Site icon Vistara News

Horrible | ಕಲಬುರಗಿಯಲ್ಲಿ ನರಭಕ್ಷಕ ನಾಯಿಗಳ ಕ್ರೌರ್ಯ, ಮಲಗಿದ್ದ ವೃದ್ಧೆಯನ್ನು ಹರಿದು ತಿಂದ ರಾಕ್ಷಸ ಶ್ವಾನಗಳು

street dogs

ಕಲಬುರಗಿ: ನಾವ್ಯಾರು ನಂಬಲಿಕ್ಕೇ ಸಾಧ್ಯವಾಗದ ಮನಕಲಕುವ ಘಟನೆಯೊಂದು ಕಲಬುರಗಿಯಲ್ಲಿ ಸಂಭವಿಸಿದೆ. ನಾವೆಲ್ಲ ಮನುಷ್ಯ ಸ್ನೇಹಿ, ಪರಮ ನಿಷ್ಠ ಸೇವಕ ಎಂದೆಲ್ಲ ಹೊಗಳುವ ನಾಯಿಗಳು ನರಭಕ್ಷಕರಾಗಿ ಪರಿವರ್ತನೆಗೊಂಡು ಜೀವಂತವಾಗಿದ್ದ ಅಜ್ಜಿಯೊಬ್ಬಳನ್ನು ಹರಿದು ಹರಿದು ಮುಕ್ಕಿದ ಭಯಾನಕ ಘಟನೆ ಇದು. ಇಲ್ಲಿ ನೋವಿನಿಂದ ನರಳುತ್ತಾ ಬೀದಿ ಬದಿಯಲ್ಲಿ ಮಲಗಿದ್ದ ವೃದ್ಧೆಯೊಬ್ಬರನ್ನು ಈ ನಾಯಿಗಳು ಕಚ್ಚಿಯೇ ಸಾಯಿಸಿವೆ ಮಾತ್ರವಲ್ಲ, ದೇಹದ ಮಾಂಸವನ್ನು ಕಿತ್ತು ಕಿತ್ತು ತಿಂದಿವೆ.

ಇಂಥಹುದೊಂದು ಭಯ ಹುಟ್ಟಿಸುವ ಘಟನೆ ನಡೆದಿರುವುದು ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ದೇವಲಗಾಣಗಾಪುರದಲ್ಲಿ. ಶನಿವಾರ ರಾತ್ರಿ ಈ ಕ್ರೌರ್ಯ ನಡೆದಿದೆ.

ಈ ಅಜ್ಜಿ ಎಲ್ಲಿಯವರು ಎನ್ನುವುದು ಸ್ಪಷ್ಟವಿಲ್ಲ. ನೋಡಿದರೆ ಮನೆಯಿಂದ ಹೊರಹಾಕಲ್ಪಟ್ಟು, ಅಥವಾ ಯಾವುದೋ ಕಾರಣಕ್ಕೆ ಮನೆಬಿಟ್ಟು ಬಂದು ಬೀದಿಪಾಲಾದ ಒಬ್ಬ ನತದೃಷ್ಟ ಹೆಣ್ಣಿನಂತೆ ಮೇಲ್ನೋಟಕ್ಕೆ ಕಾಣಿಸುತ್ತಾರೆ.

ಮೂರ್ನಾಲ್ಕು ದಿನದ ಹಿಂದೆ ಈಕೆ ಒಂದು ಟಂಟಂ ಗೂಡ್ಸ್‌ ವಾಹನ ಡಿಕ್ಕಿ ಹೊಡೆದಿತ್ತು ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ವೃದ್ಧೆಯ ಕಾಲಿಗೆ ತೀವ್ರ ಗಾಯಗಳಾಗಿವೆ. ಚಾಲಕ ಆಕೆಯನ್ನು ಆಸ್ಪತ್ರೆಯಲ್ಲಿ ತೋರಿಸಿದ್ದ. ಅಲ್ಲಿ ಕಾಲಿಗಾದ ಗಾಯಕ್ಕೆ ಬ್ಯಾಂಡೇಜ್‌ ಹಾಕಿ ಬಿಟ್ಟಿದ್ದರು. ಬಳಿಕ ಚಾಲಕ ಆಕೆಯನ್ನು ದೇವಲಗಾಣಗಾಪುರದ ಗಾಂಧಿ ನಗರದ ರಸ್ತೆ ಪಕ್ಕದಲ್ಲಿ ಹಾಕಿ ಹೋಗಿದ್ದ.

ಮಹಿಳೆ ಅತ್ತಿತ್ತ ಹೆಜ್ಜೆ ಇಡಲೂ ಸಾಧ್ಯವಾಗದೆ ಅಲ್ಲೇ ಮಲಗಿಕೊಂಡಿದ್ದರು ಎನ್ನಲಾಗಿದೆ. ಮೂರ್ನಾಲ್ಕು ದಿನಗಳಿಂದ ವಸ್ತುಶಃ ಜೀವಚ್ಛವದಂತೆ ಆಕೆ ಬಿದ್ದುಕೊಂಡಿದ್ದಳು. ಈ ನಡುವೆ ಶನಿವಾರ ರಾತ್ರಿ ಆಕೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ.

ಈ ನಾಯಿಗಳ ದಾಳಿ ಎಷ್ಟು ಆಕ್ರಮಣಕಾರಿಯಾಗಿತ್ತು ಎಂದರೆ ನಾಯಿಗಳು ಆಕೆಯ ದೇಹದ ಮಾಂಸವನ್ನು ಕಿತ್ತು ಕಿತ್ತು ತಿಂದಂತೆ ಕಾಣುತ್ತಿದೆ. ಆಕೆಯ ತೊಡೆಯ ಭಾಗ, ಕಾಲಿನ ಭಾಗದಲ್ಲಿ ಮಾಂಸವೇ ಇಲ್ಲ, ಕೇವಲ ಒಳಗಿನ ಅಸ್ಥಿಪಂಜರ ಕಾಣಿಸುತ್ತಿದೆ. ಮುಖದಲ್ಲಂತೂ ಕಣ್ಣೂ ಸೇರಿದಂತೆ ಏನೂ ಇಲ್ಲ. ಎಲ್ಲವೂ ಕಿತ್ತು ಹಾಕಲ್ಪಟ್ಟಿವೆ. ಒಂದಲ್ಲ ಎರಡಲ್ಲ ಹಲವು ನಾಯಿಗಳು, ನಾಯಿ ಮರಿಗಳು ಆಕೆಯ ಸುತ್ತ ಓಡಾಡುತ್ತಿದ್ದವು.

ನಡುಬೀದಿಗೆ ಎಳೆದುತಂದು ನಿರಾಳವಾಗಿ ಮಾಂಸಕ್ಕೆ ಬಾಯಿ ಹಾಕುತ್ತಿದ್ದ ಈ ಭಯಾನಕ ದೃಶ್ಯವನ್ನು ನೋಡಿ ಕೆಲವರು ಸುಮ್ಮನಾದರೆ ಕೆಲವರು ನಾಯಿಗಳನ್ನು ಓಡಿಸಿದರು. ಅಂತಿಮವಾಗಿ ದೇವಲಗಾಣಗಾಪುರ ಗ್ರಾಮಸ್ಥರು ಹಾಗೂ ಪೊಲೀಸರು ವೃದ್ಧೆಯ ಅಂತ್ಯ ಸಂಸ್ಕಾರ ನಡೆಸಿದರು.

ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವೃದ್ದೆ ಹೆಸರು ಯಾವ ಊರು ಎಂದು ತಿಳಿದು ಬಂದಿಲ್ಲ.

ಸಾಮಾನ್ಯವಾಗಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವಾದರೂ ಜೀವಂತವಾಗಿರುವಾಗ ಮಾಂಸ ತಿನ್ನುವ ಕ್ರೌರ್ಯ ತೋರುವುದಿಲ್ಲ. ಕೆಲವೊಮ್ಮೆ ಮೃತಪಟ್ಟವರನ್ನು ದಫನ ಮಾಡಿದ ಜಾಗವನ್ನು ಅಗೆದು ಮಾಂಸ ತಿನ್ನುವುದೂ ಇದೆ. ಹೀಗೆ ಮನುಷ್ಯರ ಮಾಂಸ ತಿಂದರೆ ಹುಚ್ಚು ಹಿಡಿಯುತ್ತದೆ ಎಂಬ ಮಾತು ಜನಜನಿತವಾಗಿದೆ. ಆದರೆ, ಇಲ್ಲಿನ ನಾಯಗಳು ಮಾತ್ರ ಹುಚ್ಚು ಹಿಡಿದೇ ಈ ಪರಿಯ ಕ್ರೌರ್ಯವನ್ನು ಮೆರೆದಂತೆ ಕಾಣುತ್ತಿದೆ.

Exit mobile version