ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಿ.ವೈ.ವಿಜಯೇಂದ್ರ, ಅಶ್ವತ್ಥ್ ನಾರಾಯಣ್ ಭಾಗಿಯಾಗಿಲ್ಲ. ಸುಮ್ಮನೆ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಯಾರ ಪುತ್ರ, ಯಾರ ಪುತ್ರಿ ಎಂಬುದು ಬರುವುದಿಲ್ಲ, ಸುಖಾಸುಮ್ಮನೆ ಆರೋಪ ಮಾಡುವುದು ಬಿಟ್ಟು ಸಾಕ್ಷ್ಯ ಇದ್ದರೆ ಕೊಡಲಿ, ಯಾರೇ ತಪ್ಪಿತಸ್ಥರಿದ್ದರೂ ತನಿಖೆ ನಡೆಯುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಪಾರರ್ದರ್ಶಕವಾಗಿ ತನಿಖೆ ನಡೆಸಲಾಗಿದ್ದು, ಕಾನ್‌ಸ್ಟೇಬಲ್‌ನಿಂದ ಹಿಡಿದು ಎಡಿಜಿಪಿವರೆಗೂ ಬಂಧನವಾಗಿದೆ. ಆದರೂ ತನಿಖೆ ಬಗ್ಗೆ ಕಾಂಗ್ರೆಸ್‌ನವರೂ ಟೀಕಿಸುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಪ್ರಕರಣದ ತನಿಖೆ ನಡೆಸಲು ಸಿಐಡಿ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ಈವರೆಗೂ 25ಕ್ಕೂ ಹೆಚ್ಚು ಪೊಲೀಸರನ್ನು ಬಂಧಿಸಲಾಗಿದೆ. ಯಾವುದನ್ನೂ ಮುಚ್ಚಿಟ್ಟಿಲ್ಲ, ಹೀಗಾಗಿಯೇ ಕಾಂಗ್ರೆಸ್‌ಗೆ ಸಹಿಸಲು ಸಾಧ್ಯವಾಗುತ್ತಿಲ್ಲವೇ? ಕಾಂಗ್ರೆಸ್ ಮುಖಂಡರ ಪತ್ರಿಕಾಗೋಷ್ಠಿ ಗಮನಿಸಿದೆ, ಅವರು ಏನನ್ನು ಬಯಸಿದ್ದಾರೆ ಗೊತ್ತಿಲ್ಲ. ಪದೇಪದೆ ನನ್ನ ಹಾಗೂ ಸಿಎಂ ರಾಜೀನಾಮೆಯನ್ನು ಕೇಳುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿದ್ದವು. ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯಾಕೆ ಎಡಿಜಿಪಿಯನ್ನು ಬಂಧಿಸಲಿಲ್ಲ. ಇವರಿಗೆ ಧೈರ್ಯ ಇರಲಿಲ್ಲವಾ? ಕಾನ್‌ಸ್ಟೇಬಲ್ ಪರೀಕ್ಷೆ ಅಕ್ರಮದಲ್ಲಿ ಎಲ್ಲ ಮಾಹಿತಿ ಸಿಕ್ಕರೂ ಏನೂ ಮಾಡಲಿಲ್ಲ. 2014ರಲ್ಲಿ ಸೀಟ್ ಬ್ಲಾಕಿಂಗ್ ಪ್ರಕರಣ ನಡೆದಿದ್ದು ದೃಢವಾದರೂ ಯಾರನ್ನೂ ಬಂಧಿಸಲಿಲ್ಲ. ಆರೋಪಿಗಳು ಮೊದಲೇ ಜಾಮೀನು ತೆಗೆದುಕೊಳ್ಳುತ್ತಾರೆ, ಆನಂತರ ಕೇಸ್ ಖುಲಾಸೆ ಆಗುತ್ತಿತ್ತು. APPC ಕೇಸ್ ಏನಾಯಿತು? ಅಪರಾಧ ಸಾಬೀತಾದರೂ ಯಾರನ್ನೂ ಬಂಧನ ಮಾಡಲಿಲ್ಲ ಎಂದು ಕಿಡಿಕಾರಿದ ಅವರು, ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಆರೋಪಿಗಳ ವಿರುದ್ಧ ಕಲಬುರಗಿ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದರು.
ಪಿಎಸ್‌ಐ ಅಕ್ರಮದ ಬಗ್ಗೆ ಸಿಐಡಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಆರೋಪಕ್ಕೆ ಸಾಕ್ಷ್ಯಗಳಿದ್ದರೆ ಕೊಡಿ ಎಂದು ಕೇಳಿದ್ದರೂ ಅವರು ಸಾಕ್ಷ್ಯ ಕೊಡಲಿಲ್ಲ. ಇವರ ಕಾಲದಲ್ಲಿ ಹಗರಣ ಆಗಿದ್ದ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಕಾಲದಲ್ಲಿ ಪ್ರಕರಣ ಮುಚ್ಚಿ ಹಾಕುವ ಕೆಲಸ ಆಗಿಲ್ಲ. ಇಂದು ನನಗೆ ಸಮಾಧಾನ ಆಗಿದ್ದು, ಸಿಐಡಿ ಉತ್ತಮವಾಗಿ ಕೆಲಸ ಮಾಡಿದೆ, ಇನ್ನೂ ತನಿಖೆ ನಡೆಯುತ್ತಿದೆ ಎಂದು ಪ್ರಶಂಸಿದ ಗೃಹ ಸಚಿವರು, ನ್ಯಾಯಮೂರ್ತಿಗೆ ಬೆದರಿಕೆ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಮಾಹಿತಿ ಪಡೆಯುತ್ತೇನೆ. ಯಾರಾದರೂ ಆ ರೀತಿ ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ನ್ಯಾಯಾಧೀಶರು ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | ಐಪಿಎಸ್-ಐಎಎಸ್ ಬಂಧನ; ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದ ಐಜಿಪಿ ಡಿ. ರೂಪ ಮೌದ್ಗಿಲ್