ತುಮಕೂರು: ಗರ್ಭಿಣಿ ಸಾವಿಗೂ ತಮಗೂ ಯಾವುದೇ ಸಂಬಂಧವಿಲ್ಲ. ನಾನು ಆಕೆಗೆ ಚಿಕಿತ್ಸೆ ಕೊಡಲು ಸಿದ್ಧವಿದ್ದೆ. ಆದರೆ, ಆಕೆಯೇ ವೈಯಕ್ತಿಕ ಕಾರಣ ನೀಡಿ ನಿರಾಕರಿಸಿ ಹೋಗಿದ್ದಳು. ಅಲ್ಲದೆ, ಆಕೆಯನ್ನು ಬಲವಂತವಾಗಿ ಕರೆತರಲಾಗಿತ್ತು. ಈ ಎಲ್ಲ ಅಂಶಗಳನ್ನು ನಾನು ಉಲ್ಲೇಖ ಮಾಡಿದ್ದರೂ ಏಕಪಕ್ಷೀಯ ನಿರ್ಧಾರ ಕೈಗೊಂಡು ನನ್ನನ್ನು ಅಮಾನತು ಮಾಡಲಾಗಿದೆ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಅಮಾನತುಗೊಂಡಿರುವ ತುಮಕೂರು ಜಿಲ್ಲಾಸ್ಪತ್ರೆಯ ಪ್ರಸೂತಿ ವೈದ್ಯೆ ಉಷಾ (Hospital Negligence) ರಾಜ್ಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.
ಇದೇ ನವೆಂಬರ್ ೨ರಂದು ಆಸ್ಪತ್ರೆಗೆ ಬಂದಿದ್ದ ತುಂಬು ಗರ್ಭಿಣಿಗೆ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲವೆಂದು ಆಸ್ಪತ್ರೆ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆ ಮನೆಗೆ ವಾಪಸ್ ಹೋಗಿದ್ದು, ಅಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟಿದ್ದರು. ಮೂವರ ಸಾವಿಗೆ ಅಂದು ಕರ್ತವ್ಯದಲ್ಲಿದ್ದ ವೈದ್ಯೆ ಹಾಗೂ ನರ್ಸ್‌ಗಳೇ ಕಾರಣ ಎಂಬ ಆರೋಪ ಕೇಳಿಬಂದಿದ್ದ ಕಾರಣ ಅವರನ್ನು ಅಮಾನತು ಮಾಡಲಾಗಿತ್ತು. ಈ ಸಂಬಂಧ ರಾಜ್ಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆದು ತಮ್ಮ ತಪ್ಪಿಲ್ಲದಿದ್ದರೂ ಕ್ರಮ ಕೈಗೊಳ್ಳಲಾಗಿದೆ ಎಂದು ಅಂದು ನಡೆದಿದ್ದ ಇಡೀ ವೃತ್ತಾಂತವನ್ನು ವಿವರಿಸಿದ್ದಾರೆ.
ಪತ್ರದ ಸಾರಾಂಶ
ನಾನು ಕಳೆದ ಒಂದು ವರ್ಷದಿಂದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಗರ್ಭಿಣಿ ಸಾವು ಪ್ರಕರಣದಲ್ಲಿ ಏಕಪಕ್ಷೀಯವಾಗಿ ನನ್ನನ್ನು ಅಮಾನತು ಮಾಡಲಾಗಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಒಪಿಡಿಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೆ. ಬಳಿಕ 5.30ರಿಂದ 9.30ರವರೆಗೂ ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಶಸ್ತ್ರಚಿಕಿತ್ಸೆ ಮುಗಿಸಿ ಕೊಠಡಿಯತ್ತ ಹೋಗುತ್ತಿದ್ದ ವೇಳೆ ಗರ್ಭಿಣಿ ಕಸ್ತೂರಿ ಎದುರಿಗೆ ಸಿಕ್ಕಿದ್ದಾರೆ. ಅವರಿಗೆ ಚಿಕಿತ್ಸೆ ಪಡೆಯಲೂ ಹೇಳಿದ್ದೆ.
ಇದನ್ನೂ ಓದಿ | Suicide Case | ಶಿವಮೊಗ್ಗದಲ್ಲಿ ನವವಿವಾಹಿತೆ ನೇಣಿಗೆ ಶರಣು; ಕೌಟುಂಬಿಕ ಕಲಹ ಕಾರಣವೇ?
ನಂತರ ಕಸ್ತೂರಿ ಅವರು ಆಸ್ಪತ್ರೆಯಿಂದ ವಾಪಸ್ ಹೋಗುತ್ತಿರುವುದು ಕಂಡು ಏಕೆ ಹೋಗುತ್ತಿದ್ದಾರೆ ಎಂದೂ ಸ್ಟಾಫ್ ನರ್ಸ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಬಳಿ ಕಸ್ತೂರಿ ಬಗ್ಗೆ ವಿಚಾರಿಸಿದ್ದೆ. ಅವರು ವೈಯಕ್ತಿಕ ಕಾರಣ ನೀಡಿ ಚಿಕಿತ್ಸೆ ನಿರಾಕರಿಸುತ್ತಿದ್ದಾರೆ ಎಂದು ನರ್ಸ್‌ಗಳು ತಿಳಿಸಿದ್ದರು. ಆಗ ನಾನೇ ಕಸ್ತೂರಿ ಅವರನ್ನು ಚಿಕಿತ್ಸೆ ಪಡೆಯಲು ತಿಳಿಸಿದೆ. ಇಷ್ಟಾದರೂ ಮಾತು ಕೇಳದ ಅವರು ವಾಪಸ್ ಹೋದರು. ಇನ್ನು ಕಸ್ತೂರಿ ಅವರ ಪಕ್ಕದ ಮನೆಯ ಸರೋಜಮ್ಮ ಎಂಬುವವರು ಬಲವಂತವಾಗಿ ಕಸ್ತೂರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂಬುದೂ ಆ ವೇಳೆ ತಿಳಿದುಬಂದಿತ್ತು.
ಈ ಎಲ್ಲ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ್ದೆ. ಕಸ್ತೂರಿಯನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿತ್ತು ಎಂದು ಸಚಿವರಿಗೆ ಎಎಸ್ಐ ಮಾಹಿತಿ ನೀಡಿದ್ದರು. ಸಚಿವರು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ವೀಕ್ಷಿಸಿದ್ದಾರೆ. ಆದರೂ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಆಯುಕ್ತರು ಹಾಗೂ ಸಚಿವರು ನಮ್ಮನ್ನು ಅಮಾನತುಗೊಳಿಸಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಉಷಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Suicide Case | ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ