ಬೆಂಗಳೂರು: ವಿಧಾನಸಭೆ ಚುನಾವಣೆಗೆ ಚುನಾವಣೆ (Karnataka Election 2023) ಆಯೋಗ ಎಷ್ಟು ಸಿದ್ಧತೆ ಕೈಗೊಳ್ಳುತ್ತಿದೆಯೋ, ಅಷ್ಟೇ ಭರದಲ್ಲಿ ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುತ್ತಿದ್ದಾರೆ. ಅಭಿವೃದ್ಧಿಯ ಕುರಿತು ಜನರಿಗೆ ನೂರಾರು ಭರವಸೆಗಳನ್ನು ನೀಡುವ ಜತೆಗೆ ಹಣ, ಗೃಹೋಪಯೋಗಿ ವಸ್ತುಗಳ ಆಮಿಷವನ್ನೂ ಒಡ್ಡುತ್ತಿದ್ದಾರೆ. ಇದಕ್ಕಾಗಿ, ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಚುನಾವಣೆ ಆಯೋಗ, ಪೊಲೀಸರು ಎಷ್ಟು ಕಟ್ಟೆಚ್ಚರ ವಹಿಸಿದರೂ, ಚುನಾವಣೆಯ ವೇಳೆ ಕುರುಡು ಕಾಂಚಾಣ ಕುಣಿಯುತ್ತಿದೆ. ನೀತಿ ಸಂಹಿತೆ ಜಾರಿಯಾದಾಗಿನಿಂದ ಹಿಡಿದು ಏಪ್ರಿಲ್ 25ರವರೆಗಿನ ಅವಧಿಯಲ್ಲಿ ಪೊಲೀಸರು, ಅಧಿಕಾರಿಗಳು 265 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ನಗದು, ಚಿನ್ನಾಭರಣ, ಬೆಳ್ಳಿ, ಡ್ರಗ್ಸ್, ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಕುರುಡು ಕಾಂಚಾಣದ ಲೆಕ್ಕಾಚಾರ ಹೀಗಿದೆ
ವಿಚಕ್ಷಣ ದಳ, ಪೊಲೀಸ್ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೇರಿ ಹಲವು ತಂಡಗಳು ಕಾರ್ಯಾಚರಣೆ ನಡೆಸಿ ಇದುವರೆಗೆ ಕೋಟ್ಯಂತರ ರೂ. ಮೌಲ್ಯದ ನಗದು, ಮದ್ಯ, ಆಭರಣ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 25ರವರೆಗೆ 88 ಕೋಟಿ ರೂ. ನಗದು, 20.62 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು (ಕುಕ್ಕರ್ ಸೇರಿ ಹಲವು ವಸ್ತುಗಳು), 59.92 ಕೋಟಿ ರೂ. ಮೌಲ್ಯದ ಮದ್ಯ, 17.14 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ಹಾಗೂ 79.47 ಕೋಟಿ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಸೇರಿ 265 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
2,036 ಎಫ್‌ಐಆರ್ ದಾಖಲು
ನಗದು, ಮದ್ಯ, ಮಾದಕದ್ರವ್ಯ, ಬೆಲೆಬಾಳುವ ಲೋಹ (ಚಿನ್ನ ಮತ್ತು ಬೆಳ್ಳಿ)ಗಳನ್ನು ವಶಪಡಿಸಿಕೊಳ್ಳುವ ಜತೆಗೆ ಪೊಲೀಸರು, ವಿಚಕ್ಷಣ ದಳ ಹಾಗೂ ಸ್ಥಿರ ಕಣ್ಗಾವಲು ತಂಡಗಳು ಇದುವರೆಗೆ 2,036 ಎಫ್‌ಐಆರ್ ದಾಖಲಿಸಿವೆ. ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಇದುವರೆಗೆ 69,778 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆ ಅಡಿಯಲ್ಲಿ 5,080 ಪ್ರಕರಣ ದಾಖಲಿಸಲಾಗಿದ್ದು, 13,640 ಜನರ ವಿರುದ್ಧ ಜಾಮೀನುರಹೀತ ವಾರಂಟ್‌ಗಳನ್ನು ಹೊರಡಿಸಲಾಗಿದೆ.
ಇದನ್ನೂ ಓದಿ: Karnataka Election 2023: 80 ವರ್ಷ ದಾಟಿದವರು ಏ.29ರಿಂದ ಮನೆಯಿಂದಲೇ ಮತದಾನ; ಗೌಪ್ಯತೆಗೇನು ಕ್ರಮ?
ರಾಜ್ಯದಲ್ಲಿರುವ ಮತದಾರರ ಕುರಿತು ಕೂಡ ಆಯೋಗ ಮಾಹಿತಿ ನೀಡಿದೆ. ರಾಜ್ಯದಲ್ಲಿ 5,30,85,566 ಸಾಮಾನ್ಯ ಮತದಾರರಿದ್ದು, 47,488 ಸೇವಾ ಮತದಾರರು ಸೇರಿ ಒಟ್ಟು 5,31,33,054 ಮತದಾರರಿದ್ದಾರೆ. ಇವರಲ್ಲಿ ಪುರುಷರು 2,67,28,053 ಇದ್ದರೆ, ಮಹಿಳಾ ಮತದಾರರ ಸಂಖ್ಯೆ 2,64,00,074 ಇದೆ. ಒಟ್ಟು ಮತದಾರರ ಪೈಕಿ 571,281 ವಿಶೇಷ ಚೇತನರಿದ್ದರೆ, 3,35,387 ಪುರುಷರಿದ್ದರೆ, 2,35,833 ಮಹಿಳೆಯರಿದ್ದಾರೆ. ಇತರೆ 61 ಮತದಾರರಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಮತದಾನ ಮಾಡುವವರ ಸಂಖ್ಯೆ 11,71,558 ಇದೆ. ಇವರಲ್ಲಿ 6,45,140 ಯುವಕರಾದರೆ, 5,26,237 ಯುವತಿಯರಾಗಿದ್ದಾರೆ.