ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿವಾಸಗಳಿಗೆ ದಾಳಿ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳಿಗೆ ಬುಧವಾರ ತೆರಳಿ ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಸಿಬಿಐ ಅಧಿಕಾರಿಗಳು ಕನಕಪುರ ತಹಶೀಲ್ದಾರ್ ಹಾಗೂ ಪೊಲೀಸರ ಜತೆಗೆ ತೆರಳಿದ್ದರು.
ಡಿ.ಕೆ. ಶಿವಕುಮಾರ್ ಅವರ ಮೇಲಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಅವರು ಒಂದು ವಾರದ ಹಿಂದೆ ದಿಲ್ಲಿಯ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ಎದುರಿಸಿ ಮರಳಿದ್ದರು.
ನನ್ನ ಮೇಲೆ ಸಿಬಿಐಗೆ ಪ್ರೀತಿ ಹೆಚ್ಚಾಗಿರಬೇಕು ಎಂದ ಡಿಕೆಶಿ
ಸಿಬಿಐ ದಾಳಿ ಬಗ್ಗೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಮನೆಯಿಂದ ಕರೆ ಬಂದಿತ್ತು, ನಮ್ಮ ಮನೆ, ತೋಟದ ಮನೆ ಜಮೀನು ಬಳಿ ಸಿಬಿಐ ಅಧಿಕಾರಿಗಳು, ತಹಸೀಲ್ದಾರ್ ಜತೆಗೆ ಹೋಗಿ ಪರಿಶೀಲನೆ ನಡೆಸಿದ್ದಾರಂತೆ. ಅವರಿಗೆ ಮೊದಲೇ ನಾನು ದಾಖಲೆಗಳನ್ನು ಕೊಟ್ಟಿದ್ದೇನೆ. ಆದರೂ ನನ್ನ ಮೇಲೆ ಅವರಿಗೆ ಪ್ರೀತಿ ಹೆಚ್ಚಾಗಿದೆ, ಹೀಗಾಗಿ ಮತ್ತೆ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿಸಿದರು.