ನವದೆಹಲಿ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಪ್ರಾಜೆಕ್ಟ್‌ಗೆ (Hubballi-Ankola rail project) ನೀಡಿದ್ದ ಅನುಮತಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ(National board for Wildlife- NBWL)ಯ ಸ್ಥಾಯಿ ಸಮಿತಿ ತಡೆ ಹಿಡಿಯಲು ನಿರ್ಧರಿಸಿದ್ದು, ಯೋಜನೆ ಜಾರಿಯನ್ನು ಮುಂದಕ್ಕೆ ಹಾಕಿದೆ. ಈ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪರಿಸರ ಹಾನಿಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಕುರಿತು ರೈಲ್ವೆ ಇಲಾಖೆ ಹೊಸ ಪ್ರಸ್ತಾಪ ಸಲ್ಲಿಸುವವರೆಗೂ ಒಪ್ಪಿಗೆ ನೀಡದಿರಲು ನಿರ್ಧರಿಸಿದೆ.
ಎನ್‌ಬಿಡಬ್ಲ್ಯೂಎಲ್‌ನ 73ನೇ ಸ್ಥಾಯಿ ಸಮಿತಿ ಸಭೆಯ ಇತ್ತೀಚೆಗೆ ನಡೆದಿದ್ದು, ಹುಬ್ಬಳ್ಳಿ-ಅಂಕೋಲಾ ರೈಲ್ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡದಿರಲು ನಿರ್ಧರಿಸಲಾಗಿದೆ. ಪರಿಸರವಾದಿಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಲ್ಲದೇ, ಇಡೀ ರೈಲು ಮಾರ್ಗವನ್ನೇ ಕೈ ಬಿಡಬೇಕೆಂದು ಒತ್ತಾಯಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಲ್ಲಾಗುತ್ತಿರುವ ರೀತಿಯಲ್ಲಿ ನಮ್ಮಲ್ಲೂ ನೈಸರ್ಗಿಕ ವಿಕೋಪಕ್ಕೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ನಡುವಿನ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಗೆ ಮಂಡಳಿಯ ನಿರ್ಧಾರವು ಉತ್ತೇಜನ ನೀಡಲಿದೆ. ಈಗಾಗಲೇ ಈ ಭಾಗದಲ್ಲಿ ಘಟ್ಟ ಶ್ರೇಣಿಯು ಸಡಿಲಗೊಂಡಿದ್ದು, ರೈಲು ಪ್ರಾಜೆಕ್ಟ್ ಕೈಗೊಂಡರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಪರಿಸರವಾದಿಗಳು ವಿಶ್ಲೇಷಣೆ ಮಾಡಿದ್ದಾರೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಸುಮಾರು 595 ಎಕರೆ ಅರಣ್ಯ ಬಲಿಯಾಗಲಿದೆ. ಇದರಿಂದ ಸಹಜವಾಗಿಯೇ ಪರಿಸರ ಮೇಲೆ ಪರಿಣಾಮವಾಗಲಿದೆ. ಉದ್ದೇಶಿತ ರೈಲು ಮಾರ್ಗವು ಹುಲಿ ಮತ್ತು ಆನೆ ಕಾರಿಡಾರ್‌ಗಳ ಮೂಲಕ ಹಾದು ಹೋಗುತ್ತದೆ.
ಈ ಸುದ್ದಿಯನ್ನೂ ಓದಿ: ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ; ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಸಿಕ್ಕಿತು ಚಾಲನೆ
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್, ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದ್ಯಕ್ಕೆ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ ಯೋಜನೆಗೆ ನೀಡುವ ಒಪ್ಪಿಗೆಯನ್ನು ಮುಂದಕ್ಕೆ ಹಾಕಲು ನಿರ್ಧರಿಸಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.