ಕೊಪ್ಪಳ: ನಗರದ ಗಡಿಯಾರ ಕಂಬ ಸರ್ಕಲ್ ಬಳಿ ಇರುವ ಹೋಟೆಲ್ ಮತ್ತು ಟೀ ಪಾಯಿಂಟ್ ಬೆಂಕಿಗಾಹುತಿಯಾಗಿದೆ. ಹೋಟೆಲ್‌ನ ಎದುರು ನಿಲ್ಲಿಸಿದ್ದ ಬೈಕ್ ಸುಟ್ಟು ಭಸ್ಮವಾಗಿದೆ. ಹೋಟೆಲ್‌ನ ಮೇಲ್ಭಾಗದ ಮನೆಯಲ್ಲಿದ್ದವರನ್ನು ರಕ್ಷಿಸಲಾಗಿದೆ.
ಬುಧವಾರ ಮುಂಜಾನೆ ಈ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಇಡೀ ಹೋಟೆಲ್ ಸುಟ್ಟು ಕರಕಲಾಗಿದೆ. ಹೋಟೆಲ್‌ನಲ್ಲಿದ್ದ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಲಾಗಿದೆ.
ರಾತ್ರಿ ಹೋಟೆಲ್ ಬಂದ್ ಮಾಡುವ ವೇಳೆ ಸಿಲಿಂಡರ್‌ನ್ನು ಸರಿಯಾಗಿ ಆಫ್ ಮಾಡದೆ ಹೋದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಹೋಟೆಲ್‌ನ ತುಂಬಾ ಅನಿಲ ತುಂಬಿಕೊಂಡಿತ್ತು ಎನ್ನಲಾಗಿದೆ. ಹೀಗಾಗಿ ಬೆಳಗ್ಗೆ ಬೆಂಕಿ ಹಚ್ಚುವಾಗ ಇಡೀ ಹೋಟೆಲ್‌ಗೆ ಒಮ್ಮೆಲೇ ಬೆಂಕಿ ಆವರಿಸಿತು ಎಂದು ಹೇಳಲಾಗಿದೆ.
ಬೆಂಕಿ ದುರ್ಘಟನೆಯ ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ದಳ ಸಿಬ್ಬಂದಿ ವಾಹನದೊಂದಿಗೆ ಬಂದು ನೀರು ಹರಿಸಿದರು. ತುಂಬ ಹೊತ್ತಿನ ಬಳಿಕ ಬೆಂಕಿ ತಹಬದಿಗೆ ಬಂದಿದೆ. ಆದರೆ, ಅಷ್ಟು ಹೊತ್ತಿಗೆ ಹೊಟೇಲ್ ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಹೋಟೆಲ್ ಮೇಲ್ಭಾಗದಲ್ಲಿರುವವರು ಸೇಫ್
ಈ ನಡುವೆ, ಧಗಧಗಿಸುವ ಬೆಂಕಿಯ ನಡುವೆ ಹೋಟೆಲ್ ಮೇಲ್ಭಾಗದಲ್ಲಿರುವವರು ಅಪಾಯದಿಂದ ಪಾರಾಗಿದ್ದಾರೆ. ಹೋಟೆಲ್ ಮೇಲ್ಭಾಗದಲ್ಲಿ ಇರುವ ಮನೆಯಲ್ಲಿ ಕೆಲವರು ವಾಸಿಸುತ್ತಿದ್ದು, ಅವರನ್ನು ಬೆಂಕಿ ಕಂಡ ಕೂಡಲೇ ಎಬ್ಬಿಸಿ ಹೊರಗೆ ಕಳಿಸಿದ್ದರಿಂದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ.
ಜನನಿಬಿಢ ಪ್ರದೇಶದಲ್ಲಿರುವ ಹೊಟೆಲ್ ನಲ್ಲಿ ಬೆಳ್ಳಂಬೆಳಗ್ಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು.
ಇದನ್ನೂ ಓದಿ| Fire Accident | ತ್ಯಾಗಿ ಸರ್ಕಲ್ ಪ್ಯಾಲೇಸ್ ಮಾಲ್‌ನಲ್ಲಿ ಅಗ್ನಿ ಅವಘಡ : ಗಾಜಿನ ಸಾಮಗ್ರಿಗಳು ಬೆಂಕಿಗಾಹುತಿ