ಹುಬ್ಬಳ್ಳಿ: ಇಲ್ಲಿನ ಕಲಘಟಗಿಯಲ್ಲಿ ಸಹೋದರಿಯರಿಬ್ಬರು ಆತ್ಮಹತ್ಯೆ (Hubballi News) ಮಾಡಿಕೊಂಡಿರುವ ಘಟನೆ ನಡೆದಿದೆ. ಕಾವೇರಿ ಹಡಪದ (17), ಭೂಮಿಕಾ ಹಡಪದ (19) ಮೃತ ದುರ್ದೈವಿಗಳಾಗಿದ್ದಾರೆ.
ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮನೆಯಲ್ಲಿ ತಾಯಿ ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಕ್ವಾರಿಯಲ್ಲಿ ಮೆಡಿಕಲ್ ವಿದ್ಯಾರ್ಥಿ ಶವ ಪತ್ತೆ
ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಸಮೀಪವಿರುವ ಕ್ವಾರಿಯಲ್ಲಿ ಮೆಡಿಕಲ್ ವಿದ್ಯಾರ್ಥಿನಿಯ ಶವ ಪತ್ತೆ ಆಗಿದೆ. ದರ್ಶಿನಿ (24) ಮೃತ ದುರ್ದೈವಿ. ಕ್ವಾರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ದರ್ಶಿನಿ ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪಿಡಿಯಾಟ್ರಿಕ್ ವ್ಯಾಸಂಗ ಮಾಡುತ್ತಿದ್ದಳು. ಬಳ್ಳಾರಿ ಮೂಲದ ದರ್ಶಿನಿ ಸ್ನೇಹಿತರಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ವಿದ್ಯಾರ್ಥಿನಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ
ರಾಮನಗರದ ಕನಕಪುರ ತಾಲೂಕಿನ ಅರ್ಕಾವತಿ ಚಿತ್ರಮಂದಿರ ಬಳಿಯ ಕೊಳಚೆ ನೀರು ಹರಿಯುವ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ ಆಗಿದೆ. ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿ, ಕುಡಿದ ಅಮಲಿನಲ್ಲಿ ಕೊಳಚೆ ಮೋರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕನಕಪುರ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Threatening poster: ಅಂಕೋಲಾದಲ್ಲಿ ʼಪಾಕಿಸ್ತಾನ ಕಾಂಟ್ರ್ಯಾಕ್ಟ್ʼ; ತಲೆಗೆ ಹುಳಬಿಟ್ಟ ವಿಚಿತ್ರ ಬರಹ!
ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಸಾವು
ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಕಟಮಾಚನಹಳ್ಳಿ ಕೆರೆಗೆ ಹಾರಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಚಿಂತಾಮಣಿ ನಗರದ ಎನ್.ಆರ್ ಬಡಾವಣೆಯ ಶ್ರೀಧರ್ ಕುಮಾರ್ (37) ಮೃತ ದುರ್ದೈವಿ. ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ