ಬೆಂಗಳೂರು: ಹುಕ್ಕಾ ಬಾರ್‌ನಿಂದ (Hookah Bar) ಚಿಕ್ಕ ಮಕ್ಕಳ ಮೇಲೆ ಬಹಳವೇ ಪರಿಣಾಮ ಆಗುತ್ತಿದೆ. ಇದು ತಂಬಾಕು ಸೇವನೆಯ (Tobacco consumption) ಭಾಗವಾಗಿದೆ. ಹುಕ್ಕಾ ಬಾರ್‌ಗೆ ಅವಕಾಶ ಕೊಡಬಾರದು ಅಂತ ಚಿಂತನೆ ಮಾಡಿದ್ದೇವೆ. ಅದಕ್ಕೆ ಕಾನೂನು ತರಲು ಸಭೆಯಲ್ಲಿ ಚರ್ಚೆ ಆಗಿದೆ. ಹುಕ್ಕಾಬಾರ್ ನಿಯಂತ್ರಣ (Hookahbar Control) ಮಾಡಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ನಾವು ಕಂಟ್ರೋಲ್ ಮಾಡಲು ಮುಂದಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಹೇಳಿದರು.
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಮಾಡುವ ಸಂಬಂಧ ಆರೋಗ್ಯ ಇಲಾಖೆ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ನಾಗೇಂದ್ರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಸಭೆ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಈ ವಿಚಾರವನ್ನು ತಿಳಿಸಿದರು.
ಇದನ್ನೂ ಓದಿ: Cauvery water dispute : ತಮಿಳುನಾಡಿಗೆ ನೀರು ಬಿಡಬೇಡಿ, ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿ: ಬಿಎಸ್ ಯಡಿಯೂರಪ್ಪ
ಈಗ ಹುಕ್ಕಾ ಬಾರ್ ಅನ್ನು ಕಾನೂನು ವ್ಯಾಪ್ತಿಯಲ್ಲಿ ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ತಂಬಾಕು ನಿಷೇಧ ವಲಯವನ್ನು (No Tobacco Zone) ವಿಸ್ತರಣೆ ಮಾಡಲು ಮುಂದಾಗಿದ್ದೇವೆ. ದೇವಸ್ಥಾನ, ಚರ್ಚ್, ಮಸೀದಿ, ಆಸ್ಪತ್ರೆ ಸುತ್ತ ತಂಬಾಕು ವಸ್ತು ಮಾರಾಟಕ್ಕೆ ನಿಷೇಧ ಮಾಡಲು ತಿರ್ಮಾನ ಮಾಡುತ್ತಿದ್ದೇವೆ. ತಂಬಾಕು ಉತ್ಪನ್ನಗಳನ್ನು ಈಗ 18 ವರ್ಷ ಮೇಲ್ಪಟ್ಟವರು ಖರೀದಿ ಮಾಡಲು ಅವಕಾಶ ಇದೆ. ಅದನ್ನು 21 ವರ್ಷಕ್ಕೆ ಏರಿಕೆ ಮಾಡಲು ಚಿಂತನೆ ಮಾಡಿದ್ದೇವೆ. ನಾವು ಇದಕ್ಕಾಗಿ ಕಾನೂನು ಮಾಡಬೇಕಾಗುತ್ತದೆ. ಬೇರೆ ಬೇರೆ ಇಲಾಖೆಯ ಸಹಭಾಗಿತ್ವದಲ್ಲಿ ಇದನ್ನು ಮಾಡಬೇಕಾಗುತ್ತದೆ. ಹಾಗಾಗಿಯೇ ವಿಧೇಯಕ ತರಬೇಕಾಗುತ್ತದೆ. ತಂಬಾಕು ಸೇವನೆ ದುಷ್ಪರಿಣಾಮಗಳ (Effects of tobacco consumption) ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಿಲ್ ತರುತ್ತೇವೆ: ಗುಂಡೂರಾವ್
ಹುಕ್ಕಾಬಾರ್ ನಿಷೇಧಕ್ಕೆ ಯಾರ ವಿರೋಧ ಇರುವುದಿಲ್ಲ. ಆದರೆ, ಕೆಲವರು ಕೋರ್ಟ್‌ಗೆ ಹೋಗುತ್ತಾರೆ. ಅದಕ್ಕೆ ಬಿಲ್ ತರಬೇಕಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದರು.
ಹುಕ್ಕಾಬಾರ್ ನಿಷೇಧಕ್ಕೆ ತೀರ್ಮಾನ: ನಾಗೇಂದ್ರ
ಯುವಜನ ಸಬಲೀಕರಣ ಸಚಿವ ನಾಗೇಂದ್ರ ಮಾತನಾಡಿ, ಇಂದಿನ ಸಭೆಯಲ್ಲಿ ಹುಕ್ಕಾ ಬಾರ್ ನಿಷೇಧ ಮಾಡಲು ತೀರ್ಮಾನ ಮಾಡಿದ್ದೇವೆ. ಇದನ್ನು ಕಾನೂನು ಮೂಲಕವೇ ಮಾಡುತ್ತೇವೆ. ಯುವಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮಾಡುತ್ತಿದ್ದೇವೆ. ನಮ್ಮ ನಿರ್ಧಾರದ ಪರಿಣಾಮ ಮುಂದೆ ಎಲ್ಲರಿಗೂ ಆಗಲಿದೆ. ಸದುದ್ದೇಶ ಇಟ್ಟುಕೊಂಡು ಹುಕ್ಕಾಬಾರ್ ನಿಷೇಧ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.