ಚಿಕ್ಕೋಡಿ: ಆಸ್ತಿ ವಿವರ ಸಲ್ಲಿಸಲು ನನಗೆ ಸಮಯ ಸಿಕ್ಕಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ನಿಯಮಾವಳಿ ಪ್ರಕಾರ ಜೂನ್ ೩೦ರೊಳಗೆ ಲೋಕಾಯುಕ್ತಕ್ಕೆ ಸಲ್ಲಿಸಬೇಕಿತ್ತು. ಆಸ್ತಿ ಸಲ್ಲಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಗೃಹ ಸಚಿವರಿಂದ “ತಮಗೆ ಬಿಡುವಿಲ್ಲ” ಎಂಬ ಉತ್ತರ ಲಭ್ಯವಾಗಿದೆ.
ಬೆಳಗಾವಿಯ ನಿಪ್ಪಾಣಿಯಲ್ಲಿ ಗುರುವಾರ ನೂತನ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರು, ನನಗೆ ಈಗ ಬಿಡುವಿಲ್ಲ. ಹೀಗಾಗಿ ನಾನು ಆಸ್ತಿ ಪತ್ರವನ್ನು ಸಲ್ಲಿಸಲು ಆಗಿಲ್ಲ. ಮುಂದಿನ ದಿನಗಳಲ್ಲಿ ಆಸ್ತಿ ಪ್ರಮಾಣ ಪತ್ರವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.
ಗೃಹ ಸಚಿವರ ಹೇಳಿಕೆಗೆ ಟೀಕೆ
ನಿಯಮ-ಕಾನೂನನ್ನು ಸರಿಯಾಗಿ ಪಾಲಿಸಿ ಎಲ್ಲರಿಗೂ ಮಾದರಿಯಾಗಿರಬೇಕಿರುವ ಜನಪ್ರತಿನಿಧಗಳೇ ಅವುಗಳನ್ನು ಮುರಿಯುತ್ತಿದ್ದಾರೆ. ಅಕ್ರಮ ಆಸ್ತಿಗಳಿಕೆಯಂತಹ ಆರೋಪಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಆಸ್ತಿಗಳ ಬಗ್ಗೆ ಘೋಷಣೆಯನ್ನು ಮಾಡಿಕೊಳ್ಳಬೇಕೆಂಬ ಮಾತುಗಳು ಕೇಳಿಬರುತ್ತಿವೆ.
ಆಸ್ತಿ ಸಲ್ಲಿಕೆ ಮಾಡದ ಪ್ರಮುಖರು ಯಾರು?
ವಿಧಾನಸಭೆ ಮತ್ತು ವಿಧಾನ ಪರಿಷತ್ ಸಂಖ್ಯಾಬಲದಲ್ಲಿನ ಅರ್ಧದಷ್ಟು ಅಂದರೆ ಶೇ. ೫೦ಕ್ಕಿಂತಲೂ ಹೆಚ್ಚು ಶಾಸಕರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ಆಸ್ತಿ ವಿವರ ಸಲ್ಲಿಕೆಗೆ ಜೂನ್ ೩೦ ಕೊನೇ ದಿನವಾಗಿತ್ತು. ಇದಾದ ಬಳಿಕ ಜುಲೈ ಮೊದಲ ವಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್, ಎನ್. ರವಿಕುಮಾರ್, ಬಿ.ಜಿ. ಪಾಟೀಲ್ ಸೇರಿ 16 ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರ ಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಇನ್ನಿತರರು ಆಸ್ತಿ ಪತ್ರವನ್ನು ಇನ್ನೂ ಸಲ್ಲಿಸಿಲ್ಲ.
ಯಾರು ಯಾರು ಸಲ್ಲಿಸಿಲ್ಲ..?
ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ, ಜೆಡಿಎಸ್ ನಾಯಕ
ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಆರಗ ಜ್ಞಾನೇಂದ್ರ, ಗೃಹ ಸಚಿವ
ಬಿ.ಸಿ.ಪಾಟೀಲ್, ಕೃಷಿ ಸಚಿವ
ಕೆ.ಗೋಪಾಲಯ್ಯ, ಅಬಕಾರಿ ಸಚಿವ
ಮುನಿರತ್ನ, ತೋಟಗಾರಿಕೆ ಸಚಿವ
ಕೆ.ಸಿ.ನಾರಾಯಣ ಗೌಡ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ
ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ
ಶ್ರೀರಾಮುಲು, ಸಾರಿಗೆ ಸಚಿವ
ಹಾಲಪ್ಪ ಆಚಾರ್, ಗಣಿ ಮತ್ತು ಭೂವಿಜ್ಞಾನ ಸಚಿವ
ಎಸ್.ಅಂಗಾರ, ಮೀನುಗಾರಿಕೆ ಸಚಿವ
ಎಂ.ಟಿ.ಬಿ.ನಾಗರಾಜ್, ಪೌರಾಡಳಿತ ಸಚಿವ
ಇದನ್ನು ಓದಿ: ಪಿಎಸ್ಐ ನೇಮಕ ಅಕ್ರಮ ಪ್ರಕರಣ; ಸಿಐಡಿ ತನಿಖೆ ವೈಖರಿಗೆ ಹೈಕೋರ್ಟ್ ಅಸಮಾಧಾನ