ಕಾರವಾರ: ಶಾಲೆಯ ಕಟ್ಟಡದ ಮೇಲಿನ ಜೇನು ಗೂಡುಗಳಲ್ಲಿರುವ ಜೇನುಹುಳುಗಳು ಕಡಿದು ಐದಾರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಪಟ್ಟಣದ ಶಾಲೆಯೊಂದರ ಕಟ್ಟಡದ ಮೇಲ್ಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಜೇನುಗೂಡುಗಳು ಕಟ್ಟಿವೆ. ಈ ಕಾನ್ವೆಂಟ್‌ನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಾಥಮಿಕ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ.
ಮಂಗಳವಾರ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಹಾಗೂ ಓರ್ವ ಕಾಲೇಜು ವಿದ್ಯಾರ್ಥಿ ಸೇರಿ ಐವರ ಮೇಲೆ ಜೇನುಗಳು ದಾಳಿ ಮಾಡಿವೆ. ಗಾಯಗೊಂಡ ವಿದ್ಯಾರ್ಥಿಗಳ ಚೀರಾಟ ಕೇಳಿದ ಬಳಿಕ ಎಚ್ಚೆತ್ತ ಶಿಕ್ಷಕರು ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಶಾಲೆಯ ಕಟ್ಟಡದ ಮೇಲ್ಭಾಗದಲ್ಲಿ ಜೇನುಗೂಡುಗಳು ಇರುವುದನ್ನು ಕಂಡ ಸ್ಥಳೀಯರು ಸಾಕಷ್ಟು ಬಾರಿ ಅವುಗಳನ್ನು ತೆಗೆಸುವಂತೆ ಶಾಲೆಯ ಮುಖ್ಯಸ್ಥರಿಗೆ ಹೇಳಿದ್ದರು. ಆದರೆ ಜೇನು ಹುಳುಗಳಿಂದ ಅಪಾಯವಾಗದು ಎಂದೇ ಅಡಳಿತ ಮಂಡಳಿ ಭಾವಿಸಿತ್ತು. ಶಾಲಾ ಅವಧಿಯಲ್ಲಿ ಆಟ, ಪಾಠದಲ್ಲಿ ನಿರತರಾದ ಮಕ್ಕಳಿಗೆ ಈ ಜೇನು ಹುಳುಗಳು ಕಡಿಯುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಇದು ಪಾಲಕರ ಆತಂಕಕ್ಕೂ ಸಹ ಕಾರಣವಾಗಿದ್ದು ಜೇನುಗೂಡುಗಳನ್ನು ಯಾರಿಗೂ ಅಪಾಯವಾಗದ ರೀತಿ ತೆರವುಗೊಳಿಸುವತ್ತ ಶಾಲಾ ಆಡಳಿತ ಮಂಡಳಿ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.