ಬಾಗಲಕೋಟೆ: ಇಲ್ಲಿನ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಗೆ ಹನಿಟ್ರ್ಯಾಪ್ (Honey Trap Case) ಮಾಡಲು ಯತ್ನಿಸುತ್ತಿರುವ ಪ್ರಕರಣ ನಡೆದಿದೆ.
ಗ್ರಾಪಂ ಸದಸ್ಯ ಅನಿಲ ದಳವಾಯಿ ಹನಿಟ್ರ್ಯಾಪ್‌ಗೆ ಒಳಗಾದ ವ್ಯಕ್ತಿ. ಅನಿಲ ದಳವಾಯಿ ಅವರನ್ನು ಮೊದಲು ಅಪಹರಣ ಮಾಡಿ ಎಂಟು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ವಂಚಕರು ಬಳಿಕ ಒಂದು ಲಕ್ಷಕ್ಕೆ ಒಪ್ಪಿದ್ದರು ಎಂದು ಹೇಳಲಾಗಿದೆ.
ಅನಿಲ್ ದಳವಾಯಿ ಅವರು ಕಳೆದ ಶನಿವಾರ ಐಡಿಎಫ್‌ಸಿ ಬ್ಯಾಂಕ್‌ಗೆ ತೆರಳಿದ್ದರು. ಈ ವೇಳೆ ಶ್ರೀದೇವಿ ಎಂಬ ಮಹಿಳೆಯೊಬ್ಬರು ಕಾಲ್ ಮಾಡಿ ಕುಲ್ಹಳ್ಳಿ ಗುಡ್ಡದ ಬಸ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದರು. ಮಹಿಳೆ ಜತೆ ನಿಂತಾಗ, ಏಕಾಏಕಿ ಬೈಕ್ ಮೇಲೆ ಬಂದ ನಾಲ್ವರು ಅನಿಲ್ ಅವರನ್ನು ಕೂರಿಸಿಕೊಂಡು ಅಪಹರಣ ಮಾಡಿದ್ದರು.
ಬಳಿಕ ನಿನ್ನ ಬಗ್ಗೆ ಯುಟ್ಯೂಬ್ ಚಾನಲ್‌ನಲ್ಲಿ ಸುದ್ದಿ ಹಾಕುತ್ತೇವೆ. ಮಾನ-ಮರ್ಯಾದೆ ಹರಾಜು ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಇನ್ನೂ ಹೆಚ್ಚಿನ ಹಣ ವಸೂಲಿಗೆ ಇಳಿದಿದ್ದರು. ರವಿ ದೊಡ್ಡಮನಿ ಯುಟ್ಯೂಬ್ ಚಾನಲ್ ಮೂಲಕ ಪತ್ರಕರ್ತ ಎಂದು ವಂಚನೆಗೆ ಇಳಿದಿದ್ದ ಎಂದು ತಿಳಿದು ಬಂದಿದೆ. ಅನಿಲ್ ದಳವಾಯಿ ಅವರ ಅಂಗಿ ಹರೆದು, ಚಾಕು ತೋರಿಸಿ ದುಡ್ಡು ಕೊಡುವಂತೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಗ್ರಾಮಸ್ಥರಿಂದ ತರಾಟೆ
ಅನಿಲ ದಳವಾಯಿ ಅವರನ್ನು ಜಮಖಂಡಿಯಿಂದ ಮೊದಲು ರಾಮೇಶ್ವರ ಗುಡ್ಡಕ್ಕೆ ಕರೆದೊಯ್ದು ಬಳಿಕ ಕುಲ್ಹಳ್ಳಿ ಗುಡ್ಡಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದರು. ಆದರೆ, ಇದೇ ವೇಳೆ ಈ ಅಪಹರಣ ಸುದ್ದಿ ಗ್ರಾಮದಲ್ಲಿ ಹರಡಿದ್ದು, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟರೂ ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಆರೋಪಿಗಳಾದ ರವಿ ದೊಡ್ಡಮನಿ, ಹನುಮಂತ ಭಜಂತ್ರಿ, ನರಸಪ್ಪ ಗಡೇಕಲ್ ಎಂಬ ವ್ಯಕ್ತಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡು ಥಳಿಸಿದ್ದಾರೆ. ಈ ಎಲ್ಲ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಹುನ್ನೂರು ಗ್ರಾಮಸ್ಥರು ಮೂವರು ವಂಚಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ದೂರು ದಾಖಲಾಗಿಲ್ಲ. ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿದ್ದ ಮಹಿಳೆ ಹಾಗೂ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Honeytrap Case | ಡ್ರಾಪ್ ಕೊಡುವ ನೆಪದಲ್ಲಿ ಕಿಡ್ನಾಪ್: ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಚಿನ್ನದ ವ್ಯಾಪಾರಿ