗೆ, ಚುನಾವಣಾ ತಂತ್ರಗಾರಿಕೆ ಬಗ್ಗೆ, ಪಕ್ಷ ಮತ್ತು ಸಂಘಟನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ. ನಾಯಕರ ಜತೆ ಜಿಲ್ಲಾವಾರು ಮಾಹಿತಿ ಪಡೆಯಲಿದ್ದಾರೆ.

ಇದನ್ನೂ ಓದಿ | Karnataka Election | ಆಪರೇಷನ್‌ಗೆ ಇಳಿಯಲಿದ್ದಾರೆ ಅಮಿತ್‌ ಶಾ; ಡಿಸೆಂಬರ್‌ 30ರಂದು ಯಾರ‍್ಯಾರು ಬರಲಿದ್ದಾರೆ ಪಕ್ಷಕ್ಕೆ?

ಮೂರು ದಿನಗಳ ಕಾಲ ಅಮಿತ್ ಶಾ ರಾಜ್ಯ ಪ್ರವಾಸದಲ್ಲಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವುದು, ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ ಎಂಬ ಸಂದೇಶ ರವಾನಿಸುವುದು ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಜತೆಗೆ ಹಿಂದುತ್ವ ಜಪ ಮಾಡಲಿದ್ದಾರೆ.

ಯಾವ ಹೊತ್ತಿಗೆ ಎಲ್ಲಿ?

ಡಿಸೆಂಬರ್ 29ರ ರಾತ್ರಿ 10 ಗಂಟೆಗೆ ಯಲಹಂಕ ವಾಯು ನೆಲೆಗೆ ಆಗಮಿಸಲಿರುವ ಅಮಿತ್ ಶಾ, ಡಿಸೆಂಬರ್ 30 ಬೆಳಗ್ಗೆ 10ರಿಂದ ಮಧ್ಯಾಹ್ನ 12.15ರವರೆಗೆ ನಾಯಕರ ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 1.35ಕ್ಕೆ ಮಂಡ್ಯಕ್ಕೆ ಭೇಟಿ ನೀಡಿ ಮಧ್ಯಾಹ್ನ 1.45ರಿಂದ 03.15ರವರೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3.30- 4.30 ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಿ, ಬಳಿಕ ಮಂಡ್ಯದಿಂದ ಸಂಜೆ 4.50 ಕ್ಕೆ ಹೊರಟು ಸಂಜೆ 5.20ಕ್ಕೆ ಯಲಹಂಕಕ್ಕೆ ವಾಪಸಾಗಲಿದ್ದಾರೆ. ಸಂಜೆ 5.45ರಿಂದ 6.45ರವರೆಗೆ ಅರಮನೆ ಮೈದಾನದಲ್ಲಿ ಸಹಕಾರ ವಲಯದ ಸಮ್ಮೇಳನದಲ್ಲಿ ಭಾಗಿಯಾಗಿ, ಅಂದು ರಾತ್ರಿ 8ರಿಂದ 9.30 ಗಂಟೆವರೆಗೆ ಪಕ್ಷದ ನಾಯಕರ ಜತೆ ಎಲೆಕ್ಷನ್ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಡಿಸೆಂಬರ್ 31 ಬೆಳಗ್ಗೆ 8.30- 9.30ರವರೆಗೆ ಪಕ್ಷದ ನಾಯಕರ ಜತೆ ತಿಂಡಿ, ಚರ್ಚೆ, ಬೆಳಗ್ಗೆ 10.55ಕ್ಕೆ ದೇವನಹಳ್ಳಿಯ ಆವತಿಯಲ್ಲಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 1 ಗಂಟೆಗೆ ಮಲ್ಲೇಶ್ವರಂ ಬಳಿ ಜರೋ ಸೌಹಾರ್ದ ಸಹಕಾರ ಮಂಡಳಿಯ ಕಾರ್ಯಕ್ರಮದಲ್ಲಿ ಭಾಗಿ, ಮಧ್ಯಾಹ್ನ 3ರಿಂದ 4.30ರವರೆಗೆ ಬಿಜೆಪಿ ಬೂತ್ ಅಧ್ಯಕ್ಷರು, ಬೂತ್ ಏಜೆಂಟರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಸಂಜೆ 7.05ಕ್ಕೆ ಯಲಹಂಕ ವಾಯುನೆಲೆಗೆ ಆಗಮಿಸಿ ಅಲ್ಲಿಂದ ದೆಹಲಿಗೆ ಮರಳಲಿದ್ದಾರೆ.

ಇದನ್ನೂ ಓದಿ | ಭಾರತ್​ ಜೋಡೋ ಯಾತ್ರೆ ದೆಹಲಿಗೆ ಕಾಲಿಟ್ಟಾಗಿನಿಂದಲೂ ರಾಹುಲ್​ ಗಾಂಧಿ ಭದ್ರತೆಯಲ್ಲಿ ವೈಫಲ್ಯ; ಅಮಿತ್​ ಶಾಗೆ ಕಾಂಗ್ರೆಸ್​ ಪತ್ರ

Exit mobile version